ನವದೆಹಲಿ: ಮನೆಗೆಲಸದ ಕಾರ್ಮಿಕರಿಗೆ ಸಮಗ್ರ ಕಾನೂನು ಚೌಕಟ್ಟು ಮತ್ತು ಕನಿಷ್ಠ ವೇತನ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.
ಮನೆಗೆಲಸದವರಿಗೆ ಕನಿಷ್ಠ ವೇತನ ನಿಗದಿಪಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ತಿದ್ದುಪಡಿ ಮಾಡಲು ನಿರ್ದೇಶನ ನೀಡುವಂತೆ ಕೋರಿ ಪಿಎಲ್ಐ ಸಲ್ಲಿಸಲಾಗಿತ್ತು.
ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಈ ದೇಶದಲ್ಲಿ ಕೈಗಾರಿಕಾ ಬೆಳವಣಿಗೆಯನ್ನು ತಡೆಯಲು ಟ್ರೇಡ್ ಯೂನಿಯನ್ ಸಿದ್ಧಾಂತವು ಹೆಚ್ಚಾಗಿ ಕಾರಣವಾಗಿದೆ ಎಂದಿದೆ.
"ಟ್ರೇಡ್ ಯೂನಿಯನ್‌ಗಳಿಂದಾಗಿ ದೇಶದಲ್ಲಿ ಎಷ್ಟು ಕೈಗಾರಿಕಾ ಘಟಕಗಳು ಮುಚ್ಚಲ್ಪಟ್ಟಿವೆ? ವಾಸ್ತವಗಳನ್ನು ನಮಗೆ ತಿಳಿಸಿ. ಈ 'ಝಂಡಾ' ಯೂನಿಯನ್‌ಗಳಿಂದಾಗಿ ದೇಶಾದ್ಯಂತ ಎಲ್ಲಾ ಸಾಂಪ್ರದಾಯಿಕ ಕೈಗಾರಿಕೆಗಳು ಮುಚ್ಚಲ್ಪಟ್ಟಿವೆ. ಅವರು ಕೆಲಸ ಮಾಡಲು ಬಯಸುವುದಿಲ್ಲ. ದೇಶದಲ್ಲಿ ಕೈಗಾರಿಕಾ ಬೆಳವಣಿಗೆಯನ್ನು ನಿಲ್ಲಿಸಲು ಈ ಟ್ರೇಡ್ ಯೂನಿಯನ್ ನಾಯಕರು ಹೆಚ್ಚಾಗಿ ಕಾರಣರಾಗಿದ್ದಾರೆ" ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
"ಖಂಡಿತ ಶೋಷಣೆ ಇದೆ, ಆದರೆ ಶೋಷಣೆಯನ್ನು ಪರಿಹರಿಸಲು ಮಾರ್ಗಗಳಿವೆ. ಜನರಿಗೆ ಅವರ ವೈಯಕ್ತಿಕ ಹಕ್ಕುಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿತ್ತು. ಜನರನ್ನು ಹೆಚ್ಚು ಕೌಶಲ್ಯಪೂರ್ಣರನ್ನಾಗಿ ಮಾಡಬೇಕಾಗಿತ್ತು, ಇನ್ನೂ ಹಲವಾರು ಸುಧಾರಣೆಗಳನ್ನು ಮಾಡಬೇಕಾಗಿತ್ತು" ಎಂದು ಸಿಜೆಐ ಹೇಳಿದರು.
ದೇಶಾದ್ಯಂತ ಲಕ್ಷಾಂತರ ಮನೆಗೆಲಸದವರ "ಕಷ್ಟ"ವನ್ನು ಒಪ್ಪಿಕೊಂಡರೂ, ಸಿಜೆಐ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಸುಪ್ರೀಂ ಪೀಠ, ಈ ಸಂಬಂಧ ಕಾನೂನು ತಿದ್ದುಪಡಿ ಮಾಡುವಂತೆ ಆದೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಕಾನೂನಿನಲ್ಲಿ ಬದಲಾವಣೆಗಳನ್ನು ಒಳಗೊಂಡಿರುವ ವಿಷಯದಲ್ಲಿ ಮಧ್ಯಪ್ರವೇಶಿಸಲು ನ್ಯಾಯಾಲಯಕ್ಕೆ ಸೀಮಿತ ಅಧಿಕಾರವಿದೆ , ಅರ್ಜಿದಾರರು ಪರಿಹಾರಕ್ಕಾಗಿ ಸಂಬಂಧಪಟ್ಟ ರಾಜ್ಯ ಅಧಿಕಾರಿಗಳನ್ನು ಸಂಪರ್ಕಿಸಲು ಪೀಠವು ಅಂತಿಮವಾಗಿ ಸೂಚಿಸಿತು.
ಕನಿಷ್ಠ ವೇತನ ನಿಗದಿಯು ಕೆಲಸ ಕೊಡುವವರನ್ನು ಸಂಕಷ್ಟಕ್ಕೆ ತಳ್ಳಬಹುದು ಎಂದು ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕಾರ್ಮಿಕ ಸಂಘಗಳು ಪ್ರತಿಯೊಂದು ಮನೆಯನ್ನೂ ಮೊಕದ್ದಮೆಗೆ ಎಳೆಯಬಹುದು ಮತ್ತು ಇದು ಮನೆಗೆಲಸದವರನ್ನು ನೇಮಿಸಿಕೊಳ್ಳುವಲ್ಲಿ ಹಿಂಜರಿಕೆಗೆ ಕಾರಣವಾಗಬಹುದು ಎಂದು ಹೇಳಿದೆ.
ಗೃಹ ಕಾರ್ಮಿಕರು ಸಂವಿಧಾನದ 21 ಮತ್ತು 23 ನೇ ವಿಧಿಗಳಿಂದ ರಕ್ಷಿಸಲ್ಪಟ್ಟ ಮತ್ತು ಖಾತರಿಪಡಿಸಲಾದ ಕನಿಷ್ಠ ವೇತನದ ಮೂಲಭೂತ ಹಕ್ಕನ್ನು ಹೊಂದಿದ್ದಾರೆ ಎಂದು ಘೋಷಿಸುವಂತೆ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಲಾಗಿತ್ತು.