ಪುಣೆ: ಬಹುತೇಕ ರಾಜಕೀಯ ಪಕ್ಷಗಳು ತಮ್ಮ ತತ್ವ- ಸಿದ್ಧಾಂತ, ಬದ್ಧತೆಯನ್ನು ಸಂಪೂರ್ಣ ಮರೆತಿದ್ದು, ಅಧಿಕಾರಕ್ಕಾಗಿ ವಿಭಿನ್ನ ತಂತ್ರಗಳನ್ನು ಆಶ್ರಯಿಸುತ್ತಿವೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಶುಕ್ರವಾರ ಕಳವಳ ಪರೋಕ್ಷವಾಗಿ ಮಿತ್ರ ಪಕ್ಷ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಅಜಿತ್ ಪವಾರ್ ಅವರು ಪುಣೆ ಮತ್ತು ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಸ್ಥಳೀಯ ಬಿಜೆಪಿ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸಿದರು. ಪಕ್ಷಾಂತರ ವಿಪರೀತವಾಗಿವೆ, ನಾಯಕರಿಗೆ ಆಮಿಷವೊಡ್ಡಲಾಗುತ್ತಿದೆ ಅಥವಾ ಬಲವಂತವಾಗಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
"ಇತ್ತೀಚೆಗೆ, ರಾಜಕೀಯ ಪಕ್ಷಗಳು ತಮ್ಮ ತತ್ವ- ಸಿದ್ಧಾಂತಗಳನ್ನು ಬಹುತೇಕ ತ್ಯಜಿಸಿವೆ. ರಾಜಕೀಯ ನಾಯಕರು ಯಾವ ಪಕ್ಷಕ್ಕೆ ಬೇಕಾದರೂ ಹೋಗಿ ಅವರು ಏನು ಬೇಕಾದರೂ ಮಾಡುತ್ತಿದ್ದಾರೆ" ಎಂದು ಪವಾರ್ ಹೇಳಿದರು.
ಕೆಲವು ನಾಯಕರನ್ನು ಆಮಿಷಗಳ ಮೂಲಕ ಬೇಟೆಯಾಡಲಾಗುತ್ತಿದೆ, ಇತರರಿಗೆ ಅವರ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ಎತ್ತಿ ತೋರಿಸುವ ಮೂಲಕ ಮತ್ತು ತಮ್ಮ ಪಕ್ಷಕ್ಕೆ ಸೇರಿದ ನಂತರ ತನಿಖಾ ಸಂಸ್ಥೆಗಳನ್ನು ನಿರ್ವಹಿಸಲಾಗುವುದು ಎಂಬ ಭರವಸೆ ನೀಡುವ ಮೂಲಕ ಒತ್ತಡ ಹೇರಲಾಗುತ್ತಿದೆ ಎಂದು ಮಹಾರಾಷ್ಟ್ರ ಡಿಸಿಎಂ ಆರೋಪಿಸಿದರು.
ರಾಜಕೀಯ ಕ್ಷೇತ್ರದಲ್ಲಿ ಹಣ ಮತ್ತು ತೋಳ್ಬಲವನ್ನು ಬಹಿರಂಗವಾಗಿ ಬಳಸಲಾಗುತ್ತಿದೆ ಎಂದು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ(ಎನ್‌ಸಿಪಿ) ಮುಖ್ಯಸ್ಥರೂ ಆಗಿರುವ ಪವಾರ್ ಹೇಳಿದರು.
"ಹಣ ಮತ್ತು ತೋಳ್ಬಲ ಹೊಂದಿರುವವರು ಇದನ್ನು ಬಳಸುತ್ತಿದ್ದಾರೆ. ಜಾತಿ ವಿಷಯ ಎತ್ತಿ ತೋರಿಸುವ ಮೂಲಕ ಮತಗಳನ್ನು ಪಡೆಯಬಹುದು ಎಂದು ಭಾವಿಸುವವರು ಆ ತಂತ್ರವನ್ನು ಅನುಸರಿಸುತ್ತಿದ್ದಾರೆ" ಎಂದು ಪವಾರ್ ಅವರು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಆಗಾಗ್ಗೆ ಪಕ್ಷಾಂತರ ಮಾಡುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಮಹಾರಾಷ್ಟ್ರದ ಮೊದಲ ಮುಖ್ಯಮಂತ್ರಿ ಯಶವಂತರಾವ್ ಚವಾಣ್ ಅವರ ರಾಜಕೀಯವನ್ನು ಶ್ಲಾಘಿಸಿದ ಅಜಿತ್ ಪವಾರ್, "ಅವರು ವಿರೋಧ ಪಕ್ಷದ ನಾಯಕರಿಗೂ ಸಮಾನ ಗೌರವವನ್ನು ನೀಡುತ್ತಿದ್ದರು. ಆ ವ್ಯಕ್ತಿ ವಿರೋಧ ಪಕ್ಷದವರೇ ಎಂದು ಯೋಚಿಸದೆ ಅವರು ಹಣವನ್ನು ವಿತರಿಸುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ, ಒಂದು ರೀತಿಯ ಸೇಡಿನ ರಾಜಕೀಯ ನುಸುಳಿದೆ. ಇದು ಆಗಬಾರದು" ಎಂದರು.