ಕೋಳಿಕ್ಕೋಡ್: ಇತ್ತೀಚಿನ ಯುವ ಜನರಲ್ಲಿ ವೈರಲ್ ಆಗುವ ಗೀಳು ಹೆಚ್ಚಾಗಿ ಹೋಗಿದೆ. ಈ ಗೀಳು ಕೇರಳದಲ್ಲಿ ವ್ಯಕ್ತಿಯೊಬ್ಬರ ಪ್ರಾಣವನ್ನೇ ಕಸಿದುಕೊಂಡಿದೆ.
ಸ್ಥಳೀಯ ಬಸ್ಸಿನಲ್ಲಿ ಆತನ ಪ್ರಯಾಣಿಸುತ್ತಿದ್ದಾಗ ವ್ಯಕ್ತಿ ಲೈಂಗಿಕ ಕಿರುಕುಳ ಕೊಡುವುದನ್ನು ಮಹಿಳೆ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಳು.
ದೀಪಕ್ ಯು ಎಂಬ ಈ ವ್ಯಕ್ತಿ ಕೋಳಿಕ್ಕೋಡ್‌ನ ಗೋವಿಂದಪುರಂ ನಿವಾಸಿ. ಬೆಳಗ್ಗೆ 7 ಗಂಟೆ ಸುಮಾರಿಗೆ ಪೋಷಕರು ಆತನನ್ನು ಎಬ್ಬಿಸಲು ಪ್ರಯತ್ನಿಸಿದಾಗ ಆತ ತನ್ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಹಲವು ಬಾರಿ ಬಾಗಿಲು ಬಡಿದು ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಆತಂಕಗೊಂಡ ಪೋಷಕರು ನೆರೆಮನೆಯವರ ನೆರವಿನೊಂದಿಗೆ ಬಾಗಿಲು ತೆರೆದಾಗ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬಂದಿದೆ. ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ.
ಕೆಲವು ದಿನಗಳ ಹಿಂದೆ ವಿಡಿಯೋ ವೈರಲ್ ಆಗಿತ್ತು. ಪಯ್ಯನ್ನೂರು ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಜನದಟ್ಟಣೆಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆ ಆತ ತನ್ನನ್ನು ಹಲವು ಬಾರಿ ಅನುಚಿತವಾಗಿ ಮುಟ್ಟಿದ್ದಾಳೆ ಎಂದು ಹೇಳಿಕೊಂಡಿದ್ದಳು.
ವಿಡಿಯೋ ವೈರಲ್ ಆಗಿದ್ದು, ವ್ಯಕ್ತಿಯನ್ನು ತೀವ್ರವಾಗಿ ನಿಂದಿಸಲಾಗಿತ್ತು. ಇದರಿಂದ ಆತ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಎನ್ನಲಾಗಿದೆ.
ಈ ನಡುವೆ ಮಹಿಳೆಯೇ ವ್ಯಕ್ತಿಯ ಹತ್ತಿರ ಹೋಗಿ, ಬಸ್ ಚಲಿಸುವಾಗ ಸ್ಪರ್ಶವಾಗುವಂತೆ ಮಾಡಿ, ಅದರ ವಿಡಿಯೋ ರೆಕಾರ್ಡ್ ಮಾಡಿದ್ದಾಳೆಂಬ ಮಾತುಗಳು ಕೇಳಿಬರುತ್ತಿದ್ದು, ಈ ಕುರಿತ ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವ್ಯಕ್ತಿಯ ಕುಟುಂಬಸ್ಥರೂ ಕೂಡ ತಮ್ಮ ಮಗ ಅಮಾಯಕ. ವೈರಲ್ ಆಗಬೇಕೆಂದು ಈ ರೀತಿ ಮಾಡಿದ್ದಾರೆಂದು ಆರೋಪ ಮಾಡಿದ್ದಾರೆ.
ಇದೀಗ ಮಹಿಳೆಯ ಕುರಿತಂತೆಯೂ ಟೀಕೆಗಳು ವ್ಯಕ್ತವಾಗುತ್ತಿದೆ. ಪ್ರಕರಣ ಸಂಬಂಧ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯಿಂದ ಸತ್ಯಾಸತ್ಯತೆಗಳು ಹೊರಬರಬೇಕಿದೆ.