ನವದೆಹಲಿ: ಕೇಂದ್ರ ದೆಹಲಿಯ ಟ್ರಾಫಿಕ್ ಸಿಗ್ನಲ್‌ನಲ್ಲಿ ಗುಲಾಬಿ ಹೂಗಳನ್ನು ಮಾರಾಟ ಮಾರುತ್ತಿದ್ದ 11 ವರ್ಷದ ಬಾಲಕಿಯ ಮೇಲೆ ಇ-ರಿಕ್ಷಾ ಚಾಲಕನೊಬ್ಬ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಾಲಕಿಯನ್ನು ಬಿಟ್ಟುಹೋಗಿದ್ದ.
ಮೊನ್ನೆ ಜನವರಿ 11 ರಂದು ಮಧ್ಯಾಹ್ನ 3.30 ರ ಸುಮಾರಿಗೆ ಕರೋಲ್ ಬಾಗ್ ಬಳಿಯ ಪ್ರಸಾದ್ ನಗರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಬಾಲಕಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಗುಲಾಬಿಗಳನ್ನು ಮಾರಾಟ ಮಾಡುತ್ತಿದ್ದಳು.ಈ ವೇಳೆ ರಿಕ್ಷಾ ಚಾಲಕ ಬಾಲಕಿಯನ್ನು ಹತ್ತಿರಕ್ಕೆ ಬರಲು ಹೇಳಿ ಪುಸಲಾಯಿಸಿ ಕರೆದೊಯ್ದಿದ್ದಾನೆ. ಪೊಲೀಸರು ಆರೋಪಿಯನ್ನು 40 ವರ್ಷದ ದುರ್ಗೇಶ್ ಎಂದು ಗುರುತಿಸಿದ್ದು, ಪ್ರಯಾಣಿಕರನ್ನು ಇಳಿಸಿದ ನಂತರ ಸಿಗ್ನಲ್‌ನಲ್ಲಿ ತನ್ನ ಇ-ರಿಕ್ಷಾವನ್ನು ನಿಲ್ಲಿಸಿದನು.
ಪುಟ್ಟ ಬಾಲಕಿ ಹೂವುಗಳನ್ನು ಮಾರಾಟ ಮಾಡಲು ಅವನ ಬಳಿಗೆ ಬಂದಾಗ, ಎಲ್ಲಾ ಗುಲಾಬಿಗಳನ್ನು ಒಂದೇ ಬಾರಿಗೆ ಮಾರಾಟ ಮಾಡಲು ಸಹಾಯ ಮಾಡುವ ಭರವಸೆ ನೀಡಿ ಆಕೆಗೆ ಆಮಿಷವೊಡ್ಡಿದ್ದನು. ನಂತರ ತನ್ನ ಆಟೋದಲ್ಲಿ ಕುಳ್ಳಿರಿಸಿ ಕರೆದೊಯ್ದಿದ್ದಾನೆ.
ನಂತರ ಆರೋಪಿಯು ಬಾಲಕಿಯನ್ನು ಹತ್ತಿರದ ಅರಣ್ಯ ಪ್ರದೇಶಕ್ಕೆ ಕರೆದೊಯ್ದು, ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ತೀವ್ರ ಗಾಯಗಳಿಂದ ಬಾಲಕಿ ಪ್ರಜ್ಞಾಹೀನಗೊಂಡಿದ್ದಾಳೆ, ಆಟೋ ಚಾಲಕ ಬಾಲಕಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಸ್ವಲ್ಪ ಸಮಯದ ನಂತರ, ಬಾಲಕಿಗೆ ಪ್ರಜ್ಞೆ ಬಂದು ಎದ್ದು ಬಂದು ಆಕೆಯ ಕುಟುಂಬ ಸದಸ್ಯರನ್ನು ಸಂಪರ್ಕಿಸಿದ್ದಾಳೆ. ಮನೆಯವರು ಆಕೆಯನ್ನು ಆಸ್ಪತ್ರೆಗೆ ಸಾಗಿಸಿ ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರು ಪೋಕ್ಸೋ ಕಾಯ್ದೆಯ ನಿಬಂಧನೆಗಳ ಜೊತೆಗೆ, ಅತ್ಯಾಚಾರದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗೆ ಹುಡುಕಾಟ ನಡೆಸಿದ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾದರು.