ಗಾಜಿಯಾಬಾದ್: ಚಪಾತಿ ತಯಾರಿಸುವಾಗ ಅಡುಗೆ ಭಟ್ಟ ಹಿಟ್ಟಿನ ಮೇಲೆ ಉಗುಳುತ್ತಿರುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಗಾಜಿಯಾಬಾದ್ ಪೊಲೀಸರು ನಗರದ ಸ್ಥಳೀಯ ಉಪಾಹಾರ ಗೃಹದ ಮಾಲೀಕರು ಮತ್ತು ಅಡುಗೆಯನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಈ ಸಂಬಂಧ ಗೋವಿಂದಪುರದ ಶಿವ ಮಂದಿರದ ಅರ್ಚಕ ಆಚಾರ್ಯ ಶಿವಕಾಂತ್ ಪಾಂಡೆ ಅವರು ನೀಡಿದ ಔಪಚಾರಿಕ ದೂರಿನ ಮೇರೆಗೆ ಕವಿನಗರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಪೊಲೀಸರ ಪ್ರಕಾರ, ಈ ಘಟನೆ ಜನವರಿ 19 ರಂದು ನಡೆದಿದೆ. ವಿಡಿಯೋವನ್ನು ಆನ್‌ಲೈನ್‌ನಲ್ಲಿ ನೋಡಿದ ನಂತರ, ಅರ್ಚಕರು ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಪೊಲೀಸರು ದೇವಾಲಯದಿಂದ ಸುಮಾರು 50 ಮೀಟರ್ ದೂರದಲ್ಲಿರುವ ಹೋಟೆಲ್ ಅನ್ನು ಪರಿಶೀಲಿಸಿದ್ದಾರೆ.
ಸಹಾಯಕ ಪೊಲೀಸ್ ಆಯುಕ್ತ(ಕವಿನಗರ) ಸೂರ್ಯಬಾಲಿ ಮೌರ್ಯ ಅವರು ಹೋಟೆಲ್ ಮಾಲೀಕ ಅಮ್ಜಾದ್ ಅವರನ್ನು ಕರೆದು ವಿಚಾರಣೆ ನಡೆಸಿದ್ದು, ಘಟನೆಯ ಬಗ್ಗೆ ಸರಿಯಾದ ವಿವರಣೆ ನೀಡಲು ವಿಫಲರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಘಟನೆ ಬೆಳಕಿಗೆ ಬಂದ ನಂತರ ಅಮ್ಜಾದ್ ಅವರು ಅಡುಗೆ ಭಟ್ಟ ಫೈಜಾನ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಮಾಲೀಕ ಮತ್ತು ಅಡುಗೆಯವರಿಬ್ಬರನ್ನೂ ಮಂಗಳವಾರ ಬಂಧಿಸಲಾಗಿದ್ದು, ಅವರನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.