ಕಳೆದ ವರ್ಷ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಭಾವ್ಯ ಯುದ್ಧ ಕೊನೆಗೊಳಿಸಿದ ಕೀರ್ತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ. ಈ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಡೊನಾಲ್ಡ್ ಟ್ರಂಪ್ ಅವರು ಈ ರೀತಿ ಹೇಳಿಕೆ ನೀಡುತ್ತಿರುವುದು ಇದು 70ನೇ ಬಾರಿ ಇನ್ನೂ ಏಕೆ ಮೌನವಾಗಿದ್ದೀರಿ ಎಂದು ಕೇಳಿದೆ.
ವಾಷಿಂಗ್ಟನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿನ್ನೆ ಟ್ರಂಪ್ ಅವರ ಹೇಳಿಕೆಗಳ ನಂತರ ಕಾಂಗ್ರೆಸ್ ಪ್ರತಿಕ್ರಿಯೆ ಬಂದಿದೆ. ಅಲ್ಲಿ ಅವರು ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿದ್ದು ತಮ್ಮ ಎರಡನೇ ಅಧ್ಯಕ್ಷ ಅವಧಿಯ ಮೊದಲ ವರ್ಷದ ಸಾಧನೆಗಳಲ್ಲಿ ಪಟ್ಟಿ ಮಾಡಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ಇತ್ತೀಚಿನವರೆಗೂ ಎಣಿಕೆ 68 ರಷ್ಟಿತ್ತು, ನಿನ್ನೆ ಮಂಗಳವಾರ ಎರಡು ಬಾರಿ, ಒಮ್ಮೆ ತಮ್ಮ ಆರಂಭಿಕ ಹೇಳಿಕೆಯಲ್ಲಿ ಮತ್ತು ಮತ್ತೊಮ್ಮೆ ಪ್ರಶ್ನೋತ್ತರ ಅವಧಿಯಲ್ಲಿ ಟ್ರಂಪ್ ಈ ಹೇಳಿಕೆಯನ್ನು ಪುನರಾವರ್ತಿಸಿದ ನಂತರ 70 ಕ್ಕೆ ಏರಿಕೆಯಾಗಿದೆ, ಈಗಲಾದರೂ ಮೋದಿ ಕಡೆಯಿಂದ, ಸರ್ಕಾರ ಕಡೆಯಿಂದ ಸ್ಪಷ್ಟನೆ ನೀಡಲಿ ಎಂದು ಹೇಳಿದ್ದಾರೆ.
ಮೇ 10, 2025 ರಂದು ಆಪರೇಷನ್ ಸಿಂದೂರ್ ನ ಹಠಾತ್ ಮತ್ತು ಅನಿರೀಕ್ಷಿತ ಸ್ಥಗಿತಕ್ಕೆ ಪ್ರಧಾನಿ ಮೋದಿಯವರ ಆತ್ಮೀಯ ಸ್ನೇಹಿತ ಎಂದು ಹೇಳಿಕೊಂಡಿರುವ ಡೊನಾಲ್ಡ್ ಟ್ರಂಪ್ ತಾವು ಕಾರಣ ಎಂದು ಪದೇ ಪದೇ ಹೇಳುತ್ತಿದ್ದಾರೆ.
ಆದರೆ, ಪಾಕಿಸ್ತಾನದೊಂದಿಗಿನ ತಮ್ಮ ಮಾತುಕತೆಗಳಲ್ಲಿ ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಇಲ್ಲ ಎಂದು ಭಾರತ ನಿರಂತರವಾಗಿ ಸಮರ್ಥಿಸಿಕೊಂಡು ಬಂದಿದೆ.