ಹೈದರಾಬಾದ್: ತೆಲಂಗಾಣದಲ್ಲಿ ಹೊಸ ಪಕ್ಷ ಸ್ಥಾಪಿಸಲು ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಅವರು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂದು ತೆಲಂಗಾಣ ಜಾಗೃತಿ ಮೂಲಗಳು ಸೋಮವಾರ ತಿಳಿಸಿವೆ. ಕವಿತಾ ತೆಲಂಗಾಣ ಜಾಗೃತಿ, ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷರಾಗಿದ್ದಾರೆ.
ಪ್ರಶಾಂತ್ ಕಿಶೋರ್ ಇತ್ತೀಚಿಗೆ ಐದು ದಿನಗಳ ಕಾಲ ಹೈದರಾಬಾದ್ ನಲ್ಲಿದ್ದರು. ಈ ವೇಳೆಯಲ್ಲಿ ಅವರೊಂದಿಗೆ ಕವಿತಾ ಮಾತುಕತೆ ನಡೆಸಿದ್ದಾರೆ. ಹೊಸ ಪಕ್ಷ ಸ್ಥಾಪನೆ, ಅದಕ್ಕೆ ತೆಲಂಗಾಣದಲ್ಲಿ ರಾಜಕೀಯ ನೆಲೆ, ಮತ್ತಿತರ ಸಂಬಂಧಿತ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಆರ್‌ಎಸ್ ಸಂಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ರಾವ್ ಅವರ ಪುತ್ರಿ ಕವಿತಾ ಅವರನ್ನು ಸೆಪ್ಟೆಂಬರ್, 2025 ರಲ್ಲಿ ಪಕ್ಷದಿಂದ ಉಚ್ಛಾಟಿಸಲಾಗಿತ್ತು.
ಆಗಿನಿಂದಲೂ ತೆಲಂಗಾಣ ಜಾಗೃತಿ , ಸಾಂಸ್ಕೃತಿಕ ಸಂಘಟನೆಯಡಿ ಸಾರ್ವಜನಿಕ ಸಮಸ್ಯೆಗಳ ಮೇಲೆ ಕವಿತಾ ಗಮನ ಕೇಂದ್ರೀಕರಿಸಿದ್ದಾರೆ. ಇತ್ತೀಚಿಗೆ ಅವರು ವಿಧಾನಪರಿಷತ್ ಸದಸ್ಯತ್ವಕ್ಕೆ ಸಲ್ಲಿಸಿದ ರಾಜೀನಾಮೆಯನ್ನು ಸಭಾಪತಿ ಗುತಾ ಸುಖೇಂದರ್ ರೆಡ್ಡಿ ಅವರು ಅಂಗೀಕರಿಸಿದ್ದಾರೆ.
ಕಳೆದ ವರ್ಷ ಬಿಆರ್ ಎಸ್ ಹಾಗೂ ಆಡಳಿತಾರೂಢ ಕಾಂಗ್ರೆಸ್ ಎರಡೂ ಭ್ರಷ್ಟಾಚಾರ ಪಕ್ಷಗಳೆಂದು ಆರೋಪಿಸಿದ್ದ ಕವಿತಾ, ಮುಂದೊಂದು ದಿನ ಮುಖ್ಯಮಂತ್ರಿಯಾಗುತ್ತೇನೆ ಮತ್ತು 2014 ರಲ್ಲಿ ತೆಲಂಗಾಣ ರಚನೆಯಾದ ನಂತರ ನಡೆದ ಎಲ್ಲಾ "ಅನ್ಯಾಯ"ಗಳ ಬಗ್ಗೆ ತನಿಖೆ ನಡೆಸುತ್ತೇನೆ ಎಂದು ಹೇಳಿದ್ದರು.
ಈ ತಿಂಗಳ ಆರಂಭದಲ್ಲಿ ಬಿಆರ್ ಎಸ್ ಆಡಳಿತ ಅವಧಿಯಲ್ಲಿನ ಭ್ರಷ್ಟಾಚಾರ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದ್ದ ಕವಿತಾ ಬಿಆರ್‌ಎಸ್ ಸಂವಿಧಾನವನ್ನು "ಜೋಕ್" ಎಂದೂ ಕರೆದಿದ್ದರು.