ನವದೆಹಲಿ: 2025-26ನೇ ಸಾಲಿನ ಆರ್ಥಿಕ ಸಮೀಕ್ಷೆಯು ಇತ್ತೀಚೆಗೆ ಜಾರಿಗೆ ಬಂದ ವಿಕಸಿತ ಭಾರತ–ಉದ್ಯೋಗ ಮತ್ತು ಆಜೀವಿಕಾ ಭರವಸೆ ಮಿಷನ್ (ಗ್ರಾಮೀಣ) ಅಥವಾ VB-G RAM G ಕಾಯ್ದೆ, 2025 ನ್ನು ಸಮರ್ಥಿಸಿದೆ.
ಮನ್ರೇಗಾ ಅಡಿಯಲ್ಲಿ ಕೆಲಸದ ಬೇಡಿಕೆ ಕುಸಿತಗೊಂಡಿರುವುದೇ ಈ ಪುನರ್ ರಚನೆಗೆ ಕಾರಣ ಎಂದು ಸಮೀಕ್ಷೆ ಉಲ್ಲೇಖಿಸಿದೆ. ನಿನ್ನೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲಿ, 2005ರಲ್ಲಿ ಜಾರಿಗೆ ಬಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ( MGNREGS )ವೇತನಾಧಾರಿತ ಉದ್ಯೋಗ ಒದಗಿಸಿ, ಗ್ರಾಮೀಣ ಆದಾಯವನ್ನು ಸ್ಥಿರಗೊಳಿಸಿ, ಮೂಲಸೌಕರ್ಯ ನಿರ್ಮಾಣಕ್ಕೆ ಸಹಾಯ ಮಾಡಿತ್ತು. ಆದರೆ ಗ್ರಾಮೀಣ ಉದ್ಯೋಗದ ಅಗತ್ಯತೆಗಳು ಈಗ ಬದಲಾಗಿವೆ ಎಂದು ತಿಳಿಸಿದೆ.
“MGNREGS ಗ್ರಾಮೀಣ ಕುಟುಂಬಗಳಿಗೆ ಬಹುಕಾಲ ಪ್ರಮುಖ ಸುರಕ್ಷಾ ಜಾಲವಾಗಿದ್ದರೂ, ಇತ್ತೀಚಿನ ಪ್ರವೃತ್ತಿಗಳು ಕೆಲಸದ ಬೇಡಿಕೆಯಲ್ಲಿ ಗಮನಾರ್ಹ ಕುಸಿತವನ್ನು ತೋರಿಸುತ್ತವೆ ಎಂದು ಸಮೀಕ್ಷೆ ಹೇಳಿದೆ. ವ್ಯಕ್ತಿ-ದಿನಗಳು (person-days) ಕೋವಿಡ್ ಮಹಾಮಾರಿ ಹೆಚ್ಚಾಗಿದ್ದ 2021ರಲ್ಲಿ 389.09 ಕೋಟಿಯಿಂದ ಡಿಸೆಂಬರ್ 31, 2025ರವರೆಗೆ ಸುಮಾರು 183.77 ಕೋಟಿಗೆ ಇಳಿದಿದ್ದು, 53 ಶೇಕಡಕ್ಕೂ ಹೆಚ್ಚು ಕುಸಿತವಾಗಿದೆ.
ಈ ಕುಸಿತವು ಗ್ರಾಮೀಣ ನಿರುದ್ಯೋಗ ಪ್ರಮಾಣವು 2020-21ರಲ್ಲಿ 3.3 ಶೇಕಡಾದಿಂದ 2023-24ರಲ್ಲಿ 2.5 ಶೇಕಡಾಕ್ಕೆ ಇಳಿಕೆಯಾಗಿದೆ. ಇದರಿಂದ ಕೃಷಿಯ ಹೊರಗಿನ ಉದ್ಯೋಗಗಳಿಗೆ ಹೆಚ್ಚಿನ ಬೇಡಿಕೆಯಿರುವುದು ಕಂಡುಬಂದಿದೆ.
ಸಮೀಕ್ಷೆಯ ಪ್ರಕಾರ, ಗ್ರಾಮೀಣ ಆರ್ಥಿಕ ಪರಿಸ್ಥಿತಿಗಳು ಬಲಿಷ್ಠವಾಗಿದ್ದು, ಮನ್ರೇಗಾ ಮೇಲಿನ ಅವಲಂಬನೆ ಕಡಿಮೆಯಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಮಹಿಳೆಯರ ಪಾಲ್ಗೊಳ್ಳುವಿಕೆ 2014ರಲ್ಲಿ 48 ಶೇಕಡಾದಿಂದ 2025ರಲ್ಲಿ 58.1ಶೇಕಡಾಕ್ಕೆ ಏರಿಕೆಯಾಗಿದೆ. ಆಧಾರ್ ಜೋಡಣೆ ವಿಸ್ತರಿಸಿದ್ದು, ಇಲೆಕ್ಟ್ರಾನಿಕ್ ವೇತನ ಪಾವತಿ ಸಂಪೂರ್ಣವಾಗಿ ಜಾರಿಗೆ ಬಂದಿದೆ.
ಆದರೂ, ಕೆಲವು ರಚನಾತ್ಮಕ ಸಮಸ್ಯೆಗಳು ಮುಂದುವರಿದಿವೆ. ತಳಮಟ್ಟದಲ್ಲಿ ಕೆಲಸ ಜಾರಿಯಾಗದೇ ಇರುವುದು, ವೆಚ್ಚ ಮತ್ತು ಭೌತಿಕ ಪ್ರಗತಿಯ ನಡುವಿನ ಅಂತರ, ಕಾರ್ಮಿಕಾಧಾರಿತ ಕೆಲಸಗಳಲ್ಲಿ ಯಂತ್ರಗಳ ಬಳಕೆ, ಮತ್ತು ಡಿಜಿಟಲ್ ಹಾಜರಾತಿ ವ್ಯವಸ್ಥೆಯನ್ನು ತಪ್ಪಿಸುವುದು ಇವುಗಳಲ್ಲಿ ಸೇರಿವೆ.
ಈ ಹಿನ್ನೆಲೆಯಲ್ಲೇ ಸರ್ಕಾರ G RAM G ಕಾಯ್ದೆ, 2025 ನ್ನು ಜಾರಿಗೆ ತಂದಿದೆ ಎಂದು ಸಮೀಕ್ಷೆ ಹೇಳಿದೆ.