ನವದೆಹಲಿ: ಭಾರತಕ್ಕೆ ಭೇಟಿ ನೀಡಿದ ಯುನೈಟೆಡ್ ಅರಬ್ ಎಮಿರೇಟ್ಸ್(UAE) ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸ್ವತಃ ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ವೈಯಕ್ತಿಕವಾಗಿ ಬರಮಾಡಿಕೊಂಡರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ(MEA) ಪ್ರಕಾರ, ಅಲ್ ನಹ್ಯಾನ್ ಅವರು ರಾಷ್ಟ್ರ ರಾಜಧಾನಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಇದ್ದರು. ಪ್ರಧಾನಿ ಮೋದಿ ಅವರು ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ನಹ್ಯಾನ್ ಅವರನ್ನು ಅಪ್ಪುಗೆಯ ಮೂಲಕ ಸ್ವಾಗತಿಸಿದರು. ವಿಮಾನ ನಿಲ್ದಾಣದಿಂದ ಹೊರಡುವ ಮುನ್ನ ಭಾರತೀಯ ಸಾಂಪ್ರದಾಯಿಕ ನೃತ್ಯ, ಡೋಲು ವಾದ್ಯಗಳ ಮೂಲಕ ಯುಎಇ ಅಧ್ಯಕ್ಷರನ್ನು ಸ್ವಾಗತಿಸಲಾಯಿತು.
ಬಳಿಕ ಮೋದಿ ಮತ್ತು ಅಲ್ ನಹ್ಯಾನ್ ಜೊತೆಯಾಗಿ ಕಾರಿನಲ್ಲಿ ಕುಳಿತು ಲೋಕಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಿ ನಿವಾಸಕ್ಕೆ ಆಗಮಿಸಿದರು. ಅಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದರು.
ಇರಾನ್-ಯುಎಸ್ ಸಂಬಂಧಗಳಲ್ಲಿ ತೀವ್ರ ಕ್ಷೀಣತೆ, ಸೌದಿ ಅರೇಬಿಯಾ ಮತ್ತು ಯುಎಇ ನಡುವಿನ ಯೆಮೆನ್ ಸಂಬಂಧದ ಉದ್ವಿಗ್ನತೆ ಮತ್ತು ಗಾಜಾದಲ್ಲಿ ನಡೆಯುತ್ತಿರುವ ಸಂಘರ್ಷ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆಯ ನಡುವೆ ಅಲ್ ನಹ್ಯಾನ್ ಅವರ ಈ ಭೇಟಿ ಹೆಚ್ಚು ಮಹತ್ವ ಪಡೆದುಕೊಂಡಿದೆ.
ನಾಯಕರು ದ್ವಿಪಕ್ಷೀಯ ಸಹಕಾರದ ಸಂಪೂರ್ಣ ವ್ಯಾಪ್ತಿಯನ್ನು ಪರಿಶೀಲಿಸಿದರು ಮತ್ತು ಭಾರತ-ಯುಎಇ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಪುನರುಚ್ಚರಿಸಿದರು.
ಭಾರತ್ ಮಾರ್ಟ್, ವರ್ಚುವಲ್ ಟ್ರೇಡ್ ಕಾರಿಡಾರ್ ಮತ್ತು ಭಾರತ್-ಆಫ್ರಿಕಾ ಸೇತು ಮುಂತಾದ ಉಪಕ್ರಮಗಳ ಮೂಲಕ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSMEs) ಬೆಂಬಲವನ್ನು ಹೆಚ್ಚಿಸಲು ಉಭಯ ನಾಯಕರು ಒಪ್ಪಿಕೊಂಡರು.
ವಿಮಾನ ನಿಲ್ದಾಣ, ಬಂದರು, MRO ಸೌಲಭ್ಯ ಮತ್ತು ಸ್ಮಾರ್ಟ್ ಟೌನ್‌ಶಿಪ್ ಸೇರಿದಂತೆ ಗುಜರಾತ್‌ನ ವಿಶೇಷ ಹೂಡಿಕೆ ಪ್ರದೇಶದಲ್ಲಿ ಕಾರ್ಯತಂತ್ರದ ಮೂಲಸೌಕರ್ಯ ಯೋಜನೆಗಳಲ್ಲಿ ಯುಎಇ ಆಸಕ್ತಿಯನ್ನು ಸ್ವಾಗತಿಸಲಾಯಿತು. ಯುಎಇ ಬ್ಯಾಂಕುಗಳು ಭಾರತದ GIFT ನಗರದಲ್ಲಿ ಶಾಖೆಗಳನ್ನು ಆರಂಭಿಸುವುದು ಸೇರಿದಂತೆ ಹಣಕಾಸು ವಲಯದ ಸಂಬಂಧಗಳನ್ನು ಸಹ ಬಲಪಡಿಸಲಾಯಿತು.
ಆಹಾರ ಭದ್ರತೆ, ಬಾಹ್ಯಾಕಾಶ, ಕೃತಕ ಬುದ್ಧಿಮತ್ತೆ ಮತ್ತು ಸೂಪರ್‌ಕಂಪ್ಯೂಟಿಂಗ್ ಕ್ಲಸ್ಟರ್ ಹಾಗೂ ಡಿಜಿಟಲ್ ರಾಯಭಾರ ಕಚೇರಿಗಳ ಯೋಜನೆಗಳು ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳಲ್ಲಿನ ಸಹಕಾರದ ಕುರಿತು ಉಭಯ ನಾಯಕರು ಚರ್ಚಿಸಿದರು. ಭಾರತದ ಶಾಂತಿ ಕಾನೂನಿನಡಿಯಲ್ಲಿ 10 ವರ್ಷಗಳ ಎಲ್‌ಎನ್‌ಜಿ ಪೂರೈಕೆ ಒಪ್ಪಂದ ಮತ್ತು ಸುಧಾರಿತ ಪರಮಾಣು ತಂತ್ರಜ್ಞಾನದಲ್ಲಿನ ಅವಕಾಶಗಳನ್ನು ಅವರು ಸ್ವಾಗತಿಸಿದರು.
ಯುಎಇ ಅಧ್ಯಕ್ಷರಿಗೆ ಮರದ ಉಯ್ಯಾಲೆ ಉಡುಗೊರೆ
ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಪ್ರಧಾನಿ ಮೋದಿ ಅವರು ಮರದ ಕೆತ್ತನೆಯ ಉಯ್ಯಾಲೆ ಮತ್ತು ಪಶ್ಮಿನಾ ಶಾಲನ್ನು ಉಡುಗೊರೆಯಾಗಿ ನೀಡಿದರು.
ಕೇವಲ ಎರಡು ಗಂಟೆಗಳ ಅತಿ ಸಣ್ಣ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದ ಯುಎಇ ಅಧ್ಯಕ್ಷರಿಗೆ ಗುಜರಾತಿನ ಕರಕುಶಲಕರ್ಮಿಗಳು ಕೆತ್ತಿದ ಮರದ ಉಯ್ಯಾಲೆ ಜೊತೆಗೆ ಕಾಶ್ಮೀರದ ಪಶ್ಮಿನಾ ಶಾಲನ್ನು ಪ್ರಧಾನಿ ಮೋದಿ ಅವರು ವಿಶೇಷ ಉಡುಗೊರೆಯಾಗಿ ನೀಡಿದರು.