ಕೋಝಿಕ್ಕೋಡ್: ತನ್ನ ಕಂಟೆಂಟ್ ಗಾಗಿ ಬಸ್ ಪ್ರಯಾಣದ ಸಮಯದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಮಾಡಿದ್ದ ಮಹಿಳೆಗೆ ಕೇರಳ ಪೊಲೀಸರು ಶಾಕ್ ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.
ಹೌದು.. ಬಸ್ ಪ್ರಯಾಣದ ವೇಳೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 42 ವರ್ಷದ ವ್ಯಕ್ತಿಯ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಹಿಳೆಯೊಬ್ಬರ ವಿರುದ್ಧ ಸೋಮವಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಡಕರದ ನಿವಾಸಿ ಶಿಮ್ಜಿತಾ ಮುಸ್ತಫಾ (35) ವಿರುದ್ಧ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ, ಇಲ್ಲಿನ ಗೋವಿಂದಪುರದಲ್ಲಿ ವಾಸಿಸುತ್ತಿದ್ದ ಪುತಿಯಾರ ಮೂಲದ ದೀಪಕ್ ಅವರ ಮೃತದೇಹ ಅವರ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದಕ್ಕೂ ಮೊದಲು ಜವಳಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ದೀಪಕ್, ತಮ್ಮ ಕೆಲಸದ ನಿಮಿತ್ತ ಶುಕ್ರವಾರ ಸಾರಿಗೆ ಬಸ್‌ನಲ್ಲಿ ಕಣ್ಣೂರಿಗೆ ಪ್ರಯಾಣಿಸಿದ್ದರು.
ಅದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿ ಮಹಿಳೆ ಶಿಮ್ಜಿತಾ ಮುಸ್ತಫಾ, ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ವೀಡಿಯೊ ರೆಕಾರ್ಡ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ವ್ಯಾಪಕ ವೈರಲ್ ಆಗಿ ದೀಪಕ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗಿ ಇದು ದೀಪಕ್ ಅವರ ಗಮನಕ್ಕೂ ಬಂದಿತು. ಇದರಿಂದ ತೀವ್ರ ಅಪಮಾನಕ್ಕೊಳಗಾಗಿದ್ದ ದೀಪಕ್ ಆತ್ಮಹತ್ಯೆಗೆ ಶರಣಾಗಿದ್ದರು. ಪೊಲೀಸರು ಆರಂಭದಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದರು.
ಆದಾಗ್ಯೂ, ಕುಟುಂಬ ಸದಸ್ಯರು ನೀಡಿದ ದೂರಿನ ಮೇರೆಗೆ, ಆತ್ಮಹತ್ಯೆಗೆ ಪ್ರಚೋದನೆಗಾಗಿ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 108ರ ಅಡಿಯಲ್ಲಿ ಹೊಸ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಗೆ ಆದೇಶ, ವರದಿ ಸಲ್ಲಿಕೆಗೆ ವಾರ ಗಡುವು
ಅಂತೆಯೇ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವು ಘಟನೆಯ ಬಗ್ಗೆ ಪೊಲೀಸ್ ತನಿಖೆಗೆ ಆದೇಶಿಸಿದೆ ಮತ್ತು ಉತ್ತರ ವಲಯದ ಪೊಲೀಸ್ ಉಪ ಮಹಾನಿರ್ದೇಶಕ (ಡಿಐಜಿ) ಅವರಿಗೆ ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ. ಫೆಬ್ರವರಿ 19 ರಂದು ಜಿಲ್ಲೆಯಲ್ಲಿ ನಡೆಯಲಿರುವ ಆಯೋಗದ ಸಭೆಯಲ್ಲಿ ಈ ಪ್ರಕರಣವನ್ನು ಪರಿಗಣಿಸಲಾಗುವುದು.
ಏತನ್ಮಧ್ಯೆ, ಬಿಜೆಪಿ ನಾಯಕ ಪಿ ಎಸ್ ಶ್ರೀಧರನ್ ಪಿಳ್ಳೈ ಅವರು ದುಃಖಿತ ಕುಟುಂಬವನ್ನು ಭೇಟಿ ಮಾಡಿ ಸರಿಯಾದ ತನಿಖೆಯನ್ನು ಪ್ರಾರಂಭಿಸುವಲ್ಲಿ ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ವಿಡಿಯೋ ರೆಕಾರ್ಡ್ ಮಾಡಿದ ಮಹಿಳೆ ರಾಜಕೀಯ ಪಕ್ಷದ ಸಕ್ರಿಯ ಕಾರ್ಯಕರ್ತೆ ಮತ್ತು ಚುನಾಯಿತ ಪ್ರತಿನಿಧಿಯಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಆರ್ಥಿಕ ಲಾಭ ಮಾಡಿಕೊಳ್ಳಲು ಇಂತಹ ಕೃತ್ಯದಲ್ಲಿ ತೊಡಗಿದ್ದಾರೆ. ಕೇರಳದಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿವೆ ಎಂದು ಅವರು ಆರೋಪಿಸಿದರು.