ಮುಂಬೈ: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಸಾದುದ್ದೀನ್ ಓವೈಸಿಯ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(AIMIM) ರಾಜ್ಯಾದ್ಯಂತ 114 ಸ್ಥಾನಗಳನ್ನು ಗೆದ್ದಿದೆ ಎಂದು AIMIM ನಾಯಕ ಶರೇಖ್ ನಕ್ಷ್ಬಂದಿ ಅವರು ಶುಕ್ರವಾರ ಹೇಳಿದ್ದಾರೆ.
ಎಐಎಂಐಎಂ ಛತ್ರಪತಿ ಸಂಭಾಜಿನಗರದಲ್ಲಿ 33, ಮಾಲೆಗಾಂವ್‌ನಲ್ಲಿ 21, ಅಮರಾವತಿಯಲ್ಲಿ 15, ನಾಂದೇಡ್‌ನಲ್ಲಿ 13, ಧುಲೆಯಲ್ಲಿ 10, ಸೋಲಾಪುರದಲ್ಲಿ ಎಂಟು, ಮುಂಬೈನಲ್ಲಿ ಆರು, ಥಾಣೆಯಲ್ಲಿ ಐದು, ಜಲಗಾಂವ್‌ನಲ್ಲಿ ಎರಡು ಮತ್ತು ಚಂದ್ರಾಪುರದಲ್ಲಿ ಒಂದು ಸ್ಥಾನ ಗೆದ್ದಿದೆ.
ಹಿಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ 80 ಸ್ಥಾನಗಳನ್ನು ಗೆದ್ದಿದ್ದ ಓವೈಸಿಯ ಪಕ್ಷ ಈ ಬಾರಿ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ ಎಂದು ನಕ್ಷ್ಬಂದಿ ಪಿಟಿಐಗೆ ತಿಳಿಸಿದ್ದಾರೆ.
"ಆರಂಭದಲ್ಲಿ, ಛತ್ರಪತಿ ಸಂಭಾಜಿನಗರದಲ್ಲಿ ಅಭ್ಯರ್ಥಿ ಆಯ್ಕೆ ಕುರಿತು AIMIMಗೆ ತನ್ನದೇ ಕಾರ್ಯಕರ್ತರಿಂದ ಸವಾಲು ಎದುರಿಸಿತು. ನಂತರ, ಅಸಾದುದ್ದೀನ್ ಓವೈಸಿ ಮತ್ತು ಅವರ ಪ್ರಬಲ ರ್ಯಾಲಿಗಳ ಪರಿಣಾಮ ನಾವು ಇಲ್ಲಿ ಸ್ಪರ್ಧಿಸಿದ 37 ಸ್ಥಾನಗಳಲ್ಲಿ 33 ಸ್ಥಾನಗಳನ್ನು ಗೆಲ್ಲಲು ಕಾರಣವಾಯಿತು. ಈ ಬಾರಿ ಮುಂಬೈನಿಂದ ಚಂದ್ರಾಪುರದವರೆಗೆ ನಾವು ಗೆಲುವು ಸಾಧಿಸಿದ್ದೇವೆ" ಎಂದು ಅವರು ಹೇಳಿದರು.
2015 ಕ್ಕೆ ಹೋಲಿಸಿದರೆ ಈ ಬಾರಿ ಓವೈಸಿ ಪ್ರಚಾರಕ್ಕೆ ಹೆಚ್ಚಿನ ಸಮಯ ನೀಡಿದರು ಮತ್ತು ಅತೃಪ್ತ ನಾಯಕರೊಂದಿಗೆ ಮಾತನಾಡುವ ಮೂಲಕ ಮತ್ತು ಅವರಲ್ಲಿ ಸುಮಾರು 70 ಪ್ರತಿಶತದಷ್ಟು ಜನರ ಮನವೊಲಿಸುವ ಮೂಲಕ ಭಿನ್ನಾಭಿಪ್ರಾಯವನ್ನು ನಿವಾರಿಸುವಲ್ಲಿ ಯಶಸ್ವಿಯಾದರು ಎಂದು ನಕ್ಷ್ಬಂದಿ ತಿಳಿಸಿದರು.