ಕೋಲ್ಕತಾ: ಜಾರಿ ನಿರ್ದೇಶನಾಲಯ(ED) ಮತ್ತು ತೃಣಮೂಲ ಕಾಂಗ್ರೆಸ್ ನಡುವಿನ ಘರ್ಷಣೆ ಶುಕ್ರವಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹಿರಿಯ ಪೊಲೀಸ್ ಅಧಿಕಾರಿಗಳು ಕೋಲ್ಕತ್ತಾದ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್ ಕಚೇರಿ ಮೇಲಿನ ದಾಳಿ "ತಡೆದಿದ್ದಾರೆ" ಎಂದು ಆರೋಪಿಸಿದೆ. ಅಲ್ಲದೆ ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಇಡಿ ಕಲ್ಕತ್ತಾ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.
ಪಿಟಿಐಗೆ ಲಭ್ಯವಾದ ಇಡಿ ರಿಟ್ ಅರ್ಜಿಯಲ್ಲಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ಎ) ಅಡಿಯಲ್ಲಿ ಗುರುವಾರ ನಡೆಸಿದ ಶೋಧ ಕಾರ್ಯಾಚರಣೆ ಸಮಯದಲ್ಲಿ, ಸಿಎಂ ತಮ್ಮ ಸಾಂವಿಧಾನಿಕ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಐ-ಪ್ಯಾಕ್ ಮುಖ್ಯಸ್ಥರ ನಿವಾಸ ಪ್ರವೇಶಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಮತಾ ಬ್ಯಾನರ್ಜಿ ಅವರು ಡಿಜಿಟಲ್ ಸಾಧನಗಳು, ಎಲೆಕ್ಟ್ರಾನಿಕ್ ದಾಖಲೆಗಳು ಸೇರಿದಂತೆ ಪ್ರಮುಖ ಸಾಕ್ಷ್ಯಗಳನ್ನು ಕದ್ದೊಯ್ದಿದ್ದು, "ತಕ್ಷಣ ವಶಪಡಿಸಿಕೊಳ್ಳಲು, ವಿಧಿವಿಜ್ಞಾನ ಸಂರಕ್ಷಣೆ ಮತ್ತು ಕಾನೂನುಬದ್ಧ ಕಸ್ಟಡಿಗೆ ನೀಡುವಂತೆ" ನಿರ್ದೇಶನ ನೀಡಬೇಕು ಎಂದು ಇಡಿ ಕೋರಿದೆ.
ಕಲ್ಲಿದ್ದಲು ಕಳ್ಳಸಾಗಣೆ-ಸಂಬಂಧಿತ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐ-ಪಿಎಸಿಯ ಸಾಲ್ಟ್ ಲೇಕ್ ಸೆಕ್ಟರ್ 5 ಕಚೇರಿ ಮತ್ತು ಕೋಲ್ಕತ್ತಾದಲ್ಲಿರುವ ಅದರ ನಿರ್ದೇಶಕ ಪ್ರತೀಕ್ ಜೈನ್ ಅವರ ಲೌಡನ್ ಸ್ಟ್ರೀಟ್ ನಿವಾಸ ಸೇರಿದಂತೆ ದೆಹಲಿಯ ನಾಲ್ಕು ಆವರಣಗಳಲ್ಲಿ ಶೋಧ ನಡೆಸಲಾಯಿತು. ಪಶ್ಚಿಮ ಬಂಗಾಳದಲ್ಲಿ ಕಲ್ಲಿದ್ದಲು ಕಳ್ಳತನದಿಂದ ಉತ್ಪತ್ತಿಯಾಗುವ ಸುಮಾರು 20 ಕೋಟಿ ರೂ. ಹವಾಲಾ ಹಣವನ್ನು ಐ-ಪಿಎಸಿಗೆ ರವಾನಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ, ಇದು 2021 ರಿಂದ ಟಿಎಂಸಿಗೆ ರಾಜಕೀಯ ಸಲಹಾ ಸೇವೆಗಳನ್ನು ಒದಗಿಸುತ್ತಿದೆ.
ದಾಳಿಯಲ್ಲಿ ಮಧ್ಯಪ್ರವೇಶಿಸದಂತೆ ನಮ್ಮ ವಿನಂತಿಯ ಹೊರತಾಗಿಯೂ, ಮುಖ್ಯಮಂತ್ರಿ ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿ ಪ್ರಮುಖ ಅಪರಾಧ ದಾಖಲೆಗಳು ಹಾಗೂ ಎಲೆಕ್ಟ್ರಾನಿಕ್ ಸಾಧನಗಳನ್ನು "ಬಲವಂತವಾಗಿ ವಶಪಡಿಸಿಕೊಂಡರು" ಮತ್ತು ನಂತರ I-PAC ಕಚೇರಿಯಲ್ಲಿಯೂ ಅದೇ ಕ್ರಮವನ್ನು ಪುನರಾವರ್ತಿಸಿದರು ಎಂದು ಇಡಿ ಆರೋಪಿಸಿದೆ.
ವಶಪಡಿಸಿಕೊಂಡ ಡೇಟಾ ಪಡೆಯುವುದು, ಅಳಿಸುವುದು ಅಥವಾ ತಿರುಚುವುದನ್ನು ತಡೆಯಲು ತಕ್ಷಣ ಮಧ್ಯಂತರ ಆದೇಶ ನೀಡಬೇಕು ಎಂದು ED ಕೋರಿದೆ.
2026 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮುಕ್ತ ಮತ್ತು ನ್ಯಾಯಯುತ ಚುನಾವಣಾ ಪ್ರಕ್ರಿಯೆಗೆ ಅಡ್ಡಿಪಡಿಸುವ ದುರುದ್ದೇಶಪೂರಿತ ಉದ್ದೇಶದಿಂದ ಕೇಂದ್ರ ತನಿಖಾ ಸಂಸ್ಥೆ ಈ ರೀತಿ ವರ್ತಿಸುತ್ತಿದೆ ಎಂದು ಟಿಎಂಸಿ ಆರೋಪಿಸಿದೆ. ಇದು ಸಂವಿಧಾನದ 19 ಮತ್ತು 21ನೇ ವಿಧಿಗಳ ಅಡಿಯಲ್ಲಿ ತನ್ನ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಎಂದು ಟಿಎಂಸಿ ಹೇಳಿದೆ.