ಮುಂಬೈನಲ್ಲಿ ಭಾರಿ ಮಳೆ 
ದೇಶ

ಮುಂಗಾರು ಅಬ್ಬರ: ಮುಂಬೈ, ಥಾಣೆ, ರಾಯಗಡಕ್ಕೆ IMD ರೆಡ್ ಅಲರ್ಟ್; ಕನಿಷ್ಠ 13 ಸಾವು, ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ!

ಈ ಘೋಷಣೆಯ ನಂತರ, ಮುಂಬೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರ ವಿಧಾನ ಪರಿಷತ್ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಮುಂಬೈ: ಮಹಾರಾಷ್ಟ್ರದಲ್ಲಿ ಮುಂಗಾರು ಅಬ್ಬರ ಮುಂದುವರೆದಿದ್ದು, ವಾಣಿಜ್ಯ ನಗರಿ ಮುಂಬೈ, ಥಾಣೆ ಮತ್ತು ರಾಯಘಡಕ್ಕೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.

ಕಳೆದ ಮೂರು-ನಾಲ್ಕು ದಿನಗಳಿಂದ ಸುರಿಯುತ್ತಿರುವ ದಾಖಲೆಯ ಭಾರೀ ಮಳೆಯ ಪರಿಣಾಮವಾಗಿ ಮುಂಬೈ ಹಾಗೂ ನೆರೆಯ ಪಾಲ್ಘರ್ ಮತ್ತು ರಾಯಗಡ ಜಿಲ್ಲೆಗಳಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಸಚಿವ ಗಿರೀಶ್ ಮಹಾಜನ್ ಸೋಮವಾರ ತಿಳಿಸಿದ್ದಾರೆ.

ಈ ಘೋಷಣೆಯ ನಂತರ, ಮುಂಬೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರ ವಿಧಾನ ಪರಿಷತ್ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಭಾನುವಾರ ಮುಂಬೈನ ಮಾನ್ಖುರ್ಡ್ ಪ್ರದೇಶದಲ್ಲಿ ಭಾರೀ ಮಳೆಯಿಂದ ಚಾಳ್ ಕಟ್ಟಡ ಕುಸಿದು ಆರು ಮಂದಿ ಮೃತಪಟ್ಟಿದ್ದರು.

ಕಳೆದ ಎರಡು ದಿನಗಳಲ್ಲಿ ಮುಂಬೈನಲ್ಲಿ ಮರಗಳು ಉರುಳಿ ಬಿದ್ದ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇದೇ ವೇಳೆ, ಜೂನ್ 30ರಂದು ಮರವೊಂದು ಬೇರುಸಹಿತ ಕಿತ್ತು ಚಲಿಸುತ್ತಿದ್ದ ಶಾಲಾ ಬಸ್ ಮೇಲೆ ಬಿದ್ದ ಪರಿಣಾಮ 11 ವರ್ಷದ ಬಾಲಕ ಮೃತಪಟ್ಟಿದ್ದನು.

ವರ್ಕ್ ಫ್ರಮ್ ಹೋಮ್ ಸಲಹೆ, ಸರ್ಕಾರಿ ಉದ್ಯೋಗಿಗಳಿಗೆ ಅರ್ಧದಿನ ರಜೆ

ಇದರ ಮಧ್ಯೆ, ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (SDMA) ಸೋಮವಾರ ಖಾಸಗಿ ಸಂಸ್ಥೆಗಳು ಸಾಧ್ಯವಾದಲ್ಲಿ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ (WFH) ವ್ಯವಸ್ಥೆ ಕಲ್ಪಿಸಬೇಕು ಎಂದು ಸಲಹೆ ನೀಡಿದೆ. ಜೊತೆಗೆ, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಸರ್ಕಾರಿ ಹಾಗೂ ಅರೆ ಸರ್ಕಾರಿ ಕಚೇರಿಗಳಿಗೆ ಮಧ್ಯಾಹ್ನದ ನಂತರ ಅರ್ಧ ದಿನ ರಜೆ ಘೋಷಿಸಲಾಗಿದೆ.

ರೆಡ್ ಅಲರ್ಟ್

ಭಾರತೀಯ ಹವಾಮಾನ ಇಲಾಖೆ (IMD) ಮುಂಬೈ ಮಹಾನಗರ ಪ್ರದೇಶಕ್ಕೆ ನೀಡಿದ್ದ ಆರೆಂಜ್ ಅಲರ್ಟ್ ಅನ್ನು ರೆಡ್ ಅಲರ್ಟ್‌ಗೆ ಏರಿಸಿದ ಬಳಿಕ ಈ ಸೂಚನೆ ಹೊರಡಿಸಲಾಗಿದೆ. ಮುಂಬೈ, ಥಾಣೆ ಹಾಗೂ ರಾಯಗಡ ಜಿಲ್ಲೆಗಳಲ್ಲಿ ಗಂಟೆಗೆ 80–90 ಕಿ.ಮೀ. ವೇಗದ ಗಾಳಿಯೊಂದಿಗೆ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಅತಿ ಹೆಚ್ಚು ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತವಾಗುವ, ಆಕಸ್ಮಿಕ ಪ್ರವಾಹ ಹಾಗೂ ನದಿಗಳಲ್ಲಿ ಪ್ರವಾಹ ಉಂಟಾಗುವ, ರಸ್ತೆಗಳು ಮತ್ತು ಸೇತುವೆಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಸಿದೆ. ಜೊತೆಗೆ, ಬಿರುಗಾಳಿಯ ಪರಿಣಾಮ ದುರ್ಬಲ ಮರಗಳು ಉರುಳುವ, ಹಳೆಯ ಕಟ್ಟಡಗಳಿಗೆ ಹಾನಿಯಾಗುವ ಹಾಗೂ ಗುಡ್ಡಪ್ರದೇಶಗಳಲ್ಲಿ ಭೂಕುಸಿತ, ಮಣ್ಣಿನ ಕುಸಿತ ಮತ್ತು ಬಂಡೆಗಳು ಉರುಳುವ ಅಪಾಯವೂ ಇದೆ ಎಂದು ತಿಳಿಸಿದೆ.

ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಸಲಹೆಯಲ್ಲಿ, ಎಸ್‌ಡಿಎಂಎ ಖಾಸಗಿ ಸಂಸ್ಥೆಗಳು ಸಾಧ್ಯವಾದಷ್ಟು ವರ್ಕ್ ಫ್ರಮ್ ಹೋಮ್ ವ್ಯವಸ್ಥೆ ಜಾರಿಗೆ ತರಬೇಕು ಎಂದು ತಿಳಿಸಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಸರ್ಕಾರಿ ಹಾಗೂ ಅರೆ ಸರ್ಕಾರಿ ಕಚೇರಿಗಳ ಸಿಬ್ಬಂದಿಗೆ ಮಧ್ಯಾಹ್ನದ ನಂತರ ಅರ್ಧ ದಿನ ರಜೆ ನೀಡಲಾಗಿದೆ.

ಭಾರೀ ಮಳೆಯಿಂದ ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನಜೀವನ ಅಸ್ತವ್ಯಸ್ತವಾಗಿರುವ ಹಿನ್ನೆಲೆಯಲ್ಲಿ, ಅನಗತ್ಯವಾಗಿ ಹೊರಗೆ ತೆರಳಬಾರದು, ಅತ್ಯಗತ್ಯ ಸಂದರ್ಭಗಳನ್ನು ಹೊರತುಪಡಿಸಿ ಮನೆಯಲ್ಲೇ ಇರಬೇಕು ಹಾಗೂ ಸರ್ಕಾರದ ಅಧಿಕೃತ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಮಹಾರಾಷ್ಟ್ರ ವಿಪತ್ತು ನಿರ್ವಹಣಾ ಸಚಿವ ಗಿರೀಶ್ ಮಹಾಜನ್ ಸಾರ್ವಜನಿಕರು ಮನೆಯಲ್ಲೇ ಸುರಕ್ಷಿತವಾಗಿರಬೇಕು ಎಂದು ಮನವಿ ಮಾಡಿದ್ದು, ಈ ಪರಿಸ್ಥಿತಿಯನ್ನು ರಾಜಕೀಯಗೊಳಿಸಬಾರದು ಎಂದು ಪ್ರತಿಪಕ್ಷಗಳಿಗೆ ಮನವಿ ಮಾಡಿದ್ದಾರೆ.

"ಇಂದು ಯಾವುದೇ ಕಾರಣಕ್ಕೂ ಜನರು ಹೊರಗೆ ಬರಬಾರದು. ಪ್ರವಾಸೋದ್ಯಮಕ್ಕೂ ಹೋಗಬೇಡಿ. ಕಚೇರಿಗಳು, ಶಾಲೆಗಳು ಹಾಗೂ ಕಾಲೇಜುಗಳನ್ನು ಮುಚ್ಚುವ ಬಗ್ಗೆ ಶೀಘ್ರದಲ್ಲೇ ಘೋಷಣೆ ಮಾಡುತ್ತೇವೆ. ದಯವಿಟ್ಟು ಅಗತ್ಯವಿಲ್ಲದೆ ಹೊರಗೆ ಬರಬೇಡಿ," ಎಂದು ಅವರು ವಿಧಾನಭವನ ಆವರಣದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮುಂಬೈ–ಪುಣೆ ಎಕ್ಸ್‌ಪ್ರೆಸ್‌ವೇಯ ಮಿಸ್ಸಿಂಗ್ ಲಿಂಕ್ ಯೋಜನೆ ಬಳಿ ಸಂಭವಿಸಿದ ಭೂಕುಸಿತದ ಕುರಿತು ಪ್ರತಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, "ಇನ್ನೆರಡು ದಿನಗಳ ನಂತರ ರಾಜಕೀಯ ಮಾಡಬಹುದು. ಈಗ ಎಲ್ಲರೂ ಸರ್ಕಾರಕ್ಕೆ ಸಹಕಾರ ನೀಡಬೇಕು. ಜನರ ಸುರಕ್ಷತೆಯೇ ನಮ್ಮ ಆದ್ಯತೆ," ಎಂದು ಹೇಳಿದ್ದಾರೆ.

ಭಾನುವಾರ ಗಂಟೆಗೆ 50–60 ಕಿ.ಮೀ. ವೇಗದಲ್ಲಿದ್ದ ಗಾಳಿ ಸೋಮವಾರ 70–90 ಕಿ.ಮೀ. ವೇಗಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಹಾಜನ್ ತಿಳಿಸಿದ್ದಾರೆ. ಇದರಿಂದ ಜೀವ ಹಾಗೂ ಆಸ್ತಿಪಾಸ್ತಿಗೆ ಗಂಭೀರ ಅಪಾಯ ಉಂಟಾಗುವ ಸಾಧ್ಯತೆಯಿದೆ ಎಂದರು.

"ಮುಂಬೈನ ಹಲವು ಭಾಗಗಳಲ್ಲಿ ಮರಗಳು ಉರುಳಿ ವಾಹನಗಳಿಗೆ ಹಾನಿಯಾಗಿದೆ. ಜೀವಹಾನಿಯ ಅಪಾಯವೂ ಇದೆ. ಅತ್ಯಗತ್ಯ ಕಾರಣವಿಲ್ಲದೆ ಯಾರೂ ಹೊರಗೆ ಬರಬಾರದು," ಎಂದು ಅವರು ಎಚ್ಚರಿಸಿದರು. ಸರ್ಕಾರದ ಸೂಚನೆಗಳನ್ನು ಪಾಲಿಸದವರ ವಿರುದ್ಧ ಅಗತ್ಯವಿದ್ದರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದೂ ಹೇಳಿದರು.

ಮಹಾರಾಷ್ಟ್ರದ ಅಣೆಕಟ್ಟುಗಳಲ್ಲಿನ ನೀರಿನ ಮಟ್ಟ ಗಮನಾರ್ಹವಾಗಿ ಏರಿಕೆಯಾಗಲು ಇನ್ನೂ ಮೂರುರಿಂದ ನಾಲ್ಕು ದಿನಗಳ ಕಾಲ ನಿರಂತರ ಮಳೆ ಅಗತ್ಯವಿದೆ ಎಂದು ಸಚಿವರು ತಿಳಿಸಿದ್ದು, ರಾಜ್ಯದ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ: ಭೂಕುಸಿತಕ್ಕೆ ಮುಂಬೈ-ಪುಣೆ ರೈಲು ಸಂಚಾರ ಸ್ಥಗಿತ; ಎಕ್ಸ್‌ಪ್ರೆಸ್‌ವೇ ಬಂದ್, ಸಾವಿರಾರು ಪ್ರಯಾಣಿಕರು ಪರದಾಟ..!

ಕುಮ್ಕಿ ಆನೆ ಸಾವು: ಅರಣ್ಯ ಇಲಾಖೆ ಸಿಬ್ಬಂದಿಗಳ ಕಣ್ಣೀರಿನ ವಿದಾಯ

ಇದೆಂಥಾ ಲವ್! ಹಿಂದು ಮಹಿಳೆಯರು ಬೇಕು, ಆದ್ರೆ ಮತಾಂತರ ಯಾಕೆ ಆಗಿಲ್ಲ, ನಟ ಆಮೀರ್ ಖಾನ್ ವಿರುದ್ಧ ಮುಸ್ಲಿಂ ಲೀಡರ್ ಕಿಡಿ, Video

FIFA World Cup 2026: ಸೋಲಿನ ಆಘಾತದೊಂದಿಗೆ ಬ್ರೆಜಿಲ್ ನಿರ್ಗಮನ, ಅಂತಾರಾಷ್ಟ್ರೀಯ ಫುಟ್ ಬಾಲ್ ಗೆ ನೆಯ್ಮಾರ್ ಕಣ್ಣೀರ ವಿದಾಯ! Video

ಪೆಸಿಫಿಕ್ ಮಹಾಸಾಗರದಲ್ಲಿ ಪರಮಾಣು ಸಾಮರ್ಥ್ಯದ ಕ್ಷಿಪಣಿ ಪರೀಕ್ಷೆ ನಡೆಸಿದ ಚೀನಾ; ಜಪಾನ್-ನ್ಯೂಜಿಲೆಂಡ್‌ ತೀವ್ರ ಕಳವಳ..!