ಚೆನ್ನೈ: ತಮಿಳುನಾಡು ವಿಧಾನಸಭಾ ಅಧಿವನೇಶನದ ಮೊದಲ ದಿನವೇ ಹೈಡ್ರಾಮಾ ನಡೆದಿದ್ದು, ರಾಷ್ಟ್ರಗೀತೆಗೆ ಅವಕಾಶ ಮಾಡಿಕೊಡದೇ ಸ್ಪೀಕರ್ ಅಪಮಾನ ಮಾಡಿದ ಹಿನ್ನಲೆಯಲ್ಲಿ ರಾಜ್ಯಪಾಲ ಆರ್ ಎನ್ ರವಿ ಭಾಷಣ ಮಾಡದೇ ಹೊರಟು ಹೋದ ಘಟನೆ ನಡೆದಿದೆ.
ತಮಿಳುನಾಡಿನಲ್ಲಿ ಇಂದಿನಿಂದ ವಿಧಾನಸಭಾ ಅಧಿವೇಶನ ಆರಂಭವಾಗಿದ್ದು, ತಮಿಳು ನಾಡಗೀತೆಯೊಂದಿಗೆ ಅಧಿವೇಶನ ಆರಂಭಿಸಲಾಯಿತು.
ಆದರೆ ನಾಡಗೀತೆ ಬಳಿಕ ರಾಷ್ಟ್ರಗೀತೆ ಹಾಡಲು ಸ್ಪೀಕರ್ ಅನುವು ಮಾಡಿಕೊಟ್ಟಿಲ್ಲ. ಇದರಿಂದ ಬೇಸರಗೊಂಡ ರಾಜ್ಯಪಾಲ ಆರ್ ಎನ್ ರವಿ ತಮ್ಮ ಭಾಷಣ ಮಾಡದೇ ಸಭೆಯಿಂದ ನಿರ್ಗಮಿಸಿದ್ದಾರೆ.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಓದಲು ರಾಜ್ಯಪಾಲರು ನಿರಾಕರಿಸಿರುತ್ತಿರುವುದು ಇದು ಮೂರನೇ ಬಾರಿ.
ಲೋಕಭವನ ಮಾಹಿತಿ
ವಿಧಾನಸಭೆ ಅಧಿವೇಶನವು ರಾಷ್ಟ್ರಗೀತೆಯ ಬದಲಿಗೆ ತಮಿಳು ಗೀತೆಯೊಂದಿಗೆ ಆರಂಭಗೊಂಡಿರುವುದು ಸಂವಿಧಾನಾತ್ಮಕ ಕರ್ತವ್ಯದ ಉಲ್ಲಂಘನೆ ಎಂದು ರಾಜ್ಯಪಾಲರ ಕಚೇರಿ ಆರೋಪಿಸಿದೆ. ಇದರಿಂದ ರಾಷ್ಟ್ರಗೀತೆಗೆ ಮತ್ತೊಮ್ಮೆ ಅವಮಾನವಾಗಿದೆ ಎಂದು ಲೋಕಭವನದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಭಾತ್ಯಾಗದ ಬಳಿಕ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಸರ್ಕಾರ ಸಿದ್ಧಪಡಿಸಿದ ಭಾಷಣವು ಆಧಾರರಹಿತ ಆರೋಪಗಳು, ದಾರಿತಪ್ಪಿಸುವ ಹೇಳಿಕೆಗಳು ಹಾಗೂ ಜನತೆಗೆ ಸಂಬಂಧಿಸಿದ ಹಲವು ಗಂಭೀರ ವಿಷಯಗಳ ನಿರ್ಲಕ್ಷ್ಯವನ್ನು ಒಳಗೊಂಡಿದೆ ಎಂದು ಆರೋಪಿಸಲಾಗಿದೆ.
ಡಿಎಂಕೆ ಸರ್ಕಾರ ತಮಿಳುನಾಡು 12 ಲಕ್ಷ ಕೋಟಿ ರೂ.ಗಿಂತ ಅಧಿಕ ಹೂಡಿಕೆಗಳನ್ನು ಆಕರ್ಷಿಸಿದೆ ಎಂಬ ಹೇಳಿಕೆಯನ್ನು ಪ್ರಶ್ನಿಸಿರುವ ಲೋಕಭವನ, ಅನೇಕ ಒಪ್ಪಂದಗಳು ಕೇವಲ ಕಾಗದದಲ್ಲೇ ಉಳಿದಿವೆ ಎಂದು ಹೇಳಿದೆ. ವಾಸ್ತವಿಕ ಹೂಡಿಕೆ ಸೀಮಿತವಾಗಿದ್ದು, ವಿದೇಶಿ ನೇರ ಹೂಡಿಕೆ ಆಕರ್ಷಿಸುವ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು ನಾಲ್ಕನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಕುಸಿದಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇದೇ ಮೊದಲೇನಲ್ಲ
ಕಳೆದ ವರ್ಷವೂ ಇದೇ ವಿಚಾರಕ್ಕೆ ರಾಜ್ಯಪಾಲ ರವಿ ಮತ್ತು ತಮಿಳುನಾಡು ಸರ್ಕಾರದ ನಡುವೆ ಸಂಘರ್ಷ ಏರ್ಪಟ್ಟಿತ್ತು. ರಾಷ್ಟ್ರಗೀತೆ ವಿಚಾರವಾಗಿ ತಮ್ಮ ಭಾಷಣದಲ್ಲಿ ಅಸಮಾಧಾನ ತೋರ್ಪಡಿಸುತ್ತಿದ್ದಾಗ ರಾಜ್ಯಪಾಲರ ಮೈಕ್ ಅನ್ನು ಪದೇ ಪದೇ ಆಫ್ ಮಾಡಲಾಗಿತ್ತು. ಬಳಿಕ ತಮ್ಮ ಭಾಷಣವನ್ನು ಮೊಟಕುಗೊಳಿಸಿದ್ದ ಸ್ಪೀಕರ್ ತಮ್ಮನ್ನು ಅಪಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಅಲ್ಲಿಂದ್ದ ಎದ್ದು ಹೊರಟಿದ್ದರು.
2024ರಲ್ಲೂ ಕೂಡ ರಾಜ್ಯಪಾಲರು ವಿಧಾನಸಭೆಯನ್ನುದ್ದೇಶಿಸಿ ಭಾಷಣ ಮಾಡಿರಲಿಲ್ಲ. ಕಳೆದ ವರ್ಷ, ತಮ್ಮ ಭಾಷಣದ ಆರಂಭದಲ್ಲಿ ರಾಷ್ಟ್ರಗೀತೆ ಹಾಡದ ಕಾರಣ ಅವರು ವಿಧಾನಸಭೆಯಿಂದ ಹೊರನಡೆದಿದ್ದರು. ತಮಿಳುನಾಡಿನ ಲೋಕ ಭವನವು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿ, ರಾಜ್ಯಪಾಲ ಆರ್.ಎನ್. ರವಿ ಅವರು ಉದ್ಘಾಟನಾ ಭಾಷಣ ಮಾಡುವ ಮೊದಲು ವಿಧಾನಸಭೆಯಿಂದ ಹೊರನಡೆದ ಕಾರಣಗಳನ್ನು ತಿಳಿಸಿತ್ತು.
ಏತನ್ಮಧ್ಯೆ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ತಮಿಳುನಾಡು ಸ್ಪೀಕರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕಳುಹಿಸಿದ್ದಾರೆ. ತಮಿಳುನಾಡು ವಿಧಾನಸಭೆಯ ಸ್ಪೀಕರ್ ಎಂ. ಅಪ್ಪಾವು ಅವರಿಗೆ ಹುಟ್ಟುಹಬ್ಬದ ಶುಭಾಶಯ, ನಿಮಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ದೀರ್ಘಾಯುಷ್ಯ ಸಿಗಲಿ ಎಂದು ಬಿರ್ಲಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.