ಗುವಾಹಟಿ (ಅಸ್ಸಾಂ): ಅಸ್ಸಾಂನ ಮಧ್ಯ ಭಾಗದ ಪ್ರದೇಶಗಳಲ್ಲಿ ಸೋಮವಾರ ಬೆಳಗ್ಗೆ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆ ದಾಖಲಾಗಿದೆ.
ಈ ಭೂಕಂಪದಿಂದ ಯಾವುದೇ ಪ್ರಾಣಾಪಾಯ ಅಥವಾ ಆಸ್ತಿನಷ್ಟದ ಬಗ್ಗೆ ಯಾವುದೇ ವರದಿಗಳಾಗಿಲ್ಲ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ವರದಿ ಪ್ರಕಾರ, ಬೆಳಿಗ್ಗೆ 4.17ಕ್ಕೆ ಬ್ರಹ್ಮಪುತ್ರ ನದಿಯ ದಕ್ಷಿಣ ದಡದಲ್ಲಿರುವ ಮೋರಿಗಾಂ ಜಿಲ್ಲೆಯಲ್ಲಿ ಭೂಕಂಪ ದಾಖಲಾಗಿದ್ದು, 50 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ.
ಭೂಕಂಪದ ಕೇಂದ್ರಬಿಂದು ಮಧ್ಯ ಅಸ್ಸಾಂನಲ್ಲಿ 26.37 ಉತ್ತರ ಅಕ್ಷಾಂಶ ಮತ್ತು 92.29 ಪೂರ್ವ ರೇಖಾಂಶದಲ್ಲಿದೆ ಎಂದು ತಿಳಿಸಿದೆ.
ಮೋರಿಗಾಂವ್ ಜಿಲ್ಲೆಯ ನೆರೆಯ ಕಾಮ್ರೂಪ್ ಮೆಟ್ರೋಪಾಲಿಟನ್, ನಾಗಾಂವ್, ಪೂರ್ವ ಕರ್ಬಿ ಆಂಗ್ಲಾಂಗ್, ಪಶ್ಚಿಮ ಕರ್ಬಿ ಆಂಗ್ಲಾಂಗ್, ಹೊಜೈ, ದಿಮಾ ಹಸಾವೊ, ಗೋಲಾಘಾಟ್, ಜೋರ್ಹತ್, ಶಿವಸಾಗರ್, ಚರೈಡಿಯೊ, ಕ್ಯಾಚಾರ್, ಕರೀಮ್‌ಗಂಜ್, ಹೈಲಕಂಡಿ, ಧುಬ್ರಿ, ದಕ್ಷಿಣ ಸಲ್ಮಾರಾ-ಮಂಕಚಾರ್ ಮತ್ತು ಗೋಲ್‌ಪಾರಾ ಜಿಲ್ಲೆಗಳಲ್ಲಿನ ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.
ಬ್ರಹ್ಮಪುತ್ರ ನದಿಯ ಉತ್ತರ ದಡದಲ್ಲಿರುವ ದಾರಾಂಗ್, ತಮಲ್ಪುರ್, ಸೋನಿತ್ಪುರ್, ಕಾಮರೂಪ್, ಬಿಸ್ವನಾಥ್, ಉದಾಲ್ಗುರಿ, ನಲ್ಬಾರಿ, ಬಾಜಾಲಿ, ಬರ್ಪೇಟಾ, ಬಕ್ಸಾ, ಚಿರಾಂಗ್, ಕೊಕ್ರಜಾರ್, ಬೊಂಗೈಗಾಂವ್ ಮತ್ತು ಲಖಿಂಪುರ್ ಜಿಲ್ಲೆಗಳಲ್ಲೂ ಭೂಕಂಪದ ಕಂಪನಗಳು ಅನುಭವವಾಗಿವೆ.
ಮಧ್ಯ-ಪಶ್ಚಿಮ ಅರುಣಾಚಲ ಪ್ರದೇಶದ ಕೆಲವು ಭಾಗಗಳು, ಸಂಪೂರ್ಣ ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ ಹಾಗೂ ಪಶ್ಚಿಮ ಬಂಗಾಳದ ಹಲವು ಪ್ರದೇಶಗಳಲ್ಲೂ ಭೂಕಂಪದ ಅನುಭವವಾಗಿದೆ.
ಇದಲ್ಲದೆ ನೆರೆ ದೇಶಗಳಾದ ಭೂತಾನ್, ಚೀನಾ ಮತ್ತು ಬಾಂಗ್ಲಾದೇಶದ ಕೆಲವು ಪ್ರದೇಶಗಳಲ್ಲೂ ಭೂ ಕಂಪನಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ.
ಭೂಕಂಪದ ತೀವ್ರತೆಯಿಂದ ಭಯಗೊಂಡ ಜನರು ನಿದ್ರೆಯಿಂದ ಎದ್ದು ತಮ್ಮ ಮನೆಗಳಿಂದ ಹೊರಬಂದು ಸುರಕ್ಷಿತ ಪ್ರದೇಶಗಳತ್ತ ಓಡಿದ್ದಾರೆ.