ಇಟಾಹ್: ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯಲ್ಲಿ ಭಾನುವಾರ ಪರಸ್ಪರ ಪ್ರೀತಿಸುತ್ತಿದ್ದ 20 ವರ್ಷದ ಯುವತಿ ಮತ್ತು ಆಕೆಯ ಪ್ರಿಯಕರನನ್ನು ಯುವತಿಯ ಕುಟುಂಬದವರು ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗರ್ಹಿಯಾ ಸುಹಾಗ್‌ಪುರ ಗ್ರಾಮದಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಕುಟುಂಬದ ಕೆಲವು ಸದಸ್ಯರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಎಸ್‌ಪಿ ಶ್ಯಾಮ್ ನಾರಾಯಣ್ ಸಿಂಗ್ ಹೇಳಿದ್ದಾರೆ.
ಮೃತರನ್ನು ಅಶೋಕ್ ಅವರ ಪುತ್ರಿ ಶಿವಾನಿ(20) ಮತ್ತು ರಾಧೇಶ್ಯಾಮ್ ಅವರ ಪುತ್ರ ದೀಪಕ್(25) ಎಂದು ಗುರುತಿಸಲಾಗಿದೆ.
ಇಬ್ಬರೂ ಒಂದೇ ಗ್ರಾಮ ಮತ್ತು ಒಂದೇ ಸಮುದಾಯಕ್ಕೆ ಸೇರಿದವರು.
ಪೊಲೀಸರ ಪ್ರಕಾರ, ದೀಪಕ್ ರಾತ್ರಿ 8.30 ರ ಸುಮಾರಿಗೆ ಶಿವಾನಿ ಅವರನ್ನು ಭೇಟಿಯಾಗಲು ಅವರ ಮನೆಗೆ ಹೋಗಿದ್ದರು. ಈ ವೇಳೆ ಟೆರೇಸ್‌ನಲ್ಲಿ ಪ್ರೇಮಿಗಳು "ಆಕ್ಷೇಪಾರ್ಹ" ಸ್ಥಿತಿಯಲ್ಲಿರುವುದನ್ನು ಕುಟುಂಬ ಸದಸ್ಯರು ನೋಡಿದ್ದಾರೆ. ಇದರಿಂದ ಆಕ್ರೋಶಗೊಂಡ ಕುಟುಂಬ ಸದಸ್ಯರು, ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಶಿವಾನಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ದೀಪಕ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಎಟಾ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ.
ಎಸ್‌ಎಸ್‌ಪಿ ಸಿಂಗ್ ಅವರು ವೈದ್ಯಕೀಯ ಕಾಲೇಜು ಮತ್ತು ಅಪರಾಧ ಸ್ಥಳಕ್ಕೆ ಭೇಟಿ ನೀಡಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವನ್ನು ಕರೆಸಲಾಗಿದೆ.
ಸ್ಥಳೀಯ ಎಸ್‌ಎಚ್‌ಒ ರಿತೇಶ್ ಠಾಕೂರ್ ಅವರು, ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ದೂರು ದಾಖಲಿಸಿಲ್ಲ ಎಂದು ಹೇಳಿದ್ದಾರೆ.