ಜಾನ್ಸಿ: ರೈಲಿನಲ್ಲಿ ಆರ್ಡರ್ ಮಾಡಿದ್ದ ಊಟಕ್ಕೆ ವಿಧಿಸಿದ್ದ ಹೆಚ್ಚುವರಿ ಹಣ ಪ್ರಶ್ನಿಸಿದ್ದಕ್ಕೆ ಪ್ರಯಾಣಿಕನೋರ್ವನನ್ನು ಕೇಟರಿಂಗ್ ಸಿಬ್ಬಂದಿ ಬೆಲ್ಟ್ ಮತ್ತು ದೊಣ್ಣೆಗಳಿಂದ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಝಾನ್ಸಿಯಲ್ಲಿ ಅಂಡಮಾನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದ್ದು, ಮಧ್ಯಪ್ರದೇಶದ ಬಿನಾ ನಿವಾಸಿ 25 ವರ್ಷದ ನಿಹಾಲ್ ಸಿಂಗ್ ಎಂಬುವವರನ್ನು ಝಾನ್ಸಿ ನಿಲ್ದಾಣದಲ್ಲಿ ಕೇಟರಿಂಗ್ ಸಿಬ್ಬಂದಿ ಹಿಗ್ಗಾಮುಗ್ಗ ಥಳಿಸಿದ್ದಾರೆ.
ಅಪ್ಪರ್ ಬರ್ತ್ ನಲ್ಲಿದ್ದ ನಿಹಾಲ್ ಸಿಂಗ್ ರನ್ನು ಕೇಟರಿಂಗ್ ಸಿಬ್ಬಂದಿ ಬೆಲ್ಟ್ ಮತ್ತು ದೊಣ್ಣೆಗಳಿಂದ ಥಳಿಸಿದ್ದಾರೆ. ನಿಹಾಲ್ ಸಿಂಗ್ ತಾವು ಖರೀದಿಸಿದ್ದ ಊಟಕ್ಕೆ 20 ರೂ ಗಳನ್ನು ಹೆಚ್ಚುವರಿಯಾಗಿ ವಿಧಿಸಿದ್ದಾರೆ ಎಂದು ದೂರು ನೀಡಿದ್ದ ಹಿನ್ನಲೆಯಲ್ಲಿ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ.
ಆಗಿದ್ದೇನು?
ಮೂಲಗಳ ಪ್ರಕಾರ ಸಂತ್ರಸ್ಥ ಪ್ರಯಾಣಿಕ ನಿಹಾಲ್ ತನ್ನ ಕುಟುಂಬದೊಂದಿಗೆ ವೈಷ್ಣೋ ದೇವಿ ಕತ್ರಾದಿಂದ ಬಿನಾಗೆ ಹಿಂತಿರುಗುತ್ತಿದ್ದರು. ಈ ವೇಳೆ ಝಾನ್ಸಿ ನಿಲ್ದಾಣದಲ್ಲಿ IRCTC-ಅನುಮೋದಿತ ಮೆನುವಿನಿಂದ 110 ರೂಗೆ ಸ್ಪಷ್ಟವಾಗಿ ಪಟ್ಟಿ ಮಾಡಲಾದ ಸಸ್ಯಾಹಾರಿ ಥಾಲಿ (ಊಟ) ಆರ್ಡರ್ ಮಾಡಿದ್ದರು. ಆದರೆ ಕೇಟರಿಂಗ್ ಸಿಬ್ಬಂದಿ ಇದಕ್ಕೆ 130ರೂ ವಿಧಿಸಿದ್ದರು. ಇದರಿಂದ ಆಕ್ರೋಶಗೊಂಡ ನಿಹಾಲ್ ಇದನ್ನು ಪ್ರಶ್ನಿಸಿದ್ದಾರೆ. ಅಲ್ಲದೆ ಈ ಸಂಬಂಧ ದೂರು ಕೂಡ ನೀಡಿದ್ದಾರೆ.
ಅತ್ತ ದೂರು ದಾಖಲಾಗುತ್ತಲೇ ನಿಹಾಲ್ ವಿರುದ್ಧ ಕೇಟರಿಂಗ್ ಸಿಬ್ಬಂದಿ ಕೆಂಡಾಮಂಡಲರಾಗಿದ್ದಾರೆ. ಕೂಡಲೇ ನಿಹಾಲ್ ಬಳಿ ಹೋಗಿ ಜಗಳ ಮಾಡಿದ್ದಾರೆ. ಈ ವೇಳೆ ಜಗಳ ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿದೆ.
ಬೆಲ್ಟ್ ಮತ್ತು ದೊಣ್ಣೆಗಳಿಂದ ಹಲ್ಲೆ
ಇನ್ನು ಕೇಟರಿಂಗ್ ಸಿಬ್ಬಂದಿ ಜಗಳದಿಂದ ನಿಹಾಲ್ ಕುಟುಂಬಸ್ಥರು ಸಹ ಪ್ರಯಾಣಿಕರು ಭಯಭೀತರಾಗಿದ್ದಾರೆ. ನೋಡ ನೋಡುತ್ತಲೇ ಕೇಟರಿಂಗ್ ಸಿಬ್ಬಂದಿ ರೈಲು ಕಂಪಾರ್ಟ್‌ಮೆಂಟ್‌ನಲ್ಲಿದ್ದ ನಿಹಾಲ್ ಮೇಲೆ ಹಲ್ಲೆ ಮಾಡಿದ್ದಾರೆ. ನಿಹಾಲ್ ಸಿಂಗ್ ರನ್ನು ಕೇಟರಿಂಗ್ ಸಿಬ್ಬಂದಿ ಬೆಲ್ಟ್ ಮತ್ತು ದೊಣ್ಣೆಗಳಿಂದ ಥಳಿಸಿದ್ದಾರೆ. ಸಹ ಪ್ರಯಾಣಿಕರು ಈ ಘಟನೆಯನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ದೂರು ದಾಖಲು
ಬಳಿಕ ನಿಹಾಲ್ ತಮಗಾದ ಗಾಯಗಳನ್ನು ರೈಲ್ವೇ ರಕ್ಷಣಾ ಸಿಬ್ಬಂದಿಗೆ ತೋರಿಸಿದ್ದಾರೆ. ಅಲ್ಲದೆ ನನಗೆ ಸರಿಯಾದ ಮೊತ್ತ ಬೇಕಿತ್ತು; ಅವರು ಪ್ರಾಣಿಗಳಂತೆ ಹಿಂತಿರುಗಿ ನನ್ನನ್ನು ಕರುಣೆಯಿಲ್ಲದೆ ಹೊಡೆದರು ಎಂದು ಹೇಳಿದ್ದಾರೆ. ಝಾನ್ಸಿ GRP ಯಿಂದ ಸಹಾಯ ಕೋರಿದ್ದಾರೆ. ಆದರೆ ತಕ್ಷಣವೇ ಯಾವುದೇ FIR ದಾಖಲಿಸಲಾಗಿಲ್ಲ ಎಂದು ಆರೋಪಿಸಲಾಗಿದೆ.
ಹೆಚ್ಚುವರಿ ಶುಲ್ಕ ಸಮರ್ಥಿಸಿಕೊಂಡ ಕೇಟರಿಂಗ್ ಸಿಬ್ಬಂದಿ
ಇನ್ನು ರೈಲ್ವೇ ಕೇಟರಿಂಗ್ ಸಿಬ್ಬಂದಿ ಹೆಚ್ಚುವರಿ ಶುಲ್ಕವನ್ನು "ಸೇವಾ ಶುಲ್ಕ" ಎಂದು ಸಮರ್ಥಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅದಾಗ್ಯೂ ಇದು "ಅಡುಗೆ ಮಾಫಿಯಾ" ತಂತ್ರಗಳ ಸಾರ್ವಜನಿಕ ಆರೋಪಗಳಿಗೆ ಉತ್ತೇಜನ ನೀಡಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಆದರೆ 2025ರ ಅಂತ್ಯದ ವೇಳೆಗೆ ಯಾವುದೇ ಅಧಿಕೃತ IRCTC ಹೇಳಿಕೆಗಳಲ್ಲಿ ಈ ಸಂಬಂಧ ಬಂಧನಗಳು ಅಥವಾ ತನಿಖೆಗಳ ನವೀಕರಣಗಳು ಸಾರ್ವಜನಿಕವಾಗಿ ಹೊರಬಂದಿಲ್ಲ.
ಮೂಲಗಳ ಪ್ರಕಾರ ಈ ಘಟನೆ 2025 ರ ಅಕ್ಟೋಬರ್ 25 ರಂದು ನಡೆದಿದೆ ಎನ್ನಲಾಗಿದ್ದು, ಇದೀಗ ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.