ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಕಾಲಿಕ ಸಾವು ದೇಶದ ರಾಜಕೀಯ ವಲಯದಲ್ಲಿ ಆಘಾತ ಮೂಡಿಸಿದೆ. ವಿಮಾನ ಅಪಘಾತವೇ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದ್ದರು, ಈ ಅಪಘಾತದ ಹಿಂದೆ ನಿಖರವಾಗಿ ಏನಾಯಿತು ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಈ ನಡುವೆ ಅಜಿತ್ ಪವಾರ್ ಸಾವಿನ ಕುರಿತು ಮಹತ್ವದ ಮಾಹಿತಿ ಹೊರಬಿದ್ದಿದೆ. ಅಜಿತ್ ಪವಾರ್ ಅವರು ಪ್ರಯಾಣಿಸಿದ್ದ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ದೃಢಪಡಿಸಿದೆ.
ವಿಮಾನ ಅಪಘಾತದ ತನಿಖೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಹಾಗೂ ವಿಧಿವಿಜ್ಞಾನ ತಂಡಗಳ ಅಧಿಕಾರಿಗಳು ಗುರುವಾರ ಬಾರಾಮತಿಯಲ್ಲಿ ಅಪಘಾತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ವಿಮಾನದಲ್ಲಿದ್ದ ಕಪ್ಪು ಪೆಟ್ಟಿಗೆಯೂ ಈಗ ಪತ್ತೆಯಾಗಿದ್ದು, ತನಿಖಾಧಿಕಾರಿಗಳು ಅದನ್ನು ಡಿಕೋಡ್ ಮಾಡುವ ಪ್ರಕ್ರಿಯೆ ಆರಂಭಿಸಿದ್ದಾರೆ.
ಈ ಕಪ್ಪು ಪೆಟ್ಟಿಗೆಯಲ್ಲಿ ಎರಡು ಮುಖ್ಯ ಭಾಗಗಳಿವೆ. ಒಂದು ಫ್ಲೈಟ್ ಡೇಟಾ ರೆಕಾರ್ಡರ್ (FDR) ಇದು ವಿಮಾನದ ವೇಗ, ಎತ್ತರ, ಇಂಧನ ಬಳಕೆ, ದಿಕ್ಕು ಸೇರಿದಂತೆ ತಾಂತ್ರಿಕ ಮಾಹಿತಿಯನ್ನು ದಾಖಲಿಸುತ್ತದೆ.
ಮತ್ತೊಂದು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಇದು ಪೈಲಟ್‌ಗಳ ನಡುವಿನ ಸಂಭಾಷಣೆ, ಎಚ್ಚರಿಕೆ ಧ್ವನಿಗಳು ಮತ್ತು ಅಪಘಾತದ ಕೊನೆಯ ಕ್ಷಣಗಳ ಶಬ್ದಗಳನ್ನು ದಾಖಲಿಸುತ್ತದೆ. ಈ ಡೇಟಾವನ್ನು ವಿಶ್ಲೇಷಿಸಲು ಕನಿಷ್ಠ 3 ರಿಂದ 4 ವಾರಗಳು ಬೇಕಾಗುತ್ತದೆ ಎಂದು ಅಧಿಕಾರಿಗಳು ನೀಡಿದ್ದಾರೆ.
ಇದರ ಪರಿಶೀಲನೆ ಬಳಿಕ ವಿಮಾನ ಅಪಘಾತಕ್ಕೆ ತಾಂತ್ರಿಕ ದೋಷ ಕಾರಣವೋ, ಮಾನವೀಯ ತಪ್ಪೋ ಅಥವಾ ಹವಾಮಾನ ಸಮಸ್ಯೆಯೋ ಎಂಬುದು ಸ್ಪಷ್ಟವಾಗಲಿದೆ ಎಂದು ಹೇಳಿದ್ದಾರೆ.
ಏನಿದು ಬ್ಲಾಕ್ ಬಾಕ್ಸ್..?
ವಿಮಾನ ಅಪಘಾತಗಳ ತನಿಖೆಯಲ್ಲಿ ಬ್ಲಾಕ್ ಬಾಕ್ಸ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಇದು ಸಾಮಾನ್ಯ ಪೆಟ್ಟಿಗೆಯಲ್ಲ, ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಿಸಲಾದ ಅತ್ಯಂತ ಬಲಿಷ್ಠ ಸಾಧನವಾಗಿದೆ. ಅಪಘಾತ, ಬೆಂಕಿ, ನೀರು ಅಥವಾ ಭಾರೀ ಆಘಾತಗಳ ನಡುವೆಯೂ ಒಳಗಿನ ಡೇಟಾವನ್ನು ಸುರಕ್ಷಿತವಾಗಿ ಉಳಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.
ಬ್ಲಾಕ್ ಬಾಕ್ಸ್ ಹೊರಭಾಗವನ್ನು ಸಾಮಾನ್ಯವಾಗಿ ’ಟೈಟಾನಿಯಂ ಅಥವಾ ಸ್ಟೇನ್‌ಲೆಸ್ ಸ್ಟೀಲ್ ನಿಂದ ತಯಾರಿಸಲಾಗುತ್ತದೆ. ಇವು ಅತ್ಯಂತ ಬಲವಾದ ಲೋಹಗಳು. ಇದರ ಒಳಭಾಗದಲ್ಲಿ ಹಲವು ಪದರಗಳ ರಕ್ಷಣೆ ಇರುತ್ತದೆ. ಉಷ್ಣ ನಿರೋಧಕ ಪದರಗಳು, ಆಘಾತವನ್ನು ಹೀರಿಕೊಳ್ಳುವ ಅಬ್ಸಾರ್ಬರ್‌ಗಳು ಮತ್ತು ವಿಶೇಷ ಇನ್ಸುಲೇಷನ್ ವ್ಯವಸ್ಥೆಗಳು ಇದರಲ್ಲಿ ಸೇರಿವೆ. ಇದರಿಂದ ಯಾವುದೇ ಅಪಘಾತ ಸಂಭವಿಸಿದರೂ ಒಳಗಿನ ಮಾಹಿತಿಗೆ ಹಾನಿಯಾಗುವುದಿಲ್ಲ.
ಈ ಬ್ಲಾಕ್ ಬಾಕ್ಸ್ ’1100 ಡಿಗ್ರಿ ಸೆಲ್ಸಿಯಸ್ ವರೆಗೆ ಬೆಂಕಿಯನ್ನು ಸುಮಾರು 60 ನಿಮಿಷಗಳ ಕಾಲ ತಡೆದುಕೊಳ್ಳಬಲ್ಲದು. ಅಂದರೆ ವಿಮಾನ ಸಂಪೂರ್ಣವಾಗಿ ಸುಟ್ಟುಹೋದರೂ ಕೂಡ ಅದರಲ್ಲಿರುವ ಡೇಟಾ ಸುರಕ್ಷಿತವಾಗಿರುತ್ತದೆ. ಅದೇ ರೀತಿ, ವಿಮಾನ ಸಮುದ್ರಕ್ಕೆ ಬಿದ್ದರೆ, ಈ ಪೆಟ್ಟಿಗೆಯು 20,000 ಅಡಿ ಆಳದವರೆಗೆ ನೀರಿನ ಒತ್ತಡವನ್ನು ಸಹಿಸಿಕೊಳ್ಳುತ್ತದೆ. ಇದರಲ್ಲಿ ಅಳವಡಿಸಲಾದ ’ನೀರೊಳಗಿನ ಲೊಕೇಟರ್ ಬೀಕನ್ವಿ ಶೇಷವಾಗಿದ್ದು, ನೀರಿಗೆ ಬಿದ್ದ ತಕ್ಷಣ ಸಂಕೇತವನ್ನು ಕಳುಹಿಸುತ್ತದೆ. ಈ ಸಂಕೇತವು ಸುಮಾರು 30 ದಿನಗಳ ಕಾಲ ಕಾರ್ಯನಿರ್ವಹಿಸುತ್ತದೆ. ಇದರಿಂದ ಹುಡುಕಾಟ ತಂಡಗಳಿಗೆ ಕಪ್ಪು ಪೆಟ್ಟಿಗೆಯನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ.
ಬುಧವಾರ ಅಜಿತ್ ಪವಾರ್ ಅವರು ಚುನಾವಣಾ ಪ್ರಚಾರಕ್ಕಾಗಿ ಮುಂಬೈನಿಂದ ಬಾರಾಮತಿಗೆ ಪ್ರಯಾಣಿಸುತ್ತಿದ್ದ ವೇಳೆ ವಿಮಾನ ಪತನವಾಗಿತ್ತು. ಪತನವಾದ ಬೊಂಬಾರ್ಡಿಯರ್ ಲಿಯರ್‌ಜೆಟ್–45 (ಎಲ್‌ಜೆ45) ವಿಮಾನವು ದೆಹಲಿ ಮೂಲದ ವಿಎಸ್ಆರ್ ವೆಂಚರ್ಸ್ ಸಂಸ್ಥೆಯ ಒಡೆತನದಲ್ಲಿದೆ.