ಕೊರ್ಬಾ: ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ಪೊಲೀಸರ ತುರ್ತು ಪ್ರತಿಕ್ರಿಯೆ ಸೇವಾ ವಾಹನದ ಚಾಲಕ ಸೇರಿದಂತೆ ಐವರು 19 ವರ್ಷದ ಯುವತಿ ಮೇಲೆ ಸಾಮೂಹಿತ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಡಯಲ್ 112 ಪೊಲೀಸ್ ಸಹಾಯವಾಣಿ ವಾಹನದ ಚಾಲಕ ಸೇರಿದಂತೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 8 ರಂದು ರಾತ್ರಿ ಬಂಕಿಮೊಂಗ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತೆಗೆ ಪರಿಚಿತವಾಗಿರುವ ಐದು ಆರೋಪಿಗಳಲ್ಲಿ ಒಬ್ಬರು ಆಕೆಗೆ ಕರೆ ಮಾಡಿದ್ದಾರೆ. ಬಳಿಕ ಯುವತಿಯನ್ನು ಬಂಕಿಮೊಂಗ್ರಾದಲ್ಲಿರುವ ನಿರ್ಜನ ಮನೆಗೆ ಕರೆದೊಯ್ದು, ಚಾಲಕ ಮತ್ತು ಇತರ ನಾಲ್ವರು ಸರದಿಯಂತೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಘಟನೆಯ ನಂತರ, ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಸಂತ್ರಸ್ತೆಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಟ್ಟು ಹೋಗಿದ್ದಾರೆ. ನಂತರ ಸಂತ್ರಸ್ತೆ ತನ್ನ ಮನೆಗೆ ತಲುಪಿ ತನ್ನ ಕುಟುಂಬ ಸದಸ್ಯರಿಗೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಅವರು ತಕ್ಷಣ ಆಕೆಯನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದು, ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಮೊದಲು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಶೂನ್ಯ ಎಫ್‌ಐಆರ್ ದಾಖಲಿಸಲಾಯಿತು. ನಂತರ ಹೆಚ್ಚಿನ ತನಿಖೆಗಾಗಿ ಬಂಕಿಮೊಂಗ್ರಾ ಪೊಲೀಸ್ ಠಾಣೆಗೆ ಕೇಸ್ ವರ್ಗಾಯಿಸಲಾಯಿತು ಎಂದು ಅವರು ಹೇಳಿದರು.