ಥಾಣೆ: ದಿನಕ್ಕೊಂದು ರೀತಿಯ ಬೆಳವಣಿಗೆಗಳಿಂದ ಮಹಾರಾಷ್ಟ್ರ ರಾಜಕೀಯ ಗಮನ ಸೆಳೆಯುತ್ತಿದೆ. ಇದೀಗ ಮತ್ತೊಂದು ಟ್ವೀಸ್ಟ್ ನಲ್ಲಿ ಅಂಬರ್ ನಾಥ್ ನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ NCP ಮತ್ತೋರ್ವ ಪಕ್ಷೇತರ ಅಭ್ಯರ್ಥಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಯತ್ನಿಸುತ್ತಿವೆ.
ಥಾಣೆ ಜಿಲ್ಲೆಯ ಅಂಬರ್‌ನಾಥ್ ಸ್ಥಳೀಯ ಸಂಸ್ಥೆಯಲ್ಲಿ ಅಧಿಕಾರ ಹಿಡಿಯುವ ಪ್ರಯತ್ನದಲ್ಲಿ ತಮ್ಮ ಪಕ್ಷ, ಎನ್‌ಸಿಪಿ ಮತ್ತು ಓರ್ವ ಪಕ್ಷೇತರ ಅಭ್ಯರ್ಥಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ಶಿವಸೇನೆಯ ಹಿರಿಯ ಸ್ಥಳೀಯ ನಾಯಕರೊಬ್ಬರು ಖಚಿತಪಡಿಸಿದ್ದಾರೆ.
ಈ ಹೊಸ ಮೈತ್ರಿ ರಚನೆ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅಮಾನತುಗೊಂಡ 12 ಕಾಂಗ್ರೆಸ್ ಕೌನ್ಸಿಲರ್‌ಗಳು ಬಿಜೆಪಿ ಸೇರಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.
ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದಲ್ಲಿ ಸೇನೆ ಮತ್ತು ಎನ್‌ಸಿಪಿ ಎರಡೂ ಮಿತ್ರಪಕ್ಷಗಳಾಗಿವೆ. ಈ ಬೆಳವಣಿಗೆ ಕಾಂಗ್ರೆಸ್ ಕೌನ್ಸಿಲರ್ ಗಳನ್ನು ಸೇರಿಸಿಕೊಂಡು ಅಧಿಕಾರ ಹಿಡಿಯಲು ಹವಣಿಸುತ್ತಿದ್ದ ಬಿಜೆಪಿಯನ್ನು ಅಸಮಾಧಾನಗೊಳಿಸಿದೆ ಎಂದು ಅವರು ಹೇಳಿದ್ದಾರೆ. NCP ನಾಯಕರೊಬ್ಬರು ಕೂಡ ಈ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ.
ಡಿಸೆಂಬರ್ 20 ರ ಸ್ಥಳೀಯ ಚುನಾವಣೆಯ ನಂತರ ಮುನ್ಸಿಪಲ್ ಕೌನ್ಸಿಲ್ ನಲ್ಲಿ ಶಿವಸೇನಾ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಬಿಜೆಪಿ 'ಅಂಬರ್ ನಾಥ್ ವಿಕಾಸ್ ಆಘಾಡಿ' ಹೆಸರಲ್ಲಿ ಕಾಂಗ್ರೆಸ್ ಕೌನ್ಸಿಲರ್ ಗಳನ್ನು ಸೇರಿಸಿಕೊಂಡು ಅಧಿಕಾರ ಹಿಡಿಯಲು ಯತ್ನಿಸಿತ್ತು. ಇದರಲ್ಲಿ ಅಜಿತ್ ಪವಾರ್ ಅವರ ಎನ್ ಸಿಪಿ ಕೂಡಾ ಇತ್ತು.
60 ಸದಸ್ಯರ ಸ್ಥಳೀಯ ಸಂಸ್ಥೆಯಲ್ಲಿ AVA 31 ಸ್ಥಾನಗಳಲ್ಲಿ ಬಹುಮತವನ್ನು ಪಡೆದೆದಿದ್ದರೆ, ಶಿವಸೇನೆ 27, ಬಿಜೆಪಿ 14, ಕಾಂಗ್ರೆಸ್ 12, ಎನ್‌ಸಿಪಿ 4, ಇಬ್ಬರು ಸ್ವತಂತ್ರ ಅಭ್ಯರ್ಥಿಗಳೂ ಆಯ್ಕೆಯಾಗಿದ್ದಾರೆ. ಈಗ ಓರ್ವ ಸ್ವತಂತ್ರ ಅಭ್ಯರ್ಥಿ ಬೆಂಬಲದೊಂದಿಗೆ ಶಿವಸೇನಾ-ಎನ್ ಸಿಪಿ ಬಲವೂ 32ಕ್ಕೆ ಏರಿದೆ.