ಪಾಟ್ನಾ: ಜಗತ್ತಿನ ಅಪಾಯಕಾರಿ ಸರ್ಪಗಳಲ್ಲಿ ಕಿಂಗ್ ಕೋಬ್ರಾ ಅಥವಾ ಕಾಳಿಂಗ ಸರ್ಪ ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ. ಆದರೆ ಜಗತ್ತಿನ ಈ ವಿಷಕಾರಿ ಹಾವಿನಿಂದ ಬರೊಬ್ಬರಿ 51 ಬಾರಿ ಕಚ್ಚಿಸಿಕೊಂಡರೂ ಬಿಹಾರದ ಸ್ನೇಕ್ ಲೇಡಿ ಜಾನಕಿ ದೇವಿ ಬದುಕುಳಿದಿದ್ದಾರೆ.
ಅಚ್ಚರಿಯಾದರೂ ಇದು ಸತ್ಯ.. ಬಿಹಾರದ "ಸ್ನೇಕ್ ಲೇಡಿ" ಎಂದೇ ಖ್ಯಾತಿಯಾಗಿರುವ ಜಾನಕಿ ದೇವಿ ಅವರಿಗೆ ಹಾವು ರಕ್ಷಣೆ ಕಾರ್ಯಾಚರಣೆ ವೇಳೆ ಕಿಂಗ್ ಕೋಬ್ರಾ ಕಚ್ಚಿದ ಘಟನೆ ನಡೆದಿದ್ದು, ಸಕಾಲದಲ್ಲಿ ಚಿಕಿತ್ಸೆ ದೊರೆತ ಹಿನ್ನೆಲೆಯಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
56 ವರ್ಷದ ಜಾನಕಿ ದೇವಿ ಅವರು ಬುಧವಾರ ಸಂಜೆ ಬಿಹಾರದ ಪಶ್ಚಿಮ ಚಂಪಾರಣ ಜಿಲ್ಲೆಯ ಭಾರತ-ನೇಪಾಳ ಗಡಿಭಾಗದ ವಾಲ್ಮೀಕಿನಗರ ಸಮೀಪದ ಬಿಸಾಹಾ ಗ್ರಾಮದಲ್ಲಿ ಮನೆಯೊಂದಕ್ಕೆ ನುಗ್ಗಿದ್ದ ಕಿಂಗ್ ಕೋಬ್ರಾ ಹಾವನ್ನು ರಕ್ಷಿಸಲು ಆಗಮಿಸಿದ್ದರು.
ಈ ವೇಳೆ ಹಾವು ಆಕಸ್ಮಿಕವಾಗಿ ಜಾನಕಿ ದೇವಿಗೆ ಕಚ್ಚಿದ್ದು, ಕೂಡಲೇ ಅವರನ್ನು ನೇಪಾಳದ ತ್ರಿವೇಣಿ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಅವರಿಗೆ ಚಿಕಿತ್ಸೆ ನೀಡಿದ್ದು, ಇದೀಗ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ಫೋಟೋಗೆ ಪೋಸ್ ನೀಡುತ್ತಿದ್ದ ವೇಳೆ ಕಚ್ಚಿದ ಕಾಳಿಂಗ ಸರ್ಪ
ಇನ್ನು ಜಾನಕಿ ದೇವಿ ಅವರ ಪುತ್ರ ಕೃಷ್ಣ ಕುಮಾರ್ ನೀಡಿದ ಮಾಹಿತಿಯಂತೆ, ಬಿಸಾಹಾ ಗ್ರಾಮದ ಸಮೀಪದ ಹಾತಿ ಮಲ್ಖಾಂಟಾ ಟೋಲಾದ ನಿವಾಸಿಯೊಬ್ಬರ ಮನೆಗೆ ಕಿಂಗ್ ಕೋಬ್ರಾ ನುಗ್ಗಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ಜಾನಕಿ ದೇವಿ ಸ್ಥಳಕ್ಕೆ ತೆರಳಿ ಹಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿದ್ದರು.
ಹಾವನ್ನು ರಕ್ಷಿಸಿದ ಬಳಿಕ ಅದನ್ನು 6 ಆರ್‌ಡಿ ಪ್ರದೇಶಕ್ಕೆ ಕೊಂಡೊಯ್ದು, ಕುತ್ತಿಗೆಯ ಸುತ್ತ ಕಿಂಗ್ ಕೋಬ್ರಾವನ್ನು ಸುತ್ತಿಕೊಂಡು ಛಾಯಾಚಿತ್ರಗಳಿಗೆ ಪೋಸ್ ನೀಡುತ್ತಿದ್ದ ವೇಳೆ, ಏಕಾಏಕಿ ಹಾವು ಅವರ ಕೈಗೆ ಕಚ್ಚಿದೆ. ತಕ್ಷಣವೇ ಅವರನ್ನು ನೇಪಾಳದ ನವಲ್ಪರಾಸಿ ಜಿಲ್ಲೆಯ ತ್ರಿವೇಣಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ನೀಡಿದ ವೈದ್ಯರು ಅವರ ಸ್ಥಿತಿ ಅಪಾಯದಿಂದ ಹೊರಗಿದೆ ಎಂದು ದೃಢಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
12ನೇ ವಯಸ್ಸಿನಿಂದಲೇ ಹಾವು ಹಿಡಿಯುತ್ತಿದ್ದ ಜಾನಕಿ ದೇವಿ
ಅಂದಹಾಗೆ ಜಾನಕಿ ದೇವಿ ಬಿಹಾರದಲ್ಲಿ ಸ್ನೇಕ್ ಲೇಡಿ ಎಂದೇ ಖ್ಯಾತಿ ಗಳಿಸಿದ್ದಾರೆ. ಸ್ಥಳೀಯರ ಪ್ರಕಾರ, ಜಾನಕಿ ದೇವಿ ಕೇವಲ 12ನೇ ವಯಸ್ಸಿನಿಂದಲೇ ಹಾವುಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಅವಧಿಯಲ್ಲಿ ಸಾವಿರಾರು ವಿಷಕಾರಿ ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡುವ ಮೂಲಕ ಅವರು ಜನರ ಮೆಚ್ಚುಗೆ ಗಳಿಸಿದ್ದಾರೆ.
51 ಬಾರಿ ಹಾವು ಕಡಿತ
ಆಶ್ಚರ್ಯದ ಸಂಗತಿಯೆಂದರೆ, ಇದುವರೆಗೆ 50ಕ್ಕೂ ಹೆಚ್ಚು ಬಾರಿ ವಿಷಕಾರಿ ಹಾವುಗಳು ಅವರನ್ನು ಕಚ್ಚಿದ್ದರೂ, ಜಾನಕಿ ದೇವಿ ಪ್ರತೀ ಬಾರಿಯೂ ಬದುಕುಳಿದು ಮತ್ತೆ ಹಾವು ರಕ್ಷಣಾ ಕಾರ್ಯದಲ್ಲೇ ತೊಡಗಿಸಿಕೊಂಡಿದ್ದಾರೆ. ಮನೆಗಳಿಗೆ ಹಾವುಗಳು ನುಗ್ಗಿದರೆ ಜಾನಕಿ ದೇವಿ ಯಾವುದೇ ಹಣ ಪಡೆಯದೆ ಸ್ಥಳಕ್ಕೆ ತೆರಳಿ ಅವುಗಳನ್ನು ಹಿಡಿದು ಸಮೀಪದ ಅರಣ್ಯದಲ್ಲಿ ಸುರಕ್ಷಿತವಾಗಿ ಬಿಡುತ್ತಾರೆ ಎನ್ನಲಾಗಿದೆ.
ಅರಣ್ಯ ಇಲಾಖೆ ಮನವಿ
ಇತ್ತ ವಾಲ್ಮೀಕಿನಗರ ಅರಣ್ಯ ವಲಯಾಧಿಕಾರಿ ಸತ್ಯಂ ಕುಮಾರ್ ಅವರು ಮಾತನಾಡಿ, 'ಮಳೆಗಾಲ ಮತ್ತು ಋತು ಬದಲಾವಣೆಯ ಸಮಯದಲ್ಲಿ ಹಾವುಗಳು ಗ್ರಾಮಗಳಿಗೆ ನುಗ್ಗುವುದು ಸಾಮಾನ್ಯ. ಸಾರ್ವಜನಿಕರು ಸ್ವತಃ ಹಾವುಗಳನ್ನು ಹಿಡಿಯಲು ಯತ್ನಿಸಬಾರದು. ಬದಲಿಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆ ತರಬೇತಿ ಪಡೆದ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಣೆ ಕಾರ್ಯಾಚರಣೆ ನಡೆಸುತ್ತಾರೆ ಎಂದು ಅವರು ಮನವಿ ಮಾಡಿದ್ದಾರೆ.