ಮುಂಬೈ: ಥಾಣೆಯ ಮುಂಬ್ರಾ ವಾರ್ಡ್ ಅನ್ನು ಸಂಪೂರ್ಣವಾಗಿ ಹಸಿರುಮಯ ಮಾಡಲಾಗುತ್ತದೆ ಎಂಬ ಎಐಎಂಐಎಂ ನಾಯಕಿ ಸಹರ್ ಶೇಖ್ ಅವರ ವಿವಾದಾತ್ಮಕ ಹೇಳಿಕೆಗೆ ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ತಿರುಗೇಟು ನೀಡಿದ್ದು, ಥಾಣೆ ಕೇಸರಿ ಬಣ್ಣದಲ್ಲಿದ್ದು, ಅದೇ ಬಣ್ಣದಲ್ಲೇ ಉಳಿಯಲಿದೆ ಎಂದು ಹೇಳಿದ್ದಾರೆ.
ಪಾಲಿಕೆ ಚುನಾವಣೆಯಲ್ಲಿ ಮುಂಬ್ರಾ ವಾರ್ಡ್ ನಲ್ಲಿ ಗೆದಿದ್ದ ಅಖಿಲ ಭಾರತ ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಾಯಕಿ ಸಹರ್ ಶೇಖ್, 'ಮುಂದಿನ ಐದು ವರ್ಷಗಳಲ್ಲಿ, ಮುಂಬ್ರಾದಲ್ಲಿರುವ ಪ್ರತಿಯೊಬ್ಬ ಅಭ್ಯರ್ಥಿಯೂ AIMIM ನವರಾಗಿರುತ್ತಾರೆ. ಮುಂಬ್ರಾವನ್ನು ಸಂಪೂರ್ಣವಾಗಿ ಹಸಿರು ಬಣ್ಣಕ್ಕೆ ತಿರುಗಿಸಬೇಕು ಎಂದು ಹೇಳಿದ್ದರು.
ಅವರ ಈ ಹೇಳಿಕೆ ವಿವಾದಕ್ಕೀಡಾಗುತ್ತಲೇ ಎಚ್ಚೆತ್ತಿದ್ದ ಆಕೆ ಈ ಕುರಿತು ಸ್ಪಷ್ಟನೆ ನೀಡಿ, 'ನನ್ನ ಪಕ್ಷದ ಧ್ವಜ ಹಸಿರು. ಅದು ಕೇಸರಿ ಬಣ್ಣದ್ದಾಗಿದ್ದರೆ, ನಾವು ಮುಂಬ್ರಾ ಭಗವ (ಕೇಸರಿ) ಬಣ್ಣ ಬಳಿಯುತ್ತೇವೆ ಎಂದು ಹೇಳುತ್ತಿದ್ದೆ. ಆದರೆ ನನ್ನ ಪಕ್ಷದ ಬಣ್ಣ ಹಸಿರಾಗಿದ್ದು, ಹೀಗಾಗಿ ಮುಂಬ್ರಾವನ್ನು ಹಸಿರು ಬಣ್ಣಕ್ಕೆ ತಿರುಗಿಸುತ್ತೇವೆ ಎಂದು ಹೇಳಿದ್ದೆ ಅಷ್ಟೇ.. ಇದರಲ್ಲಿ ವಿವಾದ ಬೇಡ ಎಂದು ಹೇಳಿದ್ದರು.
"ಹಸಿರು" ಎಂಬ ಪದವನ್ನು AIMIM ಪಕ್ಷದ ಧ್ವಜವನ್ನು ಸಂಕೇತಿಸಲು ಮಾತ್ರ ಉದ್ದೇಶಿಸಲಾಗಿದೆ ಮತ್ತು ಯಾವುದೇ ಧಾರ್ಮಿಕ ಭಾವನೆಯನ್ನು ಕೆರಳಿಸಲು ಅಲ್ಲ. ತಮ್ಮ ಹೇಳಿಕೆಗಳನ್ನು ಸಂದರ್ಭದಿಂದ ಹೊರಗಿಡಲಾಗಿದೆ ಮತ್ತು ಆಡಳಿತ ಪಕ್ಷವು ರಾಜಕೀಯ ಲಾಭಕ್ಕಾಗಿ ಉದ್ದೇಶಪೂರ್ವಕವಾಗಿ ತಮ್ಮ ಮಾತುಗಳನ್ನು ತಪ್ಪಾಗಿ ನಿರೂಪಿಸುತ್ತಿದೆ ಎಂದು ಸಹರ್ ಶೇಖ್ ಹೇಳಿದ್ದಾರೆ.
ಅಲ್ಲದೆ AIMIM ನಾಯಕರು ನಾಗರಿಕ ಸಮಸ್ಯೆಗಳು, ಅಲ್ಪಸಂಖ್ಯಾತ ಪ್ರಾತಿನಿಧ್ಯ ಮತ್ತು ಸ್ಥಳೀಯ ಆಡಳಿತದ ಮೇಲೆ, ವಿಶೇಷವಾಗಿ ಮುಂಬ್ರಾದಂತಹ ಪ್ರದೇಶದಲ್ಲಿ ಪಕ್ಷವು ತಳಮಟ್ಟದ ಬೆಂಬಲವನ್ನು ಹೊಂದಿರುವ ಪ್ರದೇಶಗಳಲ್ಲಿ ತಮ್ಮ ಗಮನವನ್ನು ಹೊಂದಿದ್ದಾರೆ ಎಂದು ಸಮರ್ಥಿಸಿಕೊಂಡರು.
ಅದಾಗ್ಯೂ ಸಹರ್ ಶೇಖ್ ಅವರ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಕೋಮುಸೌಹಾರ್ಧ ಸೂಕ್ಷ್ಮ ಹೇಳಿಕೆ ನೀಡುವುದು ಬೇಡ ಎಂದು ಇತರೆ ಪಕ್ಷಗಳ ನಾಯಕರು ಕಿಡಿಕಾರುತ್ತಿದ್ದಾರೆ.
ಥಾಣೆ ಕೇಸರಿ ಬಣ್ಣದಲ್ಲಿದ್ದು, ಅದೇ ಬಣ್ಣದಲ್ಲೇ ಉಳಿಯಲಿದೆ
ಇನ್ನು ಈ ಎಲ್ಲ ವಿವಾದಗಳ ನಡುವೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕ್ ನಾಥ್ ಶಿಂಧೆ ಅವರು ಮಾತನಾಡಿ, 'ಇದು ನಾಗರಿಕ ಬೆಳವಣಿಗೆಗಳಲ್ಲಿ ಧಾರ್ಮಿಕ ರಾಜಕೀಯವನ್ನು ತುಂಬುವ ಪ್ರಯತ್ನ' ಎಂದು ಹೇಳಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಶಿಂಧೆ, ಥಾಣೆಯ ರಾಜಕೀಯ ಪರಂಪರೆ ಮತ್ತು ಸಾಂಸ್ಕೃತಿಕ ಗುರುತನ್ನು ಒತ್ತಿ ಹೇಳಿದರು.
"ಥಾಣೆ ಜಿಲ್ಲೆ ಮಹಾರಾಷ್ಟ್ರದ ಅತಿದೊಡ್ಡ ಜಿಲ್ಲೆ ಮತ್ತು ಇಡೀ ಥಾಣೆ ಸಂಪೂರ್ಣವಾಗಿ ಕೇಸರಿ ಬಣ್ಣದ್ದಾಗಿದೆ. ಮುಂಬ್ರಾ ಅದರ ಒಂದು ಸಣ್ಣ ಭಾಗ ಮಾತ್ರ. ಈ ಪ್ರದೇಶವು ತಮ್ಮ ಮಾರ್ಗದರ್ಶಕ ದಿವಂಗತ ಆನಂದ್ ದಿಘೆ ಅವರ ಸಿದ್ಧಾಂತವನ್ನು ಅನುಸರಿಸುತ್ತಲೇ ಇದೆ ಎಂದು ಪ್ರತಿಪಾದಿಸಿದರು.