ಕರ್ನೂಲು: ತನ್ನ ಪ್ರೀತಿಗೆ ಪ್ರಿಯಕರನ ಪತ್ನಿ ಅಡ್ಡಿಯಾಗಿದ್ದಾಳೆ ಎಂದು ಆಕೆಗೆ HIV virus ಇಂಜೆಕ್ಷನ್ ಚುಚ್ಚಿದ ಆಘಾತಕಾರಿ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಪ್ರೀತಿಸಿದ ವ್ಯಕ್ತಿ ಮತ್ತೊಬ್ಬ ಮಹಿಳೆಯನ್ನು ಮದುವೆಯಾದ ನಂತರ ಮಾಜಿ ಗೆಳತಿಯೊಬ್ಬಳು ಆತನ ಪತ್ನಿಗೆ ವೈರಸ್ ಇಂಜೆಕ್ಷನ್ ನೀಡಿದ್ದಾರೆ.
ಮೂಲಗಳ ಪ್ರಕಾರ ಕರ್ನೂಲಿನ ವೈದ್ಯ ಮತ್ತು ಅದೋನಿಯ ಯುವತಿ ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದರು. ನಂತರ ಕಾರಣಾಂತರಗಳಿಂದ ಜಗಳ ಮಾಡಿಕೊಂಡು ಬೇರ್ಪಟ್ಟರು. ಈ ಅನುಕ್ರಮದಲ್ಲಿ, ವೈದ್ಯರು ಮತ್ತೊಬ್ಬ ಮಹಿಳಾ ವೈದ್ಯರನ್ನು ವಿವಾಹವಾದರು.
ಅವರು ಕರ್ನೂಲು ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾಗ, ಅವರ ಪತಿ ಕೂಡ ಕರ್ನೂಲಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಪರಿಚಯ ಏರ್ಪಟ್ಟು ಬಳಿಕ ಇಬ್ಬರೂ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದರು.
ಪ್ರಿಯಕರನ ಮದುವೆ ವಿಚಾರ ಕೇಳಿ ಕೆಂಡಾಮಂಡಲಳಾಗಿದ್ದ ಮಾಜಿ ಪ್ರಿಯತಮೆ
ಇನ್ನು ತಾನು ಪ್ರೀತಿಸಿದ ವ್ಯಕ್ತಿ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ ಎಂಬ ವಿಚಾರವನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಮಾಜಿ ಗೆಳತಿ, ಅವರಿಬ್ಬರನ್ನು ಬೇರ್ಪಡಿಸಲು ಸಂಚು ರೂಪಿಸಿದಳು. ಅದರಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಂದ ಎಚ್‌ಐವಿ ಸೋಂಕಿತ ರಕ್ತದ ಮಾದರಿಗಳನ್ನು ಆಕೆ ಪಡೆದುಕೊಂಡಳು. ಸಂಶೋಧನಾ ಉದ್ದೇಶಗಳಿಗಾಗಿ ಮಾದರಿಗಳು ಅಗತ್ಯವಿದೆ ಎಂದು ಸುಳ್ಳು ಹೇಳಿ ಸಂಗ್ರಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದರ ಭಾಗವಾಗಿ, ಈ ತಿಂಗಳ 9 ರಂದು, ಮಹಿಳಾ ವೈದ್ಯೆ ತನ್ನ ಕರ್ತವ್ಯ ಮುಗಿಸಿ ಮಧ್ಯಾಹ್ನ ಮನೆಗೆ ಹಿಂತಿರುಗುತ್ತಿದ್ದಾಗ, ನಾಲ್ವರು ಪುರುಷರು ಬಂದು ಆಕೆಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬೀಳುವಂತೆ ಮಾಡಿದರು. ಕೆಳಗೆ ಬಿದ್ದ ಆಕೆಗೆ ಸಹಾಯ ಮಾಡುವಂತೆ ನಟಿಸಿ ಆಟೋ ಹತ್ತಿ ವೈರಸ್ (ಎಚ್‌ಐವಿ) ಸೋಂಕಿನ ಇಂಜೆಕ್ಷನ್ ಚುಚ್ಚಿದ್ದಾರೆ ಎಂದು ಕರ್ನೂಲು ಡಿಎಸ್‌ಪಿ ಬಾಬು ಪ್ರಸಾದ್ ಹೇಳಿದ್ದಾರೆ.
ಈ ಘಟನೆಯ ಬಗ್ಗೆ ಸಂತ್ರಸ್ಥೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ 3ನೇ ಪಟ್ಟಣ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ಆರೋಪಿಗಳನ್ನು ಗುರುತಿಸಿ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಮಾಜಿ ಗೆಳತಿ ಸೇರಿದಂತೆ ನಾಲ್ವರನ್ನು ಬಂಧಿಸಿ ರಿಮಾಂಡ್‌ಗೆ ಕಳುಹಿಸಲಾಗಿದೆ ಎಂದು ಡಿಎಸ್‌ಪಿ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕರ್ನೂಲ್ ನಿವಾಸಿ ಮತ್ತು ಮಾಜಿ ಪ್ರಿಯತಮೆ ಬಿ ಬೋಯಾ ವಸುಂಧರಾ (34), ಅದೋನಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ಕೊಂಗೆ ಜ್ಯೋತಿ (40) ಮತ್ತು ಅವರ 20ರ ಹರೆಯದ ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ.