ಪ್ರಧಾನಿ ನರೇಂದ್ರ ಮೋದಿ ಇಂದು ಶುಕ್ರವಾರ ಕೇರಳದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಹೊಸ ರೈಲು ಸೇವೆಗಳಿಗೆ ಚಾಲನೆ ನೀಡಿದರು. ಇದು ಚುನಾವಣೆಗೆ ಸಜ್ಜಾಗಿರುವ ಕೇರಳ ರಾಜ್ಯದಲ್ಲಿ ಪ್ರಮುಖ ರಾಜಕೀಯ ಮತ್ತು ಮೂಲಸೌಕರ್ಯ ಅಭಿಯಾನವಾಗಿದೆ ಎನ್ನಬಹುದು.
ಪ್ರಧಾನಿ ಮೋದಿ ಬೆಳಗ್ಗೆ ಕೇರಳ ರಾಜಧಾನಿ ತಿರುವನಂತಪುರಕ್ಕೆ ಆಗಮಸಿದರು. ಅವರನ್ನು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಇತರ ಗಣ್ಯರು ಬರಮಾಡಿಕೊಂಡರು. ನಂತರ ಮೆರವಣಿಗೆಯಲ್ಲಿ ಸಾಗಿದರು.
ಇತ್ತೀಚಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಎಡ ಪ್ರಜಾಸತ್ತಾತ್ಮಕ ರಂಗ (LDF)ದಿಂದ ತಿರುವನಂತಪುರಂ ಕಾರ್ಪೊರೇಷನ್‌ನ ನಿಯಂತ್ರಣವನ್ನು ವಶಪಡಿಸಿಕೊಂಡ ನಂತರ, ಸ್ಥಳೀಯ ಸಂಸ್ಥೆಯ ಮೇಲಿನ ಎಡಪಕ್ಷಗಳ 45 ವರ್ಷಗಳ ಹಿಡಿತವನ್ನು ಕೊನೆಗೊಳಿಸಿದೆ. ಇದಾದ ನಂತರ ಇದು ಪ್ರಧಾನಿಯವರ ಮೊದಲ ರಾಜ್ಯ ಭೇಟಿಯಾಗಿದೆ.
ವಿವಿಧ ಯೋಜನೆಗಳ ಉದ್ಘಾಟನೆ
ಬೀದಿ ವ್ಯಾಪಾರಿಗಳಿಗೆ ಆರ್ಥಿಕ ಸೇರ್ಪಡೆಯ ಮುಂದಿನ ಹಂತವನ್ನು ಗುರುತಿಸುವ ಪಿಎಂ ಎಸ್‌ವಿಎನಿಧಿ ಕ್ರೆಡಿಟ್ ಕಾರ್ಡ್ ಮತ್ತು ರಾಜ್ಯ ರಾಜಧಾನಿಯಲ್ಲಿ ಆಧುನಿಕ ಅಂಚೆ ಕಚೇರಿಯನ್ನು ಉದ್ಘಾಟಿಸಲಾಯಿತು. ಯುಪಿಐ-ಸಂಯೋಜಿತ, ಬಡ್ಡಿರಹಿತ ರಿವಾಲ್ವಿಂಗ್ ಕ್ರೆಡಿಟ್ ಸೌಲಭ್ಯವಾದ ಪಿಎಂ ಎಸ್‌ವಿಎನಿಧಿ ಕ್ರೆಡಿಟ್ ಕಾರ್ಡ್, ತ್ವರಿತ ದ್ರವ್ಯತೆ ಒದಗಿಸುತ್ತದೆ. ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುತ್ತದೆ. ಕೇರಳದ ಬೀದಿ ವ್ಯಾಪಾರಿಗಳು ಸೇರಿದಂತೆ ಒಂದು ಲಕ್ಷ ಫಲಾನುಭವಿಗಳಿಗೆ ಪ್ರಧಾನಿ ಮೋದಿ ಪಿಎಂ ಎಸ್‌ವಿಎನಿಧಿ ಸಾಲಗಳನ್ನು ಸಹ ವಿತರಿಸಿದರು.
ನಾಲ್ಕು ಹೊಸ ರೈಲು ಸೇವೆಗಳಿಗೆ ಚಾಲನೆ
ರೈಲು ಸಂಪರ್ಕಕ್ಕೆ ಪ್ರಮುಖ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಧಾನ ಮಂತ್ರಿ ಅವರು ನಾಲ್ಕು ಹೊಸ ರೈಲು ಸೇವೆಗಳಿಗೆ ಚಾಲನೆ ನೀಡಿದರು. ಇದರಲ್ಲಿ ಮೂರು ಅಮೃತ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸೇರಿವೆ. ಇವು ಕೇರಳ, ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ನಡುವೆ ಪ್ರಯಾಣ ಅವಧಿಯನ್ನು ಕಡಿಮೆ ಮಾಡಿ ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುತ್ತವೆ.
ತಿರುವನಂತಪುರಂ-ತಾಂಬರಂ ಅಮೃತ್ ಭಾರತ್ ಎಕ್ಸ್‌ಪ್ರೆಸ್ (ತಿರುವನಂತಪುರ ಸೆಂಟ್ರಲ್ ನಿಲ್ದಾಣದಿಂದ), ನಾಗರಕೋಯಿಲ್-ಮಂಗಳೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್ (ತಿರುವನಂತಪುರ ಸೆಂಟ್ರಲ್ ನಿಲ್ದಾಣದಿಂದ), ತಿರುವನಂತಪುರಂ-ಚಾರ್ಲಪ್ಪಳ್ಳಿ ಅಮೃತ್ ಭಾರತ್ ಎಕ್ಸ್‌ಪ್ರೆಸ್ (ತಿರುವನಂತಪುರ ಉತ್ತರ ನಿಲ್ದಾಣದಿಂದ) ಮತ್ತು ತ್ರಿಶೂರ್-ಗುರುವಾಯೂರ್ ಪ್ಯಾಸೆಂಜರ್ ರೈಲು (ತ್ರಿಶೂರ್ ನಿಲ್ದಾಣದಿಂದ)ಗಳಿಗೆ ಚಾಲನೆ ನೀಡಿದ್ದಾರೆ.
ವಿಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ, ಪ್ರಧಾನಿ ಮೋದಿ, ತಿರುವನಂತಪುರದಲ್ಲಿ CSIR-NIIST ನಾವೀನ್ಯತೆ, ತಂತ್ರಜ್ಞಾನ ಮತ್ತು ಉದ್ಯಮಶೀಲತಾ ಕೇಂದ್ರಕ್ಕೆ ಅಡಿಪಾಯ ಹಾಕಿದರು. ಈ ಕೇಂದ್ರವು ಜೀವ ವಿಜ್ಞಾನ ಮತ್ತು ಜೈವಿಕ ಆರ್ಥಿಕತೆಯ ಮೇಲೆ ಕೇಂದ್ರೀಕರಿಸುತ್ತದೆ. ಆಯುರ್ವೇದದಂತಹ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳನ್ನು ಆಧುನಿಕ ಜೈವಿಕ ತಂತ್ರಜ್ಞಾನ, ಸುಸ್ಥಿರ ಪ್ಯಾಕೇಜಿಂಗ್ ಮತ್ತು ಹಸಿರು ಹೈಡ್ರೋಜನ್‌ನೊಂದಿಗೆ ಸಂಯೋಜಿಸುತ್ತದೆ. ನವೋದ್ಯಮಗಳು, ತಂತ್ರಜ್ಞಾನ ವರ್ಗಾವಣೆ ಮತ್ತು ಜಾಗತಿಕ ಸಹಯೋಗವನ್ನು ಉತ್ತೇಜಿಸುತ್ತದೆ. ಸಂಶೋಧನೆಯನ್ನು ಮಾರುಕಟ್ಟೆ-ಸಿದ್ಧ ಪರಿಹಾರಗಳು ಮತ್ತು ಉದ್ಯಮಗಳಾಗಿ ಪರಿವರ್ತಿಸಲು ಇದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ಶ್ರೀ ಚಿತ್ರ ತಿರುನಾಳ್ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಅತ್ಯಾಧುನಿಕ ರೇಡಿಯೊ ಸರ್ಜರಿ ಕೇಂದ್ರಕ್ಕೂ ಮೋದಿ ಅಡಿಪಾಯ ಹಾಕಿದರು. ಈ ಸೌಲಭ್ಯವು ಸಂಕೀರ್ಣ ಮೆದುಳಿನ ಅಸ್ವಸ್ಥತೆಗಳಿಗೆ ಹೆಚ್ಚು ನಿಖರವಾದ ಪರಿಣಾಮಕಾರಿ ಚಿಕಿತ್ಸೆಯನ್ನು ಒದಗಿಸುತ್ತದೆ. ಈ ಪ್ರದೇಶದಲ್ಲಿ ತೃತೀಯ ಹಂತದ ಆರೋಗ್ಯ ರಕ್ಷಣೆಯನ್ನು ಬಲಪಡಿಸುತ್ತದೆ.
ತಿರುವನಂತಪುರದಲ್ಲಿ ಹೊಸ ಪೂಜಾಪುರ ಮುಖ್ಯ ಅಂಚೆ ಕಚೇರಿಯನ್ನು ಪ್ರಧಾನಿ ಉದ್ಘಾಟಿಸಿದರು. ತಂತ್ರಜ್ಞಾನ ಚಾಲಿತ ಸೌಲಭ್ಯವು ವ್ಯಾಪಕ ಶ್ರೇಣಿಯ ಅಂಚೆ, ಬ್ಯಾಂಕಿಂಗ್, ವಿಮೆ ಮತ್ತು ಡಿಜಿಟಲ್ ಸೇವೆಗಳನ್ನು ಒದಗಿಸಲಿದ್ದು, ನಾಗರಿಕ ಕೇಂದ್ರಿತ ಸೇವಾ ವಿತರಣೆಯನ್ನು ಬಲಪಡಿಸಲಿದೆ.