ಮಥುರಾ: ಆಟೋ ಚಾಲಕನೊಬ್ಬ ತನಗೆ ಕಚ್ಚಿದ ನಾಗರಹಾವನ್ನೇ ಜೇಬಿನಲ್ಲಿಟ್ಟುಕೊಂಡು ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ಒತ್ತಾಯಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಮಥುರಾದಲ್ಲಿ ಈ ಘಟನೆ ನಡೆದಿದ್ದು, ಪಾನಮತ್ತ ಆಟೋ ಚಾಲಕ ತನಗೆ ಹಾವು ಕಚ್ಚಿದೆ ಎಂದು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ನೀಡುವಂತೆ ಒತ್ತಾಯಿಸಿದ್ದಾನೆ. ಈ ವೇಳೆ ಯಾರೂ ಅತನಿಗೆ ಸ್ಪಂದಿಸದ ಹಿನ್ನಲೆಯಲ್ಲಿ ಗಲಾಟೆ ಮಾಡಿದ್ದಾನೆ.
ಈ ವೇಳೆ ಸಿಬ್ಬಂದಿಯೊಬ್ಬರು ಆತನನ್ನು ವಿಚಾರಿಸಿದಾಗ ತನ್ನ ಜರ್ಕಿನ್ ಒಳಗಿದ್ದ ಹಾವನ್ನು ತೆಗೆದು ತೋರಿಸಿ ಈ ಹಾವು ನನಗೆ ಕಚ್ಚಿದೆ. ಚಿಕಿತ್ಸೆ ಕೊಡಿ ಎಂದು ಕೇಳಿದರೂ ಯಾರೂ ಚಿಕಿತ್ಸೆ ನೀಡುತ್ತಿಲ್ಲ. ಅರ್ಧಗಂಟೆಯಿಂದ ಯಾರೂ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾನೆ.
ಆತ ಜೇಬಿನಿಂದ ನಾಗರಹಾವನ್ನು ಹೊರತೆಗೆಯುತ್ತಲೇ ಅಲ್ಲಿದ್ದವರು ಹೌಹಾರಿದ್ದಾರೆ. ಹಾವು ಇತರ ರೋಗಿಗಳಿಗೆ ಅಪಾಯವನ್ನುಂಟುಮಾಡಬಹುದು ಎಂಬ ಕಾರಣಕ್ಕೆ ಹಾವನ್ನು ಆಸ್ಪತ್ರೆಯ ಹೊರಗೆ ಬಿಡುವಂತೆ ಹೇಳಿದಾಗ, ಆತ ಅದನ್ನು ಕೇಳಲು ನಿರಾಕರಿಸಿದನು. ಈ ವಿಚಾರ ತಿಳಿಯುತ್ತಲೇ ಪೊಲೀಸರು ಸ್ಥಳಕ್ಕಾಗಮಿಸಿ ಆಟೋ ಚಾಲಕನಿಂದ ನಾಗರಹಾವನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಮಾತನಾಡಿದ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ನೀರಜ್ ಅಗರ್ವಾಲ್, 'ಮಥುರಾದ ಇ-ರಿಕ್ಷಾ ಚಾಲಕ ದೀಪಕ್ (39) ಸೋಮವಾರ ತನ್ನ ಜೇಬಿನಲ್ಲಿ ಸುಮಾರು ಒಂದೂವರೆ ಅಡಿ ಉದ್ದದ ಹಾವಿನೊಂದಿಗೆ ಆಸ್ಪತ್ರೆಗೆ ಬಂದು ಅದು ತನಗೆ ಕಚ್ಚಿದೆ ಎಂದು ಹೇಳಿಕೊಂಡು, ವಿಷ ನಿರೋಧಕ ಇಂಜೆಕ್ಷನ್ ನೀಡುವಂತೆ ಒತ್ತಾಯಿಸಿದ್ದಾರೆ' ಎಂದು ಹೇಳಿದರು.
ಬಳಿಕ ಪೊಲೀಸರು ಹಾವನ್ನು ವಶಕ್ಕೆ ಪಡೆದ ಬಳಿಕ ಆರೋಪಿ ದೀಪಕ್ ಗೆ ಇಂಜೆಕ್ಷನ್ ನೀಡಿ ಮನೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಆದಾಗ್ಯೂ, ಹಾವು ದೀಪಕ್‌ಗೆ ಸೇರಿದ್ದಾಗಿರಬಹುದು ಎಂದು ಅವರು ಅನುಮಾನಿಸಿದ್ದಾರೆ.