ಲಖನೌ: ದಟ್ಟ ಮಂಜಿನಿಂದಾಗಿ ಕಾರಿನ ಸಮೇತ 70 ಅಡಿ ಆಳದ ನೀರಿನ ಹೊಂಡಕ್ಕೆ ಬಿದ್ದು ಸಾವಿಗೀಡಾದ 27 ವರ್ಷದ ಟೆಕ್ಕಿ ಯುವರಾಜ್ ಮೆಹ್ತಾ ಅವರ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಟೆಕ್ಕಿಯ ಮೂಗು ಕೆಸರಿನಿಂದ ಮುಚ್ಚಿಹೋಗಿತ್ತು ಮತ್ತು ಶ್ವಾಸಕೋಶ ಹಾಗೂ ಎದೆಯಲ್ಲಿ ನೀರು ಇತ್ತು ಎಂದು ತಿಳಿದುಬಂದಿದೆ
ಟೆಕ್ಕಿ ನೀರಿನಲ್ಲಿ ಮುಳುಗಿ ಉಸಿರುಗಟ್ಟಿದ್ದಾರೆ, ನಂತರ ಹೃದಯ ಸ್ತಂಭನ ಸಂಭವಿಸಿ ಸಾವಿಗೀಡಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನೋಯ್ಡಾ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಜ. 16ರ ತಡರಾತ್ರಿ ಗುರುಗ್ರಾಮದಲ್ಲಿರುವ ತಮ್ಮ ಕಚೇರಿಯಿಂದ ಸೆಕ್ಟರ್ 150 ರಲ್ಲಿರುವ ಟಾಟಾ ಯುರೇಕಾ ಪಾರ್ಕ್‌ನಲ್ಲಿರುವ ತಮ್ಮ ನಿವಾಸಕ್ಕೆ ಹಿಂತಿರುಗುತ್ತಿದ್ದರು. ದಟ್ಟವಾದ ಮಂಜಿನಿಂದಾಗಿ ಗೋಚರತೆ ಶೂನ್ಯಕ್ಕೆ ಇಳಿದಿದ್ದರಿಂದ, ಅವರ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಾರು ರಸ್ತೆಯಿಂದ ಜಾರಿ ಹೊಂಡಕ್ಕೆ ಬಿದ್ದಿತ್ತು.
ಸಂತ್ರಸ್ತನ ಕುಟುಂಬದ ಪ್ರಕಾರ, ಯುವರಾಜ್ ಭಾಗಶಃ ಮುಳುಗಿದ್ದ ಕಾರಿನಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದರು ಮತ್ತು ಕಾರಿನ ಮೇಲೆ ನಿಂತು ಸುಮಾರು ಎರಡು ಗಂಟೆಗಳ ಕಾಲ ಸಹಾಯಕ್ಕಾಗಿ ಕಿರುಚುತ್ತಿದ್ದರು. ನಂತರ ಅವರು ಮುಳುಗಿ ಸಾವಿಗೀಡಾಗಿದ್ದಾರೆ.
ಸಂತ್ರಸ್ತನ ತಂದೆ ಪೊಲೀಸರಿಗೆ ದೂರು ಸಲ್ಲಿಸಿದ್ದು, ಸೆಕ್ಟರ್ 150ರ ನಿವಾಸಿಗಳು ಹೊಂಡದ ಬಳಿ ಬ್ಯಾರಿಕೇಡ್‌ಗಳು ಮತ್ತು ಪ್ರತಿಫಲಕಗಳನ್ನು ಅಳವಡಿಸುವಂತೆ ಪದೇ ಪದೆ ವಿನಂತಿಸಿದ್ದರು. ಆದರೆ, ನೋಯ್ಡಾ ಪ್ರಾಧಿಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
'ಅಧಿಕಾರಿಗಳು ಮತ್ತು ಸಿಬ್ಬಂದಿ ಯುವರಾಜ್ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಅವರ ಬಳಿ ಯಾವುದೇ ಡೈವರ್‌ಗಳು ಇರಲಿಲ್ಲ. ಈ ವಿಷಯದಲ್ಲಿ ಆಡಳಿತದ ಸಂಪೂರ್ಣ ನಿರ್ಲಕ್ಷ್ಯವಿದೆ' ಎಂದು ಕುಟುಂಬವು ಮಾಧ್ಯಮಗಳಿಗೆ ತಿಳಿಸಿದೆ.
'ನನ್ನ ಮಗ ತನ್ನನ್ನು ತಾನು ಉಳಿಸಿಕೊಳ್ಳಲು ಕಷ್ಟಪಡುತ್ತಿದ್ದ. ಅವನು ಸಹಾಯಕ್ಕಾಗಿ ಕೂಗುತ್ತಿದ್ದನು, ಸಹಾಯಕ್ಕಾಗಿ ಜನರನ್ನು ಅಂಗಲಾಚುತ್ತಿದ್ದನು. ಆದರೆ, ಹೆಚ್ಚಿನ ಜನರು ನೋಡುತ್ತಾ ನಿಂತಿದ್ದರು. ಕೆಲವರು ವಿಡಿಯೋ ಮಾಡುತ್ತಿದ್ದರು. ನನ್ನ ಮಗ ಸಾವಿನಿಂದ ಪಾರಾಗಲು ಎರಡು ಗಂಟೆ ಹೆಣಗಾಡಿದನು' ಎಂದ ಅವರು, ಕಠಿಣ ಕ್ರಮ ಮತ್ತು ಈ ರೀತಿಯ ಘಟನೆಗಳನ್ನು ತಡೆಗಟ್ಟಲು ಉತ್ತಮ ಸುರಕ್ಷತಾ ವ್ಯವಸ್ಥೆಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ಮೂವರು ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಆದೇಶಿಸಿದ್ದು, ಐದು ದಿನಗಳಲ್ಲಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.
ಗ್ರೇಟರ್ ನೋಯ್ಡಾ ಪೊಲೀಸರು ಭಾನುವಾರ ರಿಯಲ್ ಎಸ್ಟೇಟ್ ಕಂಪನಿಗಳಾದ MZ ವಿಜ್‌ಟೌನ್ ಪ್ಲಾನರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಲೋಟಸ್ ಗ್ರೀನ್ಸ್ ಕನ್‌ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ 2023 (ಬಿಎನ್‌ಎಸ್) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.