ಅಮರಾವತಿ (ಆಂಧ್ರ ಪ್ರದೇಶ): ವಿಭಜಿತ ಆಂಧ್ರ ಪ್ರದೇಶದ (Andhra Pradesh) ರಾಜಧಾನಿಯಾಗಿ ಅಮರಾವತಿಯನ್ನು (Amaravati) ಸಂಸತ್ತು ಅಂಗೀಕರಿಸಿದ್ದೆ ತಡ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು (Chandrababu Naidu) ನೇತೃತ್ವದ ಸರ್ಕಾರವು ರಾಜಧಾನಿ ಅಭಿವೃದ್ಧಿಯ ಯೋಜನೆಯನ್ನು ವೇಗವಾಗಿ ಜಾರಿಗೊಳಿಸಲು ಸಜ್ಜಾಗಿದೆ. ಅದರಂತೆ ಸರ್ಕಾರವು, ಎಪಿಸಿಆರ್‌ಡಿಎಯ 63ನೇ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳು ಯೋಜನೆಯು ಅನುಷ್ಠಾನದ ಹಂತಕ್ಕೆ ತಲುಪಿರುವುದನ್ನು ಖಚಿತ ಪಡಿಸಿದೆ. ಇದರೊಂದಿಗೆ, ಸರಕಾರವು, ರಾಜಧಾನಿಗೆ ಜಾಗ ನೀಡಿದ ರೈತರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಭೂ ವಿವಾದಗಳನ್ನು ಬಗೆಹರಿಸಲು ಕಠಿಣ ಕಾನೂನು ಕ್ರಮಗಳ ಮೂಲಕ ಆಡಳಿತಾತ್ಮಕ ವಿಳಂಬಕ್ಕೆ ತೆರೆ ಎಳೆದಿದೆ. ಆ ಕುರಿತ ವರದಿ ಇಲ್ಲಿದೆ.
ಮುಂದುವರೆದು, ಅಮರಾವತಿ ಆರ್ಥಿಕ ಪ್ರದೇಶ ಯೋಜನೆಯ ಮತ್ತು ಸಮೀಕ್ಷೆ ಕಾರ್ಯಗಳು ಬಹುತೇಕ ಪೂರ್ಣಗೊಂಡಿವೆ. ಹಾಗಾಗಿ, ಸರ್ಕಾರದ ಗಮನವು ನಿರ್ಮಾಣ ದತ್ತ ನೆಟ್ಟಿದೆ. ಅದ್ರಲ್ಲೂ, ನಾಯ್ಡು ಸರ್ಕಾರದ ಪ್ರಸ್ತುತ ಅಧಿಕಾರಾವಧಿಯ ಎರಡು ವರ್ಷಗಳು ಮುಗಿದಿರುವುದರಿಂದ ಪ್ರಮುಖ ಮೂಲಸೌಕರ್ಯಗಳಲ್ಲಿ ಪ್ರಗತಿಯನ್ನು ತೋರಿಸಲು ಮತ್ತು ಯೋಜನೆಯನ್ನು ವೇಳಾಪಟ್ಟಿಯಂತೆ ಮುಂದುವರಿಸಲು ಸರ್ಕಾರ ಬಯಸುತ್ತಿದೆ ಎನ್ನಲಾಗಿದೆ.
ಹಾಗಾದ್ರೆ ಏನಿದು ಅಮರಾವತಿ ಆರ್ಥಿಕ ಪ್ರದೇಶ ಯೋಜನೆ?
ಅಮರಾವತಿ ಆರ್ಥಿಕ ಪ್ರದೇಶವು ಹೊಸ ರಾಜಧಾನಿಯನ್ನು ಕೇಂದ್ರವಾಗಿಟ್ಟುಕೊಂಡ ಪ್ರಾದೇಶಿಕ ಅಭಿವೃದ್ಧಿ ಯೋಜನೆಯಾಗಿದೆ. ಇದು ಪಶ್ಚಿಮ ಗೋದಾವರಿ, ಏಲೂರು, ಕೃಷ್ಣಾ, ಎನ್‌ಟಿಆರ್, ಗುಂಟೂರು, ಬಾಪಟ್ಲ, ಪಲ್ನಾಡು, ಮಾರ್ಕಾಪುರಂ ಮತ್ತು ಪ್ರಕಾಶಂ ಎಂಬ ಒಂಬತ್ತು ಜಿಲ್ಲೆಗಳನ್ನು ಒಳಗೊಂಡಿದೆ. ಅದ್ರಲ್ಲೂ, ಈ ಜಿಲ್ಲೆಗಳು ಒಟ್ಟಾಗಿ ರಾಜ್ಯದ ಜನಸಂಖ್ಯೆ ಮತ್ತು ವಿಸ್ತೀರ್ಣದ ಸುಮಾರು ಮೂರನೇ ಒಂದು ಭಾಗವನ್ನು ಪ್ರತಿನಿಧಿಸುತ್ತದೆ. ಅದರಂತೆ ಇದು ಅಮರಾವತಿಯನ್ನು ಕೃಷಿ, ಜಲಚರ ಸಾಕಣೆ, ಆಹಾರ ಸಂಸ್ಕರಣೆ ಮತ್ತು ಉತ್ಪಾದನೆಯಂತಹ ಕೈಗಾರಿಕೆಗಳೊಂದಿಗೆ ಸಂಪರ್ಕಿಸುವುದು ನಾಯ್ಡು ಪ್ಲಾನ್.
ಅಮರಾವತಿ ಯೋಜನೆಗೆ ಹಣಕಾಸು ನೆರವು ಎಲ್ಲಿಂದ ಸಿಗುತ್ತಿದೆ?
ಅಮರಾವತಿ ಯೋಜನೆಗೆ ಆಂಧ್ರ ಪ್ರದೇಶ ಸರ್ಕಾರ ಒಟ್ಟು ₹40,000 ಕೋಟಿಗೂ ಅಧಿಕ ಹಣವನ್ನು ವಿವಿಧ ಮೂಲಗಳಿಂದ ಹಣಕಾಸು ಕ್ರೋಢೀಕರಿಸಲಾಗುತ್ತಿದೆ. ಅವುಗಳು..
ವಿಶ್ವ ಬ್ಯಾಂಕ್ ಮತ್ತು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ನಿಂದ ಅಂತರರಾಷ್ಟ್ರೀಯ ಸಾಲಗಳು.
NaBFID, HUDCO ಮತ್ತು NABARD ನಂತಹ ದೇಶೀಯ ಹಣಕಾಸು ಸಂಸ್ಥೆಗಳ ನೆರವು.
ಕೇಂದ್ರ ಸರ್ಕಾರದಿಂದ ₹15,000 ಕೋಟಿ ವಿಶೇಷ ಸಹಾಯ ಪ್ಯಾಕೇಜ್.
ಅಮರಾವತಿಗೆ ಭೂಮಿ ಎಲ್ಲಿಂದ ಬಂತು?
ಸರ್ಕಾರವು ಸಾಂಪ್ರದಾಯಿಕ ಭೂಸ್ವಾಧೀನ ಪದ್ಧತಿಯ ಬದಲಿಗೆ ಲ್ಯಾಂಡ್ ಪೂಲಿಂಗ್ ಸ್ಕೀಮ್ ಮೂಲಕ ಭೂಮಿಯನ್ನು ಸಂಗ್ರಹಿಸಿದೆ. ಇದರ ಅಡಿಯಲ್ಲಿ ಸುಮಾರು 29,700 ರೈತರು ತಮ್ಮ 33,000 ಎಕರೆ ಭೂಮಿಯನ್ನು ಸರ್ಕಾರಕ್ಕೆ ನೀಡಿದ್ದಾರೆ. ಇನ್ನು ಸರ್ಕಾರವು ಭೂಮಿಗೆ ಬದಲಾಗಿ ರೈತರಿಗೆ ಅಭಿವೃದ್ಧಿಪಡಿಸಿದ ವಸತಿ ಮತ್ತು ವಾಣಿಜ್ಯ ಪ್ಲಾಟ್‌ಗಳನ್ನು ನೀಡುತ್ತಿದೆ. ಆದರೆ, 2019 ಮತ್ತು 2024 ರ ನಡುವೆ ಕಾಮಗಾರಿ ವಿಳಂಬ ವಾಯಿತು ಅದಕ್ಕೆ ಪ್ರಮುಖ ಕಾರಣ, 2019 ರಲ್ಲಿ ಅಧಿಕಾರಕ್ಕೆ ಬಂದ ವೈಎಸ್‌ಆರ್‌ಸಿಪಿ ಸರ್ಕಾರ.
ಹೌದು, ಜಗನ್ ಮೋಹನ್ ನೇತೃತ್ವದ ವೈಎಸ್‌ಆರ್‌ಸಿಪಿ ಸರ್ಕಾರವು 'ಮೂರು ರಾಜಧಾನಿ' ಮಾದರಿಯನ್ನು (ವಿಶಾಖಪಟ್ಟಣಂ-ಕಾರ್ಯನಿರ್ವಾಹಕ, ಅಮರಾವತಿ-ಶಾಸಕಾಂಗ, ಕರ್ನೂಲ್-ನ್ಯಾಯಾಂಗ) ಪ್ರಸ್ತಾಪಿಸಿತು. ಈ ನೀತಿ ಬದಲಾವಣೆಯಿಂದಾಗಿ ಕಾನೂನು ವಿವಾದಗಳು ಉಂಟಾಗಿ ಕಾಮಗಾರಿ ಸ್ಥಗಿತಗೊಂಡಿತು ಮತ್ತು ಅಂತರರಾಷ್ಟ್ರೀಯ ಹಣಕಾಸು ನೆರವು ಕೂಡ ಸ್ಥಗಿತಗೊಂಡಿತ್ತು.
ಏನಿದು ಹೊಸ MAVIGUN ಪ್ರಸ್ತಾವನೆ?
MAVIGUN ಎಂಬುದು ಅಮರಾವತಿ ಎಂಬ ಹೊಸ ಹಸಿರುಮನೆ ರಾಜಧಾನಿಯನ್ನು ನಿರ್ಮಿಸುವ ಬದಲು ಮಚಲಿಪಟ್ಟಣ, ವಿಜಯವಾಡ ಮತ್ತು ಗುಂಟೂರು ನಡುವಿನ ಅಸ್ತಿತ್ವದಲ್ಲಿರುವ ನಗರ ಕಾರಿಡಾರ್ ಅನ್ನು ಬಲಪಡಿಸುವುದರ ಮೇಲೆ ಕೇಂದ್ರೀಕರಿಸಿದ ಪರ್ಯಾಯ ಅಭಿವೃದ್ಧಿ ಪ್ರಸ್ತಾವನೆಯಾಗಿದೆ. ಈ ಯೋಜನೆಯನ್ನು ಬೆಂಬಲಿಸಿದವರು, ಅಸ್ತಿತ್ವದಲ್ಲಿರುವ ನಗರಗಳನ್ನು ಅಭಿವೃದ್ಧಿಪಡಿಸುವುದು ಹೆಚ್ಚು ಪ್ರಾಯೋಗಿಕ ಮತ್ತು ವೆಚ್ಚ ಪರಿಣಾಮಕಾರಿ ವಿಧಾನ ಎಂದು ವಾದಿಸುತ್ತಾರೆ.
ಅಮರಾವತಿಯ ರಾಜಧಾನಿ ಸ್ಥಾನಮಾನಕ್ಕೆ ಕಾನೂನು ಬಲ?
ಆಂಧ್ರ ಪ್ರದೇಶದ ರಾಜಧಾನಿಯಾಗಿ ಅಮರಾವತಿಯನ್ನು ಸಂಸತ್ತು ಅಂಗೀಕರಿಸುವ ಮೂಲಕ ಶಾಸನಾತ್ಮಕ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತದೆ. ಇದು ಸಾಲ ನೀಡುವವರು ಮತ್ತು ಹೂಡಿಕೆದಾರರಲ್ಲಿ ವಿಶ್ವಾಸವನ್ನು ಪುನಃಸ್ಥಾಪಿಸಲು ಸಹಾಯವಾಗಿದೆ. ಆದಾಗ್ಯೂ ಯಾವುದೇ ದೊಡ್ಡ ನೀತಿಯಂತೆ ಭವಿಷ್ಯದ ಸರ್ಕಾರಗಳು ಅಥವಾ ಶಾಸಕಾಂಗಗಳು ಈ ವಿಷಯವನ್ನು ಮರುಪರಿಶೀಲಿಸುವುದು ಎನ್ನಲಾಗಿದೆ.
ಮುಂದುವರೆದು, ಜೂನ್ 27, 2026 ರವರೆಗಿನ ಎಪಿಸಿಆರ್‌ಡಿಎ ದತ್ತಾಂಶದ ಪ್ರಕಾರ ರಾಜಧಾನಿ ನಿರ್ಮಾಣವು ನಿಗದಿತ ವೇಳಾಪಟ್ಟಿಗಿಂತಲೂ ಹಿಂದುಳಿದಿದೆ. ಸುಮಾರು ₹51,000 ಕೋಟಿ ಮೌಲ್ಯದ 95 ಯೋಜನೆಗಳಲ್ಲಿ ಕೇವಲ 18% ಪ್ರಗತಿ ಕಾಣಲಾಗಿದೆ. ಆದರೆ ಪ್ಲಾನ್ ಪ್ರಕಾರ ಯೋಜನೆಯು ಸುಮಾರು 45% ಕಂಪ್ಲೀಟ್ ಆಗಬೇಕಿತ್ತು.
ಹಾಗಾದ್ರೆ, ಪ್ರಾಬ್ಲಮ್ ಆಗಿದ್ದು ಎಲ್ಲಿ?
ಲೆಕ್ಕಪರಿಶೋಧನೆಯು ಹಲವಾರು ಬೃಹತ್ ಯೋಜನೆಗಳಲ್ಲಿ ವಿಳಂಬ ಮತ್ತು ಕಾರ್ಮಿಕರ ಕೊರತೆಯನ್ನು ತೋರಿಸಿದೆ. ₹12,818.63 ಕೋಟಿ ಮೌಲ್ಯದ ಅತಿ ದೊಡ್ಡ ಪ್ಯಾಕೇಜ್‌ನಲ್ಲಿ 19 ಕಾಮಗಾರಿಗಳಿದ್ದು, ಕೇವಲ 7.49% ಪ್ರಗತಿ ಸಾಧಿಸಲಾಗಿದೆ. ಆದ್ರೆ, ಅವುಗಳ ಗುರಿ 30.61% ಆಗಿತ್ತು. ಇನ್ನು ₹11,094.92 ಕೋಟಿ ಮೌಲ್ಯದ ಮತ್ತೊಂದು ಪ್ಯಾಕೇಜ್ 46.96% ಗುರಿಯಲ್ಲಿ 18.86% ಪ್ರಗತಿ ಸಾಧಿಸಿದೆ. ಜೊತೆಗೆ ₹4,552.69 ಕೋಟಿ ಎಂಜಿನಿಯರಿಂಗ್ ಪ್ಯಾಕೇಜ್ 54.72% ಗುರಿಯ ವಿರುದ್ಧ 15.99% ಸಾಧಿಸಿದೆ.
ಇದರೊಂದಿಗೆ, ಲೆಕ್ಕಪರಿಶೋಧನೆಯಲ್ಲಿ 36,000 ಕ್ಕಿಂತ ಹೆಚ್ಚು ಕಾರ್ಮಿಕರ ಅಗತ್ಯವಿದೆ ಎಂದಿದೆ. ಆದರೆ ಕೆಲಸಕ್ಕೆ ಸುಮಾರು 26,900 ಕಾರ್ಮಿಕರನ್ನು ಮಾತ್ರ ನಿಯೋಜಿಸಲಾಗಿದೆ. ಅದರಲ್ಲೂ, ₹12,818.63 ಕೋಟಿ ಪ್ಯಾಕೇಜ್‌ನಲ್ಲಿ 5,700 ಕಾರ್ಮಿಕರ ಅವಶ್ಯಕತೆಯ ವಿರುದ್ಧ ಗುತ್ತಿಗೆದಾರರು 2,623 ಕಾರ್ಮಿಕರನ್ನು ನಿಯೋಜಿಸಿದ್ದಾರೆ. ಜೊತೆಗೆ ₹11,094.92 ಕೋಟಿ ಪ್ಯಾಕೇಜ್‌ನಲ್ಲಿ 7,236 ಗುರಿಯ ವಿರುದ್ಧ 4,647 ಕಾರ್ಮಿಕರನ್ನು ನಿಯೋಜಿಸಲಾಗಿದೆ.
ಭೂ ಸಮಸ್ಯೆಗಳನ್ನು ಪರಿಹರಿಸಲು ಹಾಗು ರೈತರನ್ನು ಬೆಂಬಲಿಸಲು ಎಪಿಸಿಆರ್‌ಡಿಎ ಯಾವ ಹೊಸ ಕ್ರಮಗಳನ್ನು ಘೋಷಿಸಿದೆ?
ಎಪಿಸಿಆರ್‌ಡಿಎ ಹಲವಾರು ಕ್ರಮಗಳನ್ನು ಘೋಷಿಸಿದೆ. ಅವುಗಳೆಂದರೆ..
ಮಾತುಕತೆ ವಿಫಲವಾದ ಪ್ರಮುಖ ರಸ್ತೆಗಳಿಗೆ ಅಗತ್ಯವಿರುವ ಕೆಲವು ಉಳಿದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಭೂ ಸ್ವಾಧೀನ ಕಾಯ್ದೆಯನ್ನು ಬಳಸುವುದು
ವಿಮಾನ ನಿಲ್ದಾಣ, ರೈಲ್ವೆ ಮಾರ್ಗಗಳು, ಸ್ಪೋರ್ಟ್ಸ್ ಸಿಟಿ ಮತ್ತು ಒಳವರ್ತುಲ ರಸ್ತೆಯಂತಹ ಯೋಜನೆಗಳಿಗೆ ಹೊಸದಾಗಿ ಭೂ ಸಮೀಕರಣ ಯೋಜನೆಗೆ ಸೇರುವ ರೈತರಿಗೆ 10 ವರ್ಷಗಳ ಕಾಲ ಪ್ರತಿ ಎಕರೆಗೆ ₹40,000 ವಾರ್ಷಿಕ ಧನಸಹಾಯ
2014 ರಿಂದ 2019 ರ ನಡುವೆ ಭೂಮಿ ನೀಡಿದ ರೈತರಿಗೆ ಧನಸಹಾಯ ಪಾವತಿಯನ್ನು 10 ವರ್ಷಗಳಿಂದ 15 ವರ್ಷಗಳಿಗೆ ವಿಸ್ತರಿಸುವುದು
ಸ್ಥಳಾಂತರಗೊಂಡ ಕುಟುಂಬಗಳಿಗೆ ತಾತ್ಕಾಲಿಕ ಬಾಡಿಗೆ ನೆರವನ್ನು ಒಂದು ವರ್ಷದವರೆಗೆ, ತಿಂಗಳಿಗೆ ₹5,000 ದಿಂದ ₹10,000 ಕ್ಕೆ ಹೆಚ್ಚಿಸುವುದು. ಜೊತೆಗೆ ಬದಲಿ ನಿವೇಶನಗಳು ನೀಡುವುದು.
ಅದರೊಂದಿಗೆ, ಇತ್ತೀಚಿನ ಭೂ ಸಮೀಕರಣ ಕಾರ್ಯಕ್ರಮಕ್ಕೆ ಸೇರುವ ಅರ್ಹ ರೈತರಿಗೆ ₹1.5 ಲಕ್ಷದವರೆಗಿನ ಬೆಳೆ ಸಾಲ ಮನ್ನಾ
ಭೂ ಹಂಚಿಕೆ ಮತ್ತು ನಗರಾಭಿವೃದ್ಧಿಗೆ ಸರ್ಕಾರದ ಯೋಜನೆ ಏನು?
ಸರ್ಕಾರವು ಸುಮಾರು 217 ಚದರ ಕಿ.ಮೀ ವ್ಯಾಪ್ತಿಯಲ್ಲಿ 25 ಯೋಜಿತ ಟೌನ್‌ಶಿಪ್‌ಗಳ ಮೂಲಕ ಅಮರಾವತಿಯನ್ನು ಅಭಿವೃದ್ಧಿಪಡಿಸಲು ಯೋಜಿಸಿದೆ. ಪ್ರತಿ ಟೌನ್‌ಶಿಪ್‌ನಲ್ಲಿ ಶಾಲೆಗಳು, ಆಸ್ಪತ್ರೆಗಳು ಮತ್ತು ಇತರ ಅಗತ್ಯ ಸಾರ್ವಜನಿಕ ಸೌಲಭ್ಯಗಳು ಇರುತ್ತವೆ ಎನ್ನಲಾಗಿದೆ. ಇನ್ನು, ಪ್ರಸ್ತಾವಿತ ಅಂತರರಾಷ್ಟ್ರೀಯ ಸ್ಪೋರ್ಟ್ಸ್ ಸಿಟಿಗಾಗಿ ಮೀಸಲಿಟ್ಟ 307 ಎಕರೆಗೆ ಸಂಬಂಧಿಸಿದ ಭೂ ಮಾಲೀಕತ್ವದ ಸಮಸ್ಯೆಗಳನ್ನು ಪರಿಹರಿಸಲು ಎಪಿಸಿಆರ್‌ಡಿಎ ₹159 ಕೋಟಿ ಪರಿಹಾರವನ್ನು ಅನುಮೋದಿಸಿದೆ ಮತ್ತು ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಇತರ ಸಂಸ್ಥೆಗಳಿಗೆ ಭೂಮಿಯನ್ನು ಮೀಸಲಿಟ್ಟಿದೆ.
ಒಟ್ಟಾರೆ ರಾಜಧಾನಿ ನಗರದ ಈಗಿನ ಸ್ಥಿತಿಗತಿ ಏನು?
ಪ್ರಸ್ತಾವಿತ ಸಚಿವಾಲಯ ಸಂಕೀರ್ಣವು ಅಮರಾವತಿಯ ಪ್ರಮುಖ ಆಡಳಿತಾತ್ಮಕ ಯೋಜನೆಯಾಗಿ ಉಳಿದಿದೆ. ಫಾಸ್ಟರ್ ಪ್ಲಸ್ ಪಾರ್ಟ್‌ನರ್ಸ್ ವಿನ್ಯಾಸಗೊಳಿಸಿದ ಇದು ಐದು ಗೋಪುರಗಳನ್ನು ಒಳಗೊಂಡಿರುತ್ತದೆ. ನಾಲ್ಕು 40 ಅಂತಸ್ತಿನ ಇಲಾಖಾ ಗೋಪುರಗಳು ಮತ್ತು ಒಂದು 49 ಅಂತಸ್ತಿನ ಸಾಮಾನ್ಯ ಆಡಳಿತ ಇಲಾಖೆ ಗೋಪುರ. ಆದಾಗ್ಯೂ ಭೂ ಸ್ವಾಧೀನ ಮತ್ತು ಕಾನೂನು ವಿವಾದಗಳು ಮೊದಲ ಹಂತದ ಭಾಗಗಳನ್ನು ವಿಳಂಬಗೊಳಿಸುತ್ತಲೇ ಇವೆ. ಅಗತ್ಯವಿರುವ ಸುಮಾರು 2,500 ಎಕರೆಗಳಲ್ಲಿ ಸುಮಾರು 900 ಎಕರೆ ಇನ್ನೂ ವ್ಯಾಜ್ಯದಲ್ಲಿದೆ.