ಕೋಲ್ಕತ್ತಾ: ಮಾನನಷ್ಟ ನೋಟಿಸ್‌ಗೆ ಪ್ರತಿಕ್ರಿಯಿಸಲು ಅವರಿಗೆ ನೀಡಲಾದ ಸಮಯ ಮುಗಿದಿದ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ಸುವೇಂದು ಅಧಿಕಾರಿ ಬುಧವಾರ ಹೇಳಿದ್ದಾರೆ.
'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, ಮುಖ್ಯಮಂತ್ರಿ ತಮ್ಮ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ವಿಫಲರಾಗಿದ್ದಾರೆ. ಅವರು ಉತ್ತರಿಸದ ಕಾರಣ, ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ನನ್ನ ವಿರುದ್ಧದ ಆರೋಪಗಳು ಆಧಾರರಹಿತ ಅಥವಾ ಕಟ್ಟುಕಥೆ ಎಂಬುದನ್ನು ಇದು ತೋರಿಸುತ್ತದೆ ಎಂದು ಹೇಳಿದ್ದಾರೆ.
'ಮಮತಾ ಬ್ಯಾನರ್ಜಿ ಗೊಂದಲಕ್ಕೊಳಗಾಗಿರುವಂತೆ ಕಾಣುತ್ತಿದ್ದಾರೆ. ನನ್ನ ಪರವಾಗಿ ಕಳುಹಿಸಲಾದ ಮಾನನಷ್ಟ ನೋಟಿಸ್‌ಗೆ ಪ್ರತಿಕ್ರಿಯಿಸಲು ಅವರಿಗೆ ನೀಡಲಾದ ಸಮಯ ಮುಗಿದಿದೆ ಮತ್ತು ಅವರು ಇದೀಗ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿರುವುದು ನೋಟಿಸ್‌ಗೆ ಉತ್ತರಿಸಲು ಅಡ್ಡಿಯಾಗಿದೆ. ಕಲ್ಲಿದ್ದಲು ಹಗರಣದಲ್ಲಿ ನಾನು ಭಾಗಿಯಾಗಿದ್ದೇನೆ ಎಂಬ ಅವರ ಆರೋಪಗಳು ಅವರ ಅನಾರೋಗ್ಯಕರ ಮನಸ್ಥಿತಿಯ ಉತ್ಪನ್ನ ಎಂಬುದನ್ನು ಮುಖ್ಯಮಂತ್ರಿ ತಮ್ಮ ನಡವಳಿಕೆಯಿಂದಲೇ ಸ್ಪಷ್ಟಪಡಿಸಿದ್ದಾರೆ. ನ್ಯಾಯಾಲಯದಲ್ಲಿ ಕಾನೂನು ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿ. ಮಮತಾ ಬ್ಯಾನರ್ಜಿ, ನ್ಯಾಯಾಲಯದಲ್ಲಿ ನಾನು ನಿಮ್ಮನ್ನು ಭೇಟಿಯಾಗುತ್ತೇನೆ' ಎಂದು ಅಧಿಕಾರಿ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಶುಕ್ರವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದ ಸುವೇಂಧು ಅಧಿಕಾರಿ, ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದಲ್ಲಿ ತಾನು ಭಾಗಿಯಾಗಿದ್ದೇನೆ ಎಂಬ ತಮ್ಮ ಹೇಳಿಕೆಗೆ 72 ಗಂಟೆಗಳ ಒಳಗೆ ಪುರಾವೆಗಳನ್ನು ಒದಗಿಸಬೇಕೆಂದು ಒತ್ತಾಯಿಸಿದ್ದರು. ಹಾಗೆ ಮಾಡಲು ವಿಫಲವಾದರೆ ಸೂಕ್ತ ನಾಗರಿಕ ಮತ್ತು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದ್ದರು.
ಇದಕ್ಕೂ ಮೊದಲು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಸುವೇಂದು ಅಧಿಕಾರಿ, ಜಾರಿ ನಿರ್ದೇಶನಾಲಯದ (ED) ನಡೆಯುತ್ತಿರುವ ತನಿಖೆಯಿಂದ ಜನರ 'ಗಮನವನ್ನು ಬೇರೆಡೆ ಸೆಳೆಯುವ ಹತಾಶ ಪ್ರಯತ್ನ'ದಲ್ಲಿ ಈ ಆರೋಪಗಳನ್ನು ಮಾಡಲಾಗಿದೆ. ಅವರ ಈ ಹೇಳಿಕೆಗಳು ಮಾನನಷ್ಟಕರ, ರಾಜಕೀಯ ಪ್ರೇರಿತ ಮತ್ತು ಸಾರ್ವಜನಿಕ ಚರ್ಚೆಗೆ ಹಾನಿಕಾರಕ ಎಂದು ಬಣ್ಣಿಸಿದರು.
'ವೈಯಕ್ತಿಕ ಅವಮಾನಗಳಿಂದ ಕೂಡಿದ ಈ ಅಜಾಗರೂಕ ಹೇಳಿಕೆಗಳನ್ನು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಸಾರ್ವಜನಿಕವಾಗಿ ಮಾಡಲಾಗಿದೆ. ಇಂತಹ ಆಧಾರರಹಿತ ಹೇಳಿಕೆಗಳು ನನ್ನ ಖ್ಯಾತಿಯನ್ನು ಹಾಳು ಮಾಡುವುದಲ್ಲದೆ, ಸಾರ್ವಜನಿಕ ಚರ್ಚೆಯ ಘನತೆಯನ್ನು ಹಾಳುಮಾಡುತ್ತವೆ' ಎಂದು ಅವರು ಹೇಳಿದ್ದರು.