ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ಮತ್ತೆ ರೆಸಾರ್ಟ್ ಪಾಲಿಟಿಕ್ಸ್ ಮರುಕಳಿಸಿದೆ. ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಚುನಾವಣೆಯಲ್ಲಿ ಕಿಂಗ್‌ಮೇಕರ್ ಆಗಿ ಹೊರಹೊಮ್ಮಿದ ಬೆನ್ನಲ್ಲೇ ತನ್ನ ಚುನಾಯಿತ ಪ್ರತಿನಿಧಿಗಳನ್ನು ರೆಸಾರ್ಟ್ ಗೆ ಸ್ಥಳಾಂತರಿಸಲು ಪ್ರಾರಂಭಿಸಿದೆ.
ದೇಶದ ಅತ್ಯಂತ ಶ್ರೀಮಂತ ನಾಗರಿಕ ಸಂಸ್ಥೆಯ ನಿಯಂತ್ರಣ ತೆಗೆದುಕೊಳ್ಳುವ ಮುನ್ನಾ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆ ಸೇರಿದಂತೆ ಪ್ರಮುಖ ಎರಡು ಆಯಾಮಗಳಲ್ಲಿ ಈ ಬೆಳವಣಿಗೆಯನ್ನು ನೋಡಲಾಗುತ್ತಿದೆ.
25 ವರ್ಷಗಳ ನಂತರ ಠಾಕ್ರೆಗಳಿಂದ ಅಧಿಕಾರವನ್ನು ಕಸಿದುಕೊಳ್ಳುವ ಮೂಲಕ ಬಿಜೆಪಿ-ಸೇನಾ ಮೈತ್ರಿಕೂಟ ಇತ್ತೀಚಿನ BMC ಚುನಾವಣೆಯಲ್ಲಿ ಬಹುಮತ ಪಡೆದಿವೆ. ಆದಾಗ್ಯೂ, ಯಾವುದೇ ಪಕ್ಷವು ತನ್ನದೇ ಆದ ಬಹುಮತವನ್ನು ಹೊಂದಿಲ್ಲ. ವಿರೋಧ ಪಕ್ಷಗಳಿಂದ ಕುದುರೆ ವ್ಯಾಪಾರ ಸಾಧ್ಯತೆ ಹಿನ್ನೆಲೆಯಲ್ಲಿ ಶಿಂಧೆ ಅವರು ರೆಸಾರ್ಟ್ ಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಸ್ಥಳಾಂತರಿಸುತ್ತಿದ್ದಾರೆ. BMC ನಿಯಂತ್ರಣಕ್ಕೆ ಅರ್ಧದಷ್ಟು ಸದಸ್ಯರ ಗಡಿ ದಾಟಲು ಶಿಂಧೆ ಪಕ್ಷಕ್ಕೆ ಕೇವಲ ಎಂಟು ಚುನಾಯಿತ ಸದಸ್ಯರ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.
ಮೇಯರ್ ಹುದ್ದೆ ಮೇಲೆ ಕಣ್ಣು: ಮೇಯರ್ ಹುದ್ದೆಯಲ್ಲಿ ರಾಜಿ ಮಾಡಿಕೊಳ್ಳದಂತೆ ಪಕ್ಷದೊಳಗೆ ಒತ್ತಡವಿದೆ. ಬಿಜೆಪಿಯೊಂದಿಗೆ ಚೌಕಾಶಿ ಮಾಡುವ ನಿಟ್ಟಿನಲ್ಲಿಯೂ ಈ ತಂತ್ರ ಅನುಸರಿಸಲಾಗುತ್ತಿದೆ ಎನ್ನಲಾಗಿದೆ. 227 ವಾರ್ಡ್‌ಗಳ ಬಿಎಂಸಿಯಲ್ಲಿ ಬಹುಮತಕ್ಕೆ 114 ಸ್ಥಾನಗಳ ಅಗತ್ಯವಿದೆ. ಬಿಜೆಪಿ 89 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಶಿಂಧೆ ಅವರ ಸೇನೆ 29 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಒಟ್ಟಾರೆಯಾಗಿ ಇದು 118 ರಷ್ಟಿದ್ದು, ಬಹುಮತ 114 ಕ್ಕಿಂತ ನಾಲ್ಕು ಸ್ಥಾನ ಹೆಚ್ಚಾಗಿದೆ. ಜೊತೆಗೆ, ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವು ಮಹಾಯುತಿಯಲ್ಲಿದ್ದರೂ ಸಹ ಏಕಾಂಗಿಯಾಗಿ ಸ್ಪರ್ಧಿಸಿತ್ತು. ಅದು ಕೂಡಾ ಮೂರು ವಾರ್ಡ್‌ಗಳನ್ನು ಗೆದ್ದಿದೆ.
ಕುದುರೆ ವ್ಯಾಪಾರದ ಭೀತಿ: ಇನ್ನೂ ಪ್ರತಿಪಕ್ಷಗಳಾದ ಶಿವಸೇನಾ (ಯುಬಿಟಿ) 65 ವಾರ್ಡ್ ಗಳಲ್ಲಿ , MNS ಆರು, ಶಿವಸೇನಾ(SP) ಕೇವಲ 1 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ 24, ಎಐಎಂಐಎಂ 8, ಸಮಾಜವಾದಿ ಪಕ್ಷ ಎರಡು ವಾರ್ಡ್ ಗಳಲ್ಲಿ ಗೆಲುವು ಸಾಧಿಸಿವೆ. ಇಲ್ಲಿ ಕುದುರೆ ವ್ಯಾಪಾರ ಮತ್ತು ಪಕ್ಷಾಂತರದ ಭಯ ಉಂಟಾಗಿದೆ. ಮಹಾಯುತಿ ಕಡೆಯಿಂದ ಕೇವಲ ಎಂಟು ಕಾರ್ಪೊರೇಟರ್‌ಗಳನ್ನು ತಮ್ಮೊಂದಿಗೆ ಸೇರಲು ಪ್ರತಿಪಕ್ಷಗಳು ಮನವೊಲಿಸುವಲ್ಲಿ ಯಶಸ್ವಿಯಾದರೆ, ಠಾಕ್ರೆಗಳು ಮತ್ತು ಅವರ ಮಿತ್ರರು ಸೇರಿ BMCಯಲ್ಲಿ ಬಿಜೆಪಿ ಅಧಿಕಾರ ಬರದಂತೆ ತಡೆಯಬಹುದು.
ಚೌಕಾಸಿಯ ತಂತ್ರ? ಶಿಂಧೆ ಅವರ ಈ ನಡೆಯನ್ನು ಬಿಜೆಪಿಯೊಂದಿಗೆ ಚೌಕಾಶಿ ಮಾಡುವ ತಂತ್ರವೆಂದು ಪರಿಗಣಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಏಕೆಂದರೆ ಶಿವಸೇನೆ ಬಿಎಂಸಿ ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿದೆ. ಕಿಂಗ್‌ಮೇಕರ್ ಸ್ಥಾನದಲ್ಲಿದ್ದು, ಶಿವಸೇನೆ ಕಾರ್ಪೊರೇಟರ್‌ಗೆ ಪ್ರತಿಷ್ಠಿತ ಹುದ್ದೆ ಸಿಗಬೇಕೆಂದು ಶಿಂಧೆ ಪಾಳಯ ಬಯಸಿದೆ ಎಂದು ಮೂಲಗಳು ತಿಳಿಸಿವೆ.