ನವದೆಹಲಿ: ಇರಾನ್ ನಲ್ಲಿ ಖಮೇನಿ ಆಡಳಿತ ವಿರೋಧಿ ಪ್ರತಿಭಟನೆಯಿಂದಾಗಿ ಉಂಟಾದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 2,500 ದಾಟಿದೆ. ಈ ಮಧ್ಯೆ ಭಾರತ ಇರಾನ್ ನಲ್ಲಿರುವ ತನ್ನ ಪ್ರಜೆಗಳಿಗೆ ಎರಡನೇ ಬಾರಿಗೆ ಸಲಹೆ ನೀಡಿದ್ದು, ಕೂಡಲೇ ದೇಶ ತೊರೆಯುವಂತೆ ಸೂಚಿಸಿದೆ.
ಈ ಹಿಂದೆ ಜನವರಿ 5 ರಂದು ಕೂಡಾ ಇದೇ ರೀತಿಯ ಸಲಹೆ ನೀಡಲಾಗಿತ್ತು. ಇರಾನ್‌ನಲ್ಲಿ ಹೆಚ್ಚಾಗುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡುಈ ರೀತಿಯ ಸಲಹೆ ನೀಡಲಾಗಿದೆ.
ಸದ್ಯ ಇರಾನ್‌ನಲ್ಲಿರುವ ವಿದ್ಯಾರ್ಥಿಗಳು, ಯಾತ್ರಿಕರು, ವ್ಯಾಪಾರಸ್ಥರು ಮತ್ತು ಪ್ರವಾಸಿಗರು ಕಮರ್ಷಿಯಲ್ ವಿಮಾನ ಸೇರಿದಂತೆ ಲಭ್ಯವಿರುವ ಸಾರಿಗೆ ಮೂಲಕ ಕೂಡಲೇ ಇರಾನ್‌ನಿಂದ ಹೊರಡಲು ಸೂಚಿಸಲಾಗಿದೆ.
ಪ್ರತಿಭಟನೆ, ಹಿಂಸಾಚಾರದಿಂದಾಗಿ ಎಲ್ಲಾ ಭಾರತೀಯ ನಾಗರಿಕರು ಅಲ್ಲಿಂದ ಹೊರಡಬೇಕು. ಪ್ರತಿಭಟನೆ ನಡೆಯುತ್ತಿರುವ ಪ್ರದೇಶಗಳನ್ನು ತಪ್ಪಿಸಬೇಕು. ಇರಾನ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಿ ಮತ್ತು ಯಾವುದೇ ಬೆಳವಣಿಗೆಗಳಿಗಾಗಿ ಸ್ಥಳೀಯ ಮಾಧ್ಯಮಗಳ ಕಡೆ ಗಮನಹರಿಸಿ ಎಂದು ಪುನರುಚ್ಚರಿಸಲಾಗಿದೆ.
ಇರಾನ್‌ನಲ್ಲಿರುವ ಎಲ್ಲಾ ಭಾರತೀಯ ನಾಗರಿಕರು ಪಾಸ್ ಪೋರ್ಟ್ ಜೊತೆಗೆ ತಮ್ಮ ಪ್ರಯಾಣ ಮತ್ತು ವಲಸೆ ದಾಖಲೆಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳುವಂತೆ ಸಲಹೆ ನೀಡಲಾಗಿದೆ.
ಇರಾನ್ ದೇಶಾದ್ಯಂತ ಪ್ರತಿಭಟನೆಗಳು ಹೆಚ್ಚಾಗುತ್ತಿದ್ದು, ಹಿಂಸಾತ್ಮಕವಾಗಿ ತಿರುಗಿದೆ. ಇದರಿಂದಾಗಿ ಜನರ ಬಂಧನ, ಗಾಯದಂತಹ ಘಟನೆಗಳು ನಡೆಯುತ್ತಿದ್ದು, ದೈನಂದಿನ ಜೀವನಕ್ಕೆ ಅಡ್ಡಿಯಾಗಿದೆ. ಕೂಡಲೇ ಇರಾನ್ ತೊರೆಯುವಂತೆ ಅಲ್ಲಿನ ಯುನೈಟೆಡ್ ಸ್ಟೇಟ್ಸ್ ವರ್ಚುವಲ್ ರಾಯಭಾರ ಕಚೇರಿ ಸಲಹೆ ನೀಡಿದೆ.