ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮೆಲ್ಬೋರ್ನ್ ಭೇಟಿಗೂ ಮುನ್ನ ಅವರಿಗೆ ಆನ್‌ಲೈನ್ ಮೂಲಕ ಕೊಲೆ ಬೆದರಿಕೆ ಹಾಕಲಾಗಿದ್ದು, ಈ ಸಂಬಂಧ ಆಸ್ಟ್ರೇಲಿಯಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಶನಿವಾರ ವರದಿಯಾಗಿದೆ.
ಆಸ್ಟ್ರೇಲಿಯಾ ಟುಡೇ ವರದಿಗಳ ಪ್ರಕಾರ, ಜುಲೈ 9 ರಂದು ಮಾರ್ವೆಲ್ ಕ್ರೀಡಾಂಗಣದಲ್ಲಿ ನಡೆಯಲಿರುವ "ಮೆಲ್ಬೋರ್ನ್ ನೀಡ್ಸ್ ಮೋದಿ" ಎಂಬ ಕಾರ್ಯಕ್ರಮವನ್ನು ಪ್ರಚಾರ ಮಾಡುವ ಫೇಸ್‌ಬುಕ್ ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ ಮೋದಿಗೆ ಕೊಲೆ ಬೆದರಿಕೆಯ ಪೋಸ್ಟ್ ಮಾಡಲಾಗಿದೆ. ಈ ಕಾಮೆಂಟ್ ಅನ್ನು ಅಬು ಮುಸ್ತಫಾ ಎಂಬ ಹೆಸರಿನ ಖಾತೆಯಿಂದ ಪೋಸ್ಟ್ ಮಾಡಲಾಗಿದೆ.
ಆರೋಪಿ ತನ್ನ ಕಮೆಂಟ್ನಲ್ಲಿ ಈ ಕಾರ್ಯಕ್ರಮದ ಸಮಯದಲ್ಲಿ ಕ್ರೀಡಾಂಗಣದ ಛಾವಣಿ ಮುಚ್ಚುವುದು ಉತ್ತಮ, ಇಲ್ಲದಿದ್ದರೆ ಅವರು ಪ್ರಧಾನಿ ಸಾಯುವುದಕ್ಕಾಗಿ ಆಸ್ಟ್ರೇಲಿಯಾಗೆ ಬರುತ್ತಾರೆ ಎಂದು ಎಚ್ಚರಿಸಿದ್ದಾನೆ. ತಕ್ಷಣ ಕಾರ್ಯಕ್ರಮದ ಸಂಘಟಕರು ಕಮೆಂಟ್ ಬಗ್ಗೆ ಆಸ್ಟ್ರೇಲಿಯನ್ ಫೆಡರಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳು ಕೊಲೆ ಬೆದರಿಕೆ ಕಾಮೆಂಟ್ ಹಾಕಿದ ಆರೋಪಿಯ ಸಾಮಾಜಿಕ ಐಪಿ ವಿಳಾಸವನ್ನು ಪತ್ತೆಹಚ್ಚಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇನ್ನೂ ತನಿಖೆಯ ಬಗ್ಗೆ ಆಸ್ಟ್ರೇಲಿಯಾದ ಫೆಡರಲ್ ಪೊಲೀಸರು ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆರೋಪಿಗೆ ಸಂಬಂಧಿಸಿದ ಐಪಿ ವಿಳಾಸವನ್ನು ಗುರುತಿಸಿದ್ದಾರೆ. ಮತ್ತು ಸಂದೇಶದ ಸುತ್ತಲಿನ ಸಂದರ್ಭಗಳನ್ನು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.