ಮಹಾರಾಷ್ಟ್ರದ ಬಾರಾಮತಿಯಲ್ಲಿ ಎನ್‌ಸಿಪಿ ಮುಖ್ಯಸ್ಥ ಮತ್ತು ಮಹಾರಾಷ್ಟ್ರ ರಾಜ್ಯ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗಿ, ಅವರು ಮತ್ತು ವಿಮಾನದಲ್ಲಿದ್ದ ಇತರ ನಾಲ್ವರು ಮೃತಪಟ್ಟ ಕೂಡಲೇ ವಿಮಾನ ಪತನವಾದ ಸ್ಥಳದಲ್ಲಿ ತೀವ್ರ ಬೆಂಕಿ ಮತ್ತು ಅವಶೇಷಗಳು ಕಂಡುಬಂದವು.
ತುರ್ತು ಭೂಸ್ಪರ್ಶದ ಸಂದರ್ಭದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಸ್ಥಳಕ್ಕೆ ರಕ್ಷಣಾ ತಂಡಗಳು ಧಾವಿಸಿದ್ದು, ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ವಿಮಾನದಲ್ಲಿದ್ದ ಅಜಿತ್ ಪವಾರ್ ಸೇರಿದಂತೆ ಇತರ ಐವರು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ದೃಢಪಡಿಸಿದೆ. ಮೃತಪಟ್ಟ ಇತರರಲ್ಲಿ ಇಬ್ಬರು ಪೈಲಟ್‌ಗಳು ಮತ್ತು ಇಬ್ಬರು ಪ್ರಯಾಣಿಕರು ಸೇರಿದ್ದಾರೆ, ಅವರಲ್ಲಿ ಒಬ್ಬ ಸಹಾಯಕ ಮತ್ತು ಪವಾರ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿ ಸೇರಿದ್ದಾರೆ.
ಇಂದು ಬೆಳಗ್ಗೆ ಆಗಿದ್ದೇನು?
ಲಿಯರ್ಜೆಟ್ 45 ವಿಮಾನ ಮುಂಬೈನಿಂದ ಹೊರಟ ಒಂದು ಗಂಟೆಯ ನಂತರ ಬೆಳಗ್ಗೆ 9 ಗಂಟೆಯ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ವಿಮಾನ ಇಳಿಯುವ ಸಮಯದಲ್ಲಿ ನಿಯಂತ್ರಣ ಕಳೆದುಕೊಂಡು ಪತನವಾಗಿದೆ ಎಂದು ಹೇಳಲಾಗುತ್ತಿದೆ.
ರನ್‌ವೇ ಮೇಲೆ ಅಪ್ಪಳಿಸಿದ ತಕ್ಷಣ ವಿಮಾನದಲ್ಲಿ ದೊಡ್ಡ ಮಟ್ಟದ ಸ್ಫೋಟ ಸಂಭವಿಸಿದ್ದರಿಂದ, ವಿಮಾನದ ಬಹುತೇಕ ಭಾಗ ಸುಟ್ಟು ಕರಕಲಾಗಿದೆ. ಕೇವಲ ವಿಮಾನದ ಬಾಲದ ಭಾಗ ಮತ್ತು ರೆಕ್ಕೆಗಳ ಕೆಲವು ಅವಶೇಷಗಳು ಮಾತ್ರ ಗುರುತಿಸಲು ಸಾಧ್ಯವಾಗುವಂತೆ ಉಳಿದಿವೆ.
ವಿಮಾನ ಪತನವಾದ ರಭಸಕ್ಕೆ ಅದರ ಬಿಡಿಭಾಗಗಳು ರನ್‌ವೇ ಸುತ್ತಮುತ್ತ ನೂರಾರು ಮೀಟರ್‌ಗಳವರೆಗೆ ಚದುರಿಹೋಗಿವೆ. ಇಡೀ ಪ್ರದೇಶವು ಕಪ್ಪು ಹೊಗೆಯಿಂದ ಆವೃತವಾಗಿತ್ತು. ಅಗ್ನಿಶಾಮಕ ದಳದ ವಾಹನಗಳು ಬೆಂಕಿಯನ್ನು ನಂದಿಸಿವೆ. ಪ್ರಸ್ತುತ ಪೊಲೀಸ್ ಮತ್ತು ಎನ್‌ಡಿಆರ್‌ಎಫ್ (NDRF) ತಂಡಗಳು ವಿಮಾನದ ಅವಶೇಷಗಳ ಅಡಿಯಿಂದ ಮೃತದೇಹಗಳನ್ನು ಹೊರತೆಗೆಯುವ ಕೆಲಸದಲ್ಲಿ ತೊಡಗಿವೆ.
ಮಹಾರಾಷ್ಟ್ರದಲ್ಲಿ ಜಿಲ್ಲಾ ಪರಿಷತ್‌ಗಳು ಮತ್ತು ಪಂಚಾಯತ್ ಸಮಿತಿಗಳಿಗೆ ನಡೆಯುತ್ತಿರುವ ಚುನಾವಣೆಗಳ ಮಧ್ಯೆ, ಅಜಿತ್ ಪವಾರ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಮುಂಬೈನಿಂದ ಬಾರಾಮತಿಗೆ ಪ್ರಯಾಣಿಸುತ್ತಿದ್ದರು.
2023ರಲ್ಲಿ ಅಪಘಾತ
ಇಂದು ಬೆಳಗ್ಗೆ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ವಿಮಾನ 2023 ರಲ್ಲಿಯೂ ಸಹ ಅಪಘಾತಕ್ಕೀಡಾಗಿತ್ತು. ಸೆಪ್ಟೆಂಬರ್ 2023 ರಲ್ಲಿ, ಮುಂಬೈ ವಿಮಾನ ನಿಲ್ದಾಣದಲ್ಲಿ ಭಾರೀ ಮಳೆಯ ನಡುವೆ ಖಾಸಗಿ ವಿಮಾನವು ಇಳಿಯಲು ಪ್ರಯತ್ನಿಸುವಾಗ ರನ್‌ವೇಯಿಂದ ಜಾರಿ ಅಪಘಾತಕ್ಕೀಡಾಯಿತು.
ಸಿಎಂ ದೇವೇಂದ್ರ ಫಡ್ನವೀಸ್ ಗೆ ಪ್ರಧಾನ ಮಂತ್ರಿ, ಗೃಹ ಸಚಿವರ ಕರೆ
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಸಂಪರ್ಕಿಸಿ ಬಾರಾಮತಿ ವಿಮಾನ ಅಪಘಾತದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಅಜಿತ್ ಪವಾರ್ ಇಂದು ಬೆಳಗ್ಗೆ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ಡಿಜಿಸಿಎ ಪ್ರಕಾರ, ಮುಂಬೈನಿಂದ ಬಾರಾಮತಿಗೆ ಹಾರುತ್ತಿದ್ದ ಚಾರ್ಟರ್ಡ್ ವಿಮಾನ ಬಾರಾಮತಿಯ ರನ್‌ವೇ ಹೊಸ್ತಿಲಲ್ಲಿ ಅಪಘಾತ ಸಂಭವಿಸಿದೆ.
ಮಹಾರಾಷ್ಟ್ರ ರಾಜಕೀಯದಲ್ಲಿ ಅಜಿತ್ ಪವಾರ್
ಅಜಿತ್ ಪವಾರ್ ಮಹಾರಾಷ್ಟ್ರದ ಇದುವರೆಗಿನ ಉಪ ಮುಖ್ಯಮಂತ್ರಿಗಳಲ್ಲಿ ಸತತವಾಗಿ ದೀರ್ಘಕಾಲ ಸೇವೆ ಸಲ್ಲಿಸಿದವರು. ಮುಖ್ಯಮಂತ್ರಿಗಳಾದ ಪೃಥ್ವಿರಾಜ್ ಚವಾಣ್, ದೇವೇಂದ್ರ ಫಡ್ನವೀಸ್, ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಅವರಿಗೆ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಅವರು 1991 ರಲ್ಲಿ ಬಾರಾಮತಿ ಸಂಸದೀಯ ಕ್ಷೇತ್ರದಿಂದ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. ನಂತರ ತಮ್ಮ ಚಿಕ್ಕಪ್ಪ ಶರದ್ ಪವಾರ್ ಅವರಿಗೆ ಆ ಸ್ಥಾನವನ್ನು ಬಿಟ್ಟುಕೊಟ್ಟರು. ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಏಳು ಬಾರಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾದರು. ಮೊದಲು 1991 ರ ಉಪಚುನಾವಣೆಯಲ್ಲಿ ಮತ್ತು ನಂತರ 1995, 1999, 2004, 2009 ಮತ್ತು 2014 ರಲ್ಲಿ ಗೆದ್ದರು.
ನವೆಂಬರ್ 2019 ರಲ್ಲಿ, ಅವರು ಎನ್ ಸಿಪಿ ವಿಭಜಿಸಿ ಹೊರಬಂದು ಬಿಜೆಪಿ ನೇತೃತ್ವದ ಸರ್ಕಾರ ಜೊತೆ ಕೈಜೋಡಿಸಿ ಉಪಮುಖ್ಯಮಂತ್ರಿಯಾದರು. ಫೆಬ್ರವರಿ 2024 ರಲ್ಲಿ, ಚುನಾವಣಾ ಆಯೋಗವು ಅಜಿತ್ ಪವಾರ್ ನೇತೃತ್ವದ ಬಣಕ್ಕೆ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನೀಡಿತು.
ಅವರು ಸುನೇತ್ರಾ ಪವಾರ್ ಅವರನ್ನು ವಿವಾಹವಾಗಿದ್ದು, ಅವರಿಗೆ ಜಯ್ ಮತ್ತು ಪಾರ್ಥ್ ಪವಾರ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.