ತಿರುವನಂತಪುರ: ಕೇರಳದ ರಾಜಧಾನಿ ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಯಭೇರಿ ಸಾಧಿಸಿ ಮೇಯರ್ ಹುದ್ದೆಗೇರಿದ ಬಿಜೆಪಿ ಮುಖಂಡರಿಗೆ ಪ್ರಧಾನಿ ನರೇಂದ್ರ ಮೋದಿ ಭಾವನಾತ್ಮಕ ಪತ್ರ ಬರೆದಿದ್ದಾರೆ.
2026ರ ಹೊಸ ವರ್ಷದ ಸುಸಂದರ್ಭದಲ್ಲಿ ಮೇಯರ್ ಆಗಿ ನೇಮಕವಾಗಿರುವ ವಿವಿ ರಾಜೇಶ್ ಹಾಗೂ ಉಪ ಮೇಯರ್ ಆಶಾ ನಾತ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೆಯೇ ಈ ಅಭೂತಪೂರ್ವ ಜಯಕ್ಕೆ ಕಾರಣವಾದ ಸ್ಥಳೀಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕೇರಳದ ಜತೆಗಿನ ನಂಟನ್ನು ಸ್ಮರಿಸಿಕೊಂಡಿರುವ ನರೇಂದ್ರ ಮೋದಿ, ತಿರುವನಂತಪುರಂನೊಂದಿಗಿನ ತಮ್ಮ ನೆನಪನ್ನು ಹಂಚಿಕೊಂಡಿದ್ದಾರೆ. ಪದ್ಮನಾಭ ಸ್ವಾಮಿಯ ಅನುಗ್ರಹ ಪಡೆದಿರುವ ನನಗೆ ಕೇರಳದ ಈ ನೆಲಸ ಮೇಲೆ ವಿಶೇಷ ಅಭಿಮಾನವಿದೆ ಎಂದಿದ್ದಾರೆ.
ಹಾಗೆಯೇ ತಿರುವನಂತಪುರ ನಗರವು ಹಲವಾರು ನಾಯಕರು, ಸಮಾಜ ಸುಧಾರಕರು, ಕಲಾವಿದರು, ಕವಿಗಳು, ಸಂಗೀತಗಾರರು , ಸಾಂಸ್ಕೃತಿಕ ದಿಗ್ಗಜರು, ಸಂತರನ್ನು ಹೊಂದಿರುವ ನಾಡಾಗಿದೆ. ಇಂಥ ನಗರವು ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಿರುವುದು ಹೆಮ್ಮೆಯ ವಿಚಾರ ಎಂದಿದ್ದಾರೆ.
ಕೇರಳ ಹಾಗೂ ದೇಶದ ಅಗಣಿತ ಬಿಜೆಪಿ ಕಾರ್ಯಕರ್ತರ ಪರವಾಗಿ ಈ ಹೆಮ್ಮೆಯ ವಿಚಾರವನ್ನು ಹೇಳಿಕೊಳ್ಳಲು ಖುಷಿಯಾಗುತ್ತದೆ. ತಿರುವನಂತಪುರಂ ಜನತೆಯ ಈ ತೀರ್ಪು ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವ ವಿಚಾರವಾಗಿದೆ ಎಂದು ಮೋದಿ ಹೇಳಿದ್ದಾರೆ.
ದಶಕಗಳ ಕಾಲ ಕೇರಳದಲ್ಲಿನ ಬಿಜೆಪಿ ಕಾರ್ಯಕರ್ತರು ಕಠಿಣ ಹಾದಿಯನ್ನು ಸವೆಸಿ ಬಂದಿದ್ದಾರೆ. ಕೇರಳದ ಎಲ್ಡಿಎಫ್ ಹಾಗೂ ಯುಡಿಎಫ್ ಮೈತ್ರಿಕೂಟದ ದುರಾಡಳಿವನ್ನು ವರ್ಷಗಳ ಕಾಲ ಇಲ್ಲಿನ ಜನರು ನೋಡಿದ್ದಾರೆ.ಇನ್ನೊಂದೆಡೆ ಕೇರಳದ ಸಂಸ್ಕೃತಿಯನ್ನು ನಾಶಪಡಿಸುವ ಪ್ರಯತ್ನವನ್ನು ಈ ಕೂಡ ಮಾಡುವುದರ ಜತೆಗೆ ದುರಾಡಳಿತ ಹಾಗೂ ಭ್ರಷ್ಟಾಚಾರದ ಮೂಲಕ ರಾಜ್ಯದ ಜನತೆಗೆ ಮೋಸ ಮಾಡಿದ್ದಾರೆ.
ಬಿಜೆಪಿ ಸಂಘಟನೆಯ ಮೇಲಿನ ನಿರಂತರ ಹಿಂಸಾಚಾರದ ಬಳಿಕವು ಕಾರ್ಯಕರ್ತರು ಪಕ್ಷಕ್ಕಾಗಿ ಧೈರ್ಯದಿಂದ ಎದೆ ತಟ್ಟಿ ನಿಂತಿದ್ದಾರೆ, ಜನರ ಧ್ವನಿಯಾಗಿ ಪಕ್ಷವ ಬಾವುಟವನ್ನು ಹಿಡಿದು ಧೈರ್ಯದಿಂದ ನಿಂತಿದ್ದಾರೆ ಎಂದು ಮೋದಿ ಕೊಂಡಾಡಿದ್ದಾರೆ. ಇಂದು ಭಾರತ ಮೊದಲು ಎನ್ನುವ ನಮ್ಮ ಸಿದ್ಧಾಂತದೊಂದಿಗೆ ನಿಂತು ಹೋರಾಡಿದ ಹಲವು ಕಾರ್ಯಕರ್ತರು ಇಂದು ನಮ್ಮೊಂದಿಗೆ ಇಲ್ಲ ಆದಾಗ್ಯೂ ಈ ಗೆಲುವು ಅವರಿಗೆ ಖುಷಿ ತರಿಸಲಿದೆ ಎಂದು ಮೋದಿ ಭಾವುಕ ನುಡಿಗಳನ್ನು ಬರೆದಿದ್ದಾರೆ.ಮೋದಿ ಅವರ ಪತ್ರವನ್ನು ರಾಜೇಶ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.