ಜೋಧ್ ಪುರ: ಕಾರು ಚಾಲನಾ ತರಬೇತಿ ಮಹಿಳೆಯೊಬ್ಬರ ಪ್ರಾಣ ತೆಗೆದ ಭೀಕರ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರಾಜಸ್ತಾನದ ಜೋಧ್ ಪುರದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದ್ದು, ಜನವರಿ 10 ರ ರಾತ್ರಿ ಬಲದೇವ್ ನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ನಂತರ ಎಂಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ. ಘಟನೆಯ ಒಂದು ದಿನದ ನಂತರ ಇಂದು, ಬುಧವಾರ, ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿವೆ.
ಪ್ರಾಣ ತೆಗೆದ ಕಾರ್ ಡ್ರೈವಿಂಗ್ ಕಲಿಕೆ
ಇನ್ನು ಈ ದುರ್ಘಟನೆಗೆ ಕಾರು ಚಾಲನಾ ಕಲಿಕೆಯ ವೇಳೆ ಕಾರು ಚಾಲಕ ಆಕ್ಸಿಲರೇಟರ್ ಒತ್ತಿದ ನಂತರ ನಿಯಂತ್ರಣ ತಪ್ಪಿದ ಕಾರು ಮಹಿಳೆಗೆ ಢಿಕ್ಕಿ ಹೊಡೆದಿದೆ. ಮಹಿಳೆಗಿಂತ ಮೊದಲು ಕಾರು ಸ್ಕೂಟರ್ ಸವಾರನಿಗೂ ಡಿಕ್ಕಿ ಹೊಡೆದಿದೆ. ಇವಿಷ್ಟೂ ಘಟನೆಗಳು ರಸ್ತೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಆಗಿದ್ದೇನು?
ಸ್ಥಳೀಯ ನಿವಾಸಿ ಮಹಿಳೆ ಭನ್ವರಿ ದೇವಿ (62) ಎಂಬುವವರು ಮಸೂರಿಯಾದ ವೀರ್ ದುರ್ಗಾದಾಸ್ ಕಾಲೋನಿಯ ನಿವಾಸಿಯಾಗಿದ್ದು, ದಿನಸಿ ಅಂಗಡಿಯಿಂದ ದಿನಸಿ ಸಾಮಾನುಗಳನ್ನು ತರಲು ಬಂದಿದ್ದರು. ಇದೇ ಸಂದರ್ಭದಲ್ಲಿ ರಸ್ತೆಯ ಮತ್ತೊಂದು ಬದಿಯಲ್ಲಿ RJ36-CA-4808 ಸಂಖ್ಯೆಯ ಕಾರು ವೇಗವಾಗಿ ಬಂದು ಮಹಿಳೆಗೆ ಢಿಕ್ಕಿಯಾಗಿದೆ.
ಕಾಲೋನಿಯ ನಿವಾಸಿ ನರೇಂದ್ರ ಪ್ರಜಾಪತ್ (ಸುಮಾರು 40 ವರ್ಷ) ಕಾರು ಚಲಾಯಿಸುತ್ತಿದ್ದರು ಮತ್ತು ಅವರ ಸೋದರಳಿಯ ಕೂಡ ಅಲ್ಲಿದ್ದರು.
ಮೂಲಗಳ ಪ್ರಕಾರ ನರೇಂದ್ರ ಪ್ರಜಾಪತ್ ಮತ್ತು ಅವರ ಸೋದರಳಿಯ ಕಾರು ಕಲಿಯಲು ಕಾರು ಹತ್ತಿದ್ದರು. ಈ ವೇಳೆ ಕಾರು ಚಲಾಯಿಸುತ್ತಿದ್ದ ಪ್ರಜಾಪತ್ ಕಾರಿನ ಗೇರ್ ಹಾಕಿ ಬಲವಾಗಿ ಕಾರಿನ ಆ್ಯಕ್ಸಿಲರೇಟರ್ ಒತ್ತಿದ್ದಾರೆ. ಕೂಡಲೇ ಕಾರು ವೇಗವಾಗಿ ಚಲಿಸಿ ಅಂಗಡಿ ಬಳಿ ಇದ್ದ ಮಹಿಳೆಗೆ ಢಿಕ್ಕಿಯಾಗಿದೆ.
ಮಹಿಳೆಗೆ ಢಿಕ್ಕಿಯಾಗುವ ಮೊದಲು ಕಾರು ಅದೇ ರಸ್ತೆಯಲ್ಲಿ ಸಾಗುತ್ತಿದ್ದ ದ್ವಿಚಕ್ರವಾಹನಕ್ಕೂ ಢಿಕ್ಕಿಯಾಗಿದೆ. ಕಾರು ಢಿಕ್ಕಿಯಿಂದ ಮಹಿಳೆಗೆ ಗಂಭೀರಗಾಯವಾಗಿದ್ದು, ಆಕೆಯನ್ನು ಕೂಡಲೇ ಮಥುರಾದಾಸ್ ಮಾಥುರ್ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಈ ನಡುವೆ ಕಾರು ಚಾಲಕ ನರೇಂದ್ರ ಪ್ರಜಾಪತಿ ಪರಾರಿಯಾಗಲು ಯತ್ನಿಸಿದ್ದು, ಕೂಡಲೇ ಆತನನ್ನು ಸ್ಥಳೀಯರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಂತ್ರಸ್ಥ ಮಹಿಳೆಯ ಕುಟುಂಬಸ್ಥರ ಆಕ್ರೋಶ
ಇನ್ನು ಪೊಲೀಸರು ಚಾಲಕನನ್ನು ಬಂಧಿಸಿದ್ದರೂ, ಕಠಿಣ ಕ್ರಿಮಿನಲ್ ಆರೋಪಗಳ ಅಡಿಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಅವರು ಜೈಲಿನಲ್ಲಿಯೇ ಇರಬೇಕೆಂದು ಸಂತ್ರಸ್ಥೆಯ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಇಂತಹ ಗಂಭೀರ ಘಟನೆಯ ಹೊರತಾಗಿಯೂ, ಆರೋಪಿಯ ಕುಟುಂಬವು ಭೇಟಿ ನೀಡಿಲ್ಲ ಅಥವಾ ಕ್ಷಮೆಯಾಚಿಸಿಲ್ಲ ಎಂದು ಕುಟುಂಬ ಹೇಳುತ್ತದೆ. ಸಂತ್ರಸ್ತೆಯ ಕುಟುಂಬವು ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದು, ದೇವನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂದ ಪ್ರಕರಣ ದಾಖಲಾಗಿದೆ.