ನವದೆಹಲಿ: ಮಕರ ಸಂಕ್ರಾಂತಿಗೆ ಮತ್ತೊಂದು ಹೊಸ ದಾಖಲೆ ಬರೆಯಲು ಪ್ರಧಾನಿ ನರೇಂದ್ರ ಮೋದಿ ಸಜ್ಜಾಗಿದ್ದಾರೆ. 1947ರಲ್ಲಿ ಭಾರತ ಸ್ವಾತಂತ್ರ್ಯ ಸಿಕ್ಕ ಬಳಿಕ ಇದೇ ಮೊದಲ ಬಾರಿಗೆ ದೇಶದ ಪ್ರಧಾನಿ ಕಚೇರಿ ಬದಲಾಗುತ್ತಿದೆ. ಹೌದು.ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಸೇರಿದಂತೆ ನಂತರದ ಎಲ್ಲಾ ಪ್ರಧಾನಿಗಳು ಸೌತ್ ಬ್ಲಾಕ್ ಕಚೇರಿಯಲ್ಲೇ ಕಾರ್ಯನಿರ್ವಹಿಸಿದ್ದಾರೆ.
ಮೂರನೇ ಬಾರಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಕೂಡ ಇದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಇದೀಗ ನರೇಂದ್ರ ಮೋದಿ ಮೋದಿಯವರ ಹೊಸ ಕಚೇರಿ ಸಿದ್ಧವಾಗಿದ್ದು, ಈ ವಾರ ಮಕರ ಸಂಕ್ರಾಂತಿ ದಿನವಾದ ಜನವರಿ 14 ರಂದು ಅಲ್ಲಿಗೆ ಸ್ಥಳಾಂತರಗೊಳ್ಳಲಿದ್ದಾರೆ.
ಸೇವಾ ತೀರ್ಥ ಸಂಕೀರ್ಣ: ಕೇಂದ್ರ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ಪ್ರಧಾನಿಯ ಹೊಸ ಕಚೇರಿ 'ಸೇವಾ ತೀರ್ಥ' ಸಂಕೀರ್ಣವನ್ನು ನಿರ್ಮಿಸಲಾಗಿದೆ. ಪ್ರಧಾನಿ ಕಚೇರಿ, ಕ್ಯಾಬಿನೆಟ್ ಸೆಕ್ರೆಟರಿಯೇಟ್ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯ ಸೆಕ್ರೆಟರಿಯೇಟ್ (NSCS) ಕೊಠಡಿ ಇರುವಂತೆ ನೂತನ ಕಾಂಪ್ಲೆಕ್ಸ್ ನಿರ್ಮಿಸಲಾಗಿದ್ದು, ಅವುಗಳಲ್ಲಿ ಪ್ರತಿಯೊಂದಕ್ಕೂ ಪ್ರತ್ಯೇಕ ಕಟ್ಟಡವಿದೆ.
ಪ್ರಧಾನಿ ಕಚೇರಿ ಇರುವ ಕಟ್ಟಡಕ್ಕೆ 'ಸೇವಾ ತೀರ್ಥ-1' ಎಂದು ಹೆಸರಿಸಲಾಗಿದೆ. ಸೇವಾ ಥೀಮ್ ನಲ್ಲಿಅತ್ಯಾಧುನಿಕ ಕೊಠಡಿಗಳು ಸೇರಿದಂತೆ ವಿಶಾಲವಾದ ಪ್ರದೇಶವನ್ನು ಇದು ಒಳಗೊಂಡಿದೆ.
ಯುಗೇ ಯುಗೇನ್ ಭಾರತ್ ಮ್ಯೂಸಿಯಂ: 'ಸೇವಾ ತೀರ್ಥ 2ರಲ್ಲಿ ಈಗಾಗಲೇ ಕ್ಯಾಬಿನೆಟ್ ಸೆಕ್ರೆಟರಿಯೇಟ್ ಇದೆ. 'ಸೇವಾ ತೀರ್ಥ-3' ರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರ ಕಚೇರಿ ಇರುತ್ತದೆ. ಪ್ರಧಾನಿ ಕಚೇರಿ ಸ್ಥಳಾಂತರಗೊಂಡ ನಂತರ ದಕ್ಷಿಣ ಮತ್ತು ಉತ್ತರ ಬ್ಲಾಕ್‌ಗಳನ್ನು ಸಾರ್ವಜನಿಕ ವಸ್ತುಸಂಗ್ರಹಾಲಯವಾಗಿ 'ಯುಗೇ ಯುಗೇನ್ ಭಾರತ್ ಸಂಗ್ರಹಾಲಯ' (Yuge Yugeen Bharat Sangrahalaya) ಆಗಿ ಪರಿವರ್ತಿಸಲಾಗುತ್ತದೆ. ಯೋಜಿತ ವಸ್ತುಸಂಗ್ರಹಾಲಯದ ಅಭಿವೃದ್ಧಿಗೆ ತಾಂತ್ರಿಕ ಸಹಕಾರಕ್ಕಾಗಿ ಫ್ರಾನ್ಸ್‌ನ ಮ್ಯೂಸಿಯಂ ಡೆವಲಪ್‌ಮೆಂಟ್ ಏಜೆನ್ಸಿಯೊಂದಿಗೆ ಡಿಸೆಂಬರ್ 19, 2024 ರಂದು ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
1,189 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಸಂಪೂರ್ಣ ಸೇವಾ ತೀರ್ಥ ಆವರಣವನ್ನು ಲಾರ್ಸೆನ್ ಮತ್ತು ಟೂಬ್ರೊ 1,189 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿದೆ. ಇದು 2,26,203 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಸದ್ಯಕ್ಕೆ "ಎಕ್ಸಿಕ್ಯುಟಿವ್ ಎನ್‌ಕ್ಲೇವ್ ಪಾರ್ಟ್ 2" ಎಂದು ಹೆಸರಿಸಲಾದ ಪ್ರಧಾನ ಮಂತ್ರಿಯ ಹೊಸ ಅಧಿಕೃತ ನಿವಾಸವು ಸಹ ಸಮೀಪದಲ್ಲಿ ನಿರ್ಮಾಣ ಹಂತದಲ್ಲಿದೆ.
ವಸಾಹತುಶಾಹಿ ಪರಂಪರೆ ತೊಡೆದುಹಾಕುವ ಪ್ರಧಾನಿ ಮೋದಿಯವರ ದೃಷ್ಟಿಯಂತೆ ಈ ಬದಲಾವಣೆಯಾಗುತ್ತಿದೆ. ಅವರ ಸರ್ಕಾರವು ಈ ಹಿಂದೆ ನವದೆಹಲಿಯ ರಾಜಪಥವನ್ನು ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಿತ್ತು.
ದೆಹಲಿಯ ವಿವಿಧ ಭಾಗಗಳಲ್ಲಿ ಹರಡಿರುವ ಸಚಿವಾಲಯಗಳನ್ನು ಒಂದೇ ಕಡೆ ಇರುವಂತೆ ಮಾಡಲು ಹೊಸ ಕಾಮನ್ ಸೆಂಟ್ರಲ್ ಸೆಕ್ರೆಟರಿಯೇಟ್ (CCS) ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಅಂತಹ ಒಂದು ಕಟ್ಟಡ, ಕರ್ತವ್ಯ ಭವನವನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಉದ್ಘಾಟಿಸಲಾಯಿತು. ಇದರಲ್ಲಿ ಈಗಾಗಲೇ ಅನೇಕ ಸಚಿವಾಲಯಗಳು ಕಾರ್ಯನಿರ್ವಹಿಸುತ್ತಿವೆ.