ಡೆಹ್ರಾಡೂನ್: ಉತ್ತರಾಖಂಡ ಮಹಿಳಾ ಸಬಲೀಕರಣ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ರೇಖಾ ಆರ್ಯ ಅವರ ಪತಿ ಗಿರ್ಧಾರಿ ಲಾಲ್ ಸಾಹು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಹಿಳೆಯರ ಬಗ್ಗೆ ಅತ್ಯಂತ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.
20,000 ರಿಂದ 25,000 ರೂ.ಗಳಿಗೆ ಬಿಹಾರದ ಹುಡುಗಿಯರನ್ನು ಮದುವೆಗೆ “ವ್ಯವಸ್ಥೆ” ಮಾಡಬಹುದು ಎಂದು ಸಾಹು ಜನರಿಗೆ ಹೇಳಿದ್ದಾರೆ. ಈ ಹೇಳಿಕೆಯ ವೀಡಿಯೊ ವೈರಲ್ ಆಗಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಜನಸಮೂಹವನ್ನು ಉದ್ದೇಶಿಸಿ ಮಾತನಾಡುವಾಗ ಸಾಹು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ನೀವು ದೊಡ್ಡ ವಯಸ್ಸಿನಲ್ಲಿ ಮದುವೆಯಾದರೆ, ನಮಗೆ ಈಗಾಗಲೇ ಮೂರರಿಂದ ನಾಲ್ಕು ಮಕ್ಕಳಿದ್ದಾರೆ. ನಾವು ಬಿಹಾರದಿಂದ ಒಬ್ಬ ಹುಡುಗಿಯನ್ನು ಕರೆತರಬಹುದು. ಅಲ್ಲಿ ಹುಡುಗಿಯರು ಇಪ್ಪತ್ತರಿಂದ ಇಪ್ಪತ್ತೈದು ಸಾವಿರ ರೂಪಾಯಿಗಳಿಗೆ ಲಭ್ಯವಿದ್ದಾರೆ.
ನನ್ನೊಂದಿಗೆ ಬನ್ನಿ, ನಾನು ನಿಮ್ಮನ್ನು ಮದುವೆ ಮಾಡಿಸುತ್ತೇನೆ” ಎಂದು ಅವರು ಹೇಳಿದ್ದಾರೆ. ಈ ಹೇಳಿಕೆಗೆ ಮಹಿಳಾ ಗುಂಪುಗಳು ಮತ್ತು ರಾಜಕೀಯ ಪಕ್ಷಗಳಿಂದ, ವಿಶೇಷವಾಗಿ ಕಾಂಗ್ರೆಸ್‌ನಿಂದ ವಿರೋಧ ವ್ಯಕ್ತವಾಗಿದೆ.
ವ್ಯಾಪಕವಾಗಿ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಗಿರ್ಧಾರಿ ಲಾಲ್ ಸಾಹು ಸ್ಪಷ್ಟನೆ ನೀಡಿದ್ದಾರೆ. ಸ್ಥಳೀಯ ನಾಯಕರ ಆಹ್ವಾನದ ಮೇರೆಗೆ ಸೋಮೇಶ್ವರ ಕ್ಷೇತ್ರದ ದೌಲಘಾಟಿ ಪ್ರದೇಶದಲ್ಲಿ ನಡೆದ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿದ್ದಾಗಿ ಅವರು ಹೇಳಿದರು.
ಸ್ನೇಹಿತನ ವಿವಾಹದ ಬಗ್ಗೆ ಚರ್ಚಿಸುವಾಗ ಈ ಹೇಳಿಕೆ ನೀಡಿದ್ದೇನೆ. ವಿರೋಧ ಪಕ್ಷಗಳು ಅದನ್ನು ವಿರೂಪಗೊಳಿಸುತ್ತಿವೆ ಎಂದು ಅವರು ಹೇಳಿದ್ದಾರೆ. ನನ್ನ ಮಾತುಗಳು ಯಾರಿಗಾದರೂ ನೋವುಂಟುಮಾಡಿದ್ದರೆ ನಾನು ಕೈಮುಗಿದು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.