ನವದೆಹಲಿ: ಪ್ರತಿಪಕ್ಷಗಳಿಗೆ ನನ್ನ ಮೇಲೆ ಎಷ್ಟು ದ್ವೇಷವಿದೆ ಎಂಬುದು ಅವರ ಕಿರುಚಾಟದಿಂದಲೇ ಗೊತ್ತಾಗುತ್ತದೆ. ನೀವು ಎಷ್ಟೇ ಕಿರುಚಾಡಬಹುದು ಆದರೆ, ನೀವು ನನ್ನ ಸಮಾಧಿ ತೋಡಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾಜ್ಯಸಭೆಯಲ್ಲಿ ಗುಡುಗಿದರು.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ಪ್ರತಿಪಕ್ಷಗಳ ಕಬ್ರ್ ಖುದೇಗಿ" ಹೇಳಿಕೆ ಉಲ್ಲೇಖಿಸಿ, ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಕಳ್ಳತನವೇ ಅವರ ಅಭ್ಯಾಸ ಎಂದು ವಾಗ್ದಾಳಿ ನಡೆಸಿದರು.
ಆ ಚೋರರು ಗುಜರಾತಿನ ಮಹಾತ್ಮಾ ಗಾಂಧಿಯವರ ಸರ್ ನೇಮ್ ಕದ್ದಿದ್ದಾರೆ ಎಂದು ಗಾಂಧಿ ಕುಟುಂಬವನ್ನು ಕುಟುಕಿದ ಮೋದಿ, ದೇಶವು ಕಾಂಗ್ರೆಸ್‌ನ ಮೊದಲ ಕುಟುಂಬಕ್ಕೆ ದಶಕಗಳಿಂದ ಅವಕಾಶ ನೀಡಿತು. ಆದರೆ ಅವರು 'ಗರೀಬಿ ಹಠಾವೋ' ಎಂಬ ಘೋಷಣೆಗಳ ಮೂಲಕ ಜನರನ್ನು ದಾರಿ ತಪ್ಪಿಸಿದ್ರು ಎಂದು ಕಿಡಿಕಾರಿದರು.
ಇದಕ್ಕೂ ಮುನ್ನಾ ಕೇಂದ್ರ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು ಅವರನ್ನು ದೇಶದ್ರೋಹಿ ಎಂದು ಕರೆದ ರಾಹುಲ್ ಗಾಂಧಿ ವಿರುದ್ಧ ಲೋಕಸಭೆಯಲ್ಲಿ ವಾಗ್ದಾಳಿ ನಡೆಸಿದ ಮೋದಿ, ಅದು ಕಾಂಗ್ರೆಸ್ ಪಕ್ಷದಲ್ಲಿನ ಸಿಖ್ ವಿರೋಧಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದರು. ರಾಜ್ಯಸಭೆಯಲ್ಲಿಯೂ ಈ ಹೇಳಿಕೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ರಾಷ್ಟ್ರಕ್ಕಾಗಿ ತ್ಯಾಗ ಮಾಡಿದ ಸಂಸದರ ಕುಟುಂಬವನ್ನು ಅವಮಾನಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ದ್ವೇಷವನ್ನು ಸ್ವೀಕಾರಾರ್ಹವಲ್ಲ ಎಂದು ಹೇಳಿದರು.
ಒಳನುಸುಳುಕೋರರ ರಕ್ಷಣೆಗಾಗಿ ಟಿಎಂಸಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು. ರಾಜ ಎಂದು ಕರೆದುಕೊಳ್ಳುವ ಸದಸ್ಯರೊಬ್ಬರು ಆರ್ಥಿಕ ಅಸಮಾನತೆಯ ಬಗ್ಗೆ ಚರ್ಚಿಸಿರುವುದು ನನಗೆ ಆಶ್ಚರ್ಯ ತಂದಿದೆ. ಅವರ ಹೃದಯಹೀನ ಸರ್ಕಾರ ತನ್ನ ಜನರ ಭವಿಷ್ಯವನ್ನು ಮುಳುಗಿಸುತ್ತಿದೆ ಎಂಬುದನ್ನು ಟಿಎಂಸಿ ಜನರು ಯೋಚಿಸಬೇಕು. ಅತ್ಯಂತ ಶ್ರೀಮಂತ ದೇಶಗಳು ಸಹ ನುಸುಳುಕೋರರನ್ನು ಹೊರಹಾಕುತ್ತಿವೆ. ಆದರೆ ಭಾರತದಲ್ಲಿ ಜನರು ಮಾತ್ರ ಅವರನ್ನು ರಕ್ಷಿಸಲು ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ. ಇದು ಯುವಕರ ಉದ್ಯೋಗ ಮತ್ತು ಆದಿವಾಸಿಗಳ ಭೂಮಿಯನ್ನು ಕಸಿದುಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಮತ್ತು ಎಡಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅವರ ಸರ್ಕಾರಗಳು ಜನರಿಗಾಗಿ ಕೆಲಸ ಮಾಡುವಲ್ಲಿ ವಿಫಲವಾದಾಗ ತಮ್ಮ ಬೊಕ್ಕಸವನ್ನು ಮಾತ್ರ ತುಂಬಿಸಿಕೊಂಡಿವೆ ಎಂದು ಹೇಳಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಿಡಿಕಾರಿದ ಪ್ರಧಾನಿ ಮೋದಿ, 83 ವರ್ಷ ವಯಸ್ಸಿನವರು ಕಲಾಪಕ್ಕೆ ಅಡ್ಡಿಪಡಿಸುವ ಬದಲು ತಮ್ಮ ವಯಸ್ಸಿಗೆ ಅನುಗುಣವಾಗಿ "ಕುಳಿತುಕೊಳ್ಳಬಹುದು, ಘೋಷಣೆಗಳನ್ನು ಕೂಗಬಹುದು ಎಂದು ಹೇಳಿದರು. ಭಾರತದ ಆರ್ಥಿಕ ಬೆಳವಣಿಗೆ, ವ್ಯಾಪಾರ ಸಾಧನೆಗಳು ಮತ್ತು ಜಾಗತಿಕ ವೇದಿಕೆಯಲ್ಲಿ ರಾಷ್ಟ್ರದ ಸ್ಥಾನಮಾನ ಏರುತ್ತಿರುವುದನ್ನು ವಿವರಿಸಿದರು.
ಇಂದು ಜಗತ್ತು ಹೊಸ ವಿಶ್ವದತ್ತ ಸಾಗುತ್ತಿದೆ. ಈಗ ಜಗತ್ತು ಭಾರತದತ್ತ ವಾಲುತ್ತಿದೆ. ಭಾರತವು ವಿಶ್ವ ಮಿತ್ರ, ವಿಶ್ವ ಬಂಧು ಆಗುತ್ತಿದೆ ಮತ್ತು ನಾವು ವಿವಿಧ ದೇಶಗಳೊಂದಿಗೆ ಪಾಲುದಾರರಾಗುತ್ತಿದ್ದೇವೆ ಎಂದು ತಿಳಿಸಿದ ಪ್ರಧಾನಿ, ಕೆಲವರು ದಣಿದಿದ್ದು, ಸದನದಿಂದ ಹೊರಗೆ ಹೋಗಿದ್ದಾರೆ. ಆದರೆ ಯಾವುದೇ ದೇಶವು ನಮ್ಮೊಂದಿಗೆ ಮೊದಲೇ ಒಪ್ಪಂದ ಮಾಡಿಕೊಳ್ಳಲು ಏಕೆ ಬಯಸಲಿಲ್ಲ ಎಂಬುದನ್ನು ಅವರು ಒಂದು ದಿನ ಉತ್ತರಿಸಬೇಕಾಗುತ್ತದೆ ಎಂದು ವಿಪಕ್ಷಗಳ ಸಭಾತ್ಯಾಗ ಉಲ್ಲೇಖಿಸಿ ವಾಗ್ದಾಳಿ ನಡೆಸಿದರು.