ಪುಣೆ: ಹಿರಿಯ ಪರಿಸರ ವಿಜ್ಞಾನಿ ಮಾಧವ ಧನಂಜಯ ಗಾಡ್ಗೀಳ್ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಪಶ್ಚಿಮ ಘಟ್ಟಗಳ ಸಂರಕ್ಷಣಾ ವರದಿಯನ್ನು ರಚಿಸಿದ್ದ ಪರಿಸರವಾದಿ ಮತ್ತು ಬರಹಗಾರ ಡಾ. ಮಾಧವ ಗಾಡ್ಗೀಳ್ ಅವರು ಅನಾರೋಗ್ಯದಿಂದ ಬುಧವಾರ ರಾತ್ರಿ ಪುಣೆಯ ಪ್ರಯಾಗ್ ಆಸ್ಪತ್ರೆಯಲ್ಲಿ (Pune) ನಿಧನರಾದರು. ಇಂದು ಸಂಜೆ ಪುಣೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
1942 ಮೇ 24 ರಂದು ಪುಣೆಯಲ್ಲಿ ಜನಿಸಿದ ಮಾಧವ ಗಾಡ್ಗೀಳ್ ಅವರು ಪುಣೆಯ ಫರ್ಗುಸನ್ ಕಾಲೇಜಿನಿಂದ ಬಿಎಸ್ಸಿ (ಪ್ರಾಣಿಶಾಸ್ತ್ರ) ಪದವಿ ಪಡೆದು 1965 ರಲ್ಲಿ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಎಂಎಸ್ಸಿ ಪಡೆದು 1969 ರಲ್ಲಿ ಹಾರ್ವರ್ಡ್‌ನಿಂದ ಜೀವಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದರು.
ಭಾರತಕ್ಕೆ 1971 ರಲ್ಲಿ ಮರಳಿದ ಬಳಿಕ 1973 ರಲ್ಲಿ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಸೇರಿ 2004 ರಲ್ಲಿ ಅಧ್ಯಕ್ಷರಾಗುವ ಮೂಲಕ ಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಪರಿಸರ ಶಾಸ್ತ್ರಜ್ಞ, ಬರಹಗಾರ ಹಾಗೂ ಅಂಕಣಕಾರರಾಗಿ ಗುರುತಿಸಿಕೊಂಡಿದ್ದ ಗಾಡ್ಗೀಳ್ ಅವರು, ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಮಾಜಿ ಸದಸ್ಯರಾಗಿದ್ದರು ಮತ್ತು 2010 ರ ಪಶ್ಚಿಮ ಘಟ್ಟಗಳ ಪರಿಸರ ವಿಜ್ಞಾನ ತಜ್ಞರ ಸಮಿತಿ ಮುಖ್ಯಸ್ಥರಾಗಿದ್ದರು. ಇವರು ಅಧ್ಯಯನ ನಡೆಸಿ ತಯಾರಿಸಿದ್ದ ವರದಿಯನ್ನು ಗಾಡ್ಗೀಳ್ ಆಯೋಗದ ವರದಿ ಎಂದೇ ಕರೆಯಲಾಗುತ್ತಿತ್ತು.
ಪರಿಸರ ಕ್ಷೇತ್ರದಲ್ಲಿನ ಸಾಧನೆಗಾಗಿ ಗಾಡ್ಗೀಳ್ ಅವರಿಗೆ ವೋಲ್ವೋ, ಟೈಲರ್ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಭಾರತ ಸರ್ಕಾರ 1981 ರಲ್ಲಿ ಅವರಿಗೆ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. 2006 ರಲ್ಲಿ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ನೀಡಿತು. 2024 ರಲ್ಲಿ ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿಯನ್ನು ಪಡೆದಿದ್ದರು.