ನವದೆಹಲಿ: ಆಘಾತಕಾರಿ ಬೆಳವಣಿಗೆಯಲ್ಲಿ ಮನೆ ಮುಂದೆ ಬಿಸಿಲು ಕಾಯುತ್ತಿದ್ದ ವೃದ್ಧ ಮಹಿಳೆ ಮೇಲೆ ಕೋತಿಗಳ ಗ್ಯಾಂಗ್ ವೊಂದು ದಾಳಿ ಮಾಡಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಹರ್ಯಾಣದ ಬಹದ್ದೂರ್‌ಗಢದಲ್ಲಿ ಬಾತ್ರಾ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಡಿಸೆಂಬರ್ 26 ರಂದು ಮಧ್ಯಾಹ್ನ 1:45 ರ ಸುಮಾರಿಗೆ ಮನೆಯ ಹೊರಗೆ ಬಿಸಿಲು ಕಾಯುತ್ತಿದ್ದ ವೃದ್ಧೆ ಮಹಿಳೆ ಮೇಲೆ ಕೋತಿಗಳ ಗ್ಯಾಂಗ್ ದಾಳಿ ಮಾಡಿವೆ. ಈ ಸಂದರ್ಭದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೃದ್ಧೆಯು ಮನೆಯ ಮುಂದೆ ಕುರ್ಚಿಯಲ್ಲಿ ಕುಳಿತ್ತಿದ್ದು, ಆ ವೇಳೆ ಕೋತಿಗಳ ಗುಂಪು ಹತ್ತಿರದಲ್ಲಿ ಚಲಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಸ್ಪಲ್ಪ ಸಮಯದ ನಂತರ, ಒಂದು ಕೋತಿ ತಕ್ಷಣ ದೂರ ಸರಿದು, ಮಹಿಳೆಯ ಕಡೆಗೆ ಓಡಿ ಬಂದು ಆಕೆಯ ದೇಹದ ಕೆಳಭಾಗಕ್ಕೆ ಕಚ್ಚುತ್ತದೆ. ಬಳಿಕ ಇಡೀ ಹಿಂಡು ಮಹಿಳೆ ಮೇಲೆ ಎರಗಿ ಆಕೆಯ ತಲೆ, ಕಾಲುಗಳ ಮೇಲೆ ದಾಳಿ ಮಾಡಿದೆ.
ಆತಂಕಗೊಂಡ ಆ ಮಹಿಳೆ ಸ್ವಲ್ಪ ಹೊತ್ತು ಒದ್ದಾಡುತ್ತಿದ್ದಾಗ ಒಂದು ಕೋತಿ ಬಂದು ಆಕೆಯ ತಲೆ ಹಿಡಿದುಕೊಂಡಿದ್ದು, ಬಳಿಕ ತಕ್ಷಣ ಬಿಟ್ಟು ಓಡಿಹೋಗಿದೆ. ಕೋತಿಗಳ ದಾಳಿಯ ಪರಿಣಾಮ ಮಹಿಳೆಗೆ ಮೂರು ಕಡಿತದ ಗಾಯಗಳಾಗಿದ್ದು, ಸ್ಥಳೀಯರು ಆಗಮಿಸುತ್ತಿದ್ದಂತೆಯೇ ಕೋತಿಗಳು ಪಲಾಯನ ಮಾಡಿವೆ.
ಪ್ರಸ್ತುತ ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ
ಕೋತಿಗಳ ಕಾಟಕ್ಕೆ ಬೇಸತ್ತ ಜನ
ಇದಕ್ಕೂ ಮೊದಲು, 2025 ರ ನವೆಂಬರ್‌ನಲ್ಲಿ, ಆಗ್ರಾದಾದ್ಯಂತ ವಿಶೇಷವಾಗಿ ಬಿಜ್ಲಿಘರ್ ಚಕ್ಕಿ ಪ್ಯಾಟ್ ಮತ್ತು ಟ್ರಾನ್ಸ್-ಯಮುನಾ ಪ್ರದೇಶಗಳಲ್ಲಿನ ನಿವಾಸಿಗಳು ಬೆಳೆಯುತ್ತಿರುವ ಕೋತಿಗಳ ಕಾಟದ ಬಗ್ಗೆ ಎಚ್ಚರಿಕೆ ನೀಡಿದ್ದರು. ಹೆಚ್ಚುತ್ತಿರುವ ಬೆದರಿಕೆಯನ್ನು ತಡೆಯಲು ಶಾಶ್ವತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು.
ಕೋತಿಗಳ ಗುಂಪಿನ ದಾಳಿಯ ಸಮಯದಲ್ಲಿ ಎರಡನೇ ಮಹಡಿಯ ಬಾಲ್ಕನಿಯಿಂದ ಬಿದ್ದ ಒಂಬತ್ತು ವರ್ಷದ ಯಶು ಸಾವನ್ನಪ್ಪಿತ್ತು. ಈ ಘಟನೆ ಬಳಿಕ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಘಟನೆಯ ನಂತರ, ಸ್ಥಳೀಯ ಕೌನ್ಸಿಲರ್ ಮೀನಾ ದೇವಿ ಮತ್ತು ಅವರ ಮಗ ರಾಹುಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪುರಸಭೆಗೆ ಔಪಚಾರಿಕ ದೂರು ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ, ನಾಗರಿಕ ಅಧಿಕಾರಿಗಳು ಮಂಗಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಮೂರು ದಿನಗಳಲ್ಲಿ 58 ಮಂಗಗಳನ್ನು ಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.