ಸಿಕ್ಕಿಂ: ಸಿಕ್ಕಿಂನಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಸಂಭವಿಸಿದ ಭೀಕರ ಮೀಥೇನ್ ಅನಿಲ ಸ್ಫೋಟ ಹಾಗೂ ಭೂಕುಸಿತದಿಂದ ಕನಿಷ್ಠ 10 ಕಾರ್ಮಿಕರು ಮೃತಪಟ್ಟಿದ್ದು, ಸುರಂಗದೊಳಗೆ ಇನ್ನೂ 27 ಮಂದಿ ಸಿಲುಕಿರುವ ಹಿನ್ನೆಲಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ನಾಮ್ಚಿ ಜಿಲ್ಲೆಯಲ್ಲಿರುವ ಎನ್‌ಎಚ್‌ಪಿಸಿ (NHPC) ತೀಸ್ತಾ ಹಂತ-6 ಜಲವಿದ್ಯುತ್ ಯೋಜನೆಗಾಗಿ ನಿರ್ಮಿಸಲಾಗುತ್ತಿರುವ ಸುರಂಗದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಘಟನೆಯ ವೇಳೆ ಒಟ್ಟು 27 ಮಂದಿ ಕಾರ್ಮಿಕರು, ಎನ್‌ಎಚ್‌ಪಿಸಿ ಸಿಬ್ಬಂದಿ ಸೇರಿದಂತೆ, ಸುರಂಗದೊಳಗೆ ಕೆಲಸ ಮಾಡುತ್ತಿದ್ದರು.
ಇವರಲ್ಲಿ 10 ಮಂದಿ ಮೃತಪಟ್ಟಿರುವುದನ್ನು ಜಿಲ್ಲಾಡಳಿತ ಅಧಿಕೃತವಾಗಿ ದೃಢಪಡಿಸಿದ್ದು, ಉಳಿದವರನ್ನು ಸುರಕ್ಷಿತವಾಗಿ ಹೊರತೆಗೆಯಲು ಕಾರ್ಯಾಚರಣೆ ಮುಂದುವರೆದಿದೆ.
ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದ್ದು, ಸುರಂಗದೊಳಗೆ ಸುಮಾರು 1.5 ಕಿಲೋಮೀಟರ್ ಒಳಭಾಗದಲ್ಲಿ ಮೀಥೇನ್ ಅನಿಲ ಸಂಗ್ರಹವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಗರ್ಭದ ಕಲ್ಲಿನ ಪದರಗಳಿಂದ ಸಹಜವಾಗಿ ಹೊರಬಂದ ಮೀಥೇನ್ ಅನಿಲವನ್ನು ಹೊರಹಾಕಲು (ವೆಂಟಿಲೇಷನ್) ಮಾಡಿದ ಪ್ರಯತ್ನದ ವೇಳೆ ಏಕಾಏಕಿ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.
ಸ್ಫೋಟದ ತೀವ್ರತೆಗೆ ಸುರಂಗದ ಪ್ರವೇಶ ಭಾಗದಲ್ಲಿ ಭೂಕುಸಿತ ಉಂಟಾಗಿ, ಹೊರಬರುವ ದಾರಿ ಸಂಪೂರ್ಣ ಮುಚ್ಚಿಹೋಗಿದೆ. ಘಟನೆಯ ತಕ್ಷಣ ಕೆಲ ಕಾರ್ಮಿಕರು ಸುರಕ್ಷಿತವಾಗಿ ಹೊರಬಂದರೂ, ಹಲವರು ಸುರಂಗದ ಆಳದಲ್ಲಿ ಸಿಲುಕಿಕೊಂಡಿದ್ದಾರೆ.
ರಕ್ಷಣಾ ಕಾರ್ಯಕ್ಕೆ ಮೀಥೇನ್ ಅನಿಲವೇ ದೊಡ್ಡ ಸವಾಲು
ರಕ್ಷಣಾ ಕಾರ್ಯಾಚರಣೆಗೆ ಸುರಂಗದೊಳಗಿನ ಮೀಥೇನ್ ಅನಿಲ, ಆಮ್ಲಜನಕದ ಕೊರತೆ, ದಟ್ಟ ಹೊಗೆ, ದೃಷ್ಟಿ ಸಮಸ್ಯೆ ಮತ್ತು ಕಿರಿದಾದ ಸುರಂಗ ಮಾರ್ಗ ದೊಡ್ಡ ಅಡ್ಡಿಯಾಗಿದೆ.
ಆರಂಭದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಒಳನುಗ್ಗಲು ಪ್ರಯತ್ನಿಸಿದರೂ, ಆಮ್ಲಜನಕದ ಕೊರತೆ ಹಾಗೂ ವಿಷಕಾರಿ ಅನಿಲದಿಂದ ಉಸಿರಾಟದ ತೊಂದರೆ ಎದುರಾದ ಕಾರಣ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಯಿತು. ಕಾರ್ಯಾಚರಣೆ ವೇಳೆ ಕೆಲ ರಕ್ಷಣಾ ಸಿಬ್ಬಂದಿಯೂ ಅಸ್ವಸ್ಥರಾಗಿದ್ದಾರೆಂದು ತಿಳಿದುಬಂದಿದೆ.
ನಂತರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡವೂ ಒಳಪ್ರವೇಶಿಸಲು ಯತ್ನಿಸಿದರೂ, ಅಪಾಯಕಾರಿ ಪರಿಸ್ಥಿತಿಯಿಂದಾಗಿ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಗಲಿಲ್ಲ.
ವಿಶೇಷ ಅನಿಲ ಸುರಕ್ಷತಾ ತಂಡ ನಿಯೋಜನೆ
ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸಲು ಪಶ್ಚಿಮ ಬಂಗಾಳದಿಂದ ವಿಶೇಷ ಅನಿಲ ರಕ್ಷಣಾ ಸಾಧನಗಳನ್ನು ಹೊಂದಿರುವ ತಜ್ಞರ ತಂಡವನ್ನು ಕರೆಸಲಾಗಿದೆ.
ಇದಲ್ಲದೆ, ಪಾಕ್ಯಾಂಗ್ ಮತ್ತು ಸಿಲಿಗುರಿಯಲ್ಲಿರುವ ಎನ್‌ಡಿಆರ್‌ಎಫ್ 2ನೇ ಬೆಟಾಲಿಯನ್ ಸಿಬ್ಬಂದಿ, ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ಸಿಕ್ಕಿಂ ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಆರೋಗ್ಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ರಾತ್ರಿಯಿಡೀ ಮುಂದುವರಿದ ಕಾರ್ಯಾಚರಣೆ
ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (SSDMA) ಮೇಲ್ವಿಚಾರಣೆಯಲ್ಲಿ ಜಿಲ್ಲಾಡಳಿತ, ಎನ್‌ಎಚ್‌ಪಿಸಿ ಅಧಿಕಾರಿಗಳು ಹಾಗೂ ವಿವಿಧ ರಕ್ಷಣಾ ತಂಡಗಳು ರಾತ್ರಿಯಿಡೀ ಕಾರ್ಯಾಚರಣೆ ಮುಂದುವರಿಸಿವೆ.
ಸುರಂಗದೊಳಗೆ ಸಿಲುಕಿರುವವರನ್ನು ಸುರಕ್ಷಿತವಾಗಿ ಹೊರತೆಗೆದುಕೊಳ್ಳಲು ಎಲ್ಲ ಸಾಧ್ಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆದರೆ ಸುರಂಗದೊಳಗಿನ ಅಪಾಯಕಾರಿ ಅನಿಲದ ಮಟ್ಟ ಹಾಗೂ ಭೂಕುಸಿತದಿಂದ ಉಂಟಾದ ಅಡಚಣೆಗಳು ರಕ್ಷಣಾ ಕಾರ್ಯವನ್ನು ಅತ್ಯಂತ ಸಂಕೀರ್ಣವಾಗಿಸಿವೆ ಎನ್ನಲಾಗುತ್ತಿದೆ.
ಅಧಿಕಾರಿಗಳ ಪ್ರಕಾರ, ಕಾರ್ಮಿಕರಿರುವ ಸ್ಥಳವನ್ನು ತಲುಪಲು ಮೊದಲು ಸುರಂಗದಲ್ಲಿರುವ ವಿಷಕಾರಿ ಅನಿಲವನ್ನು ಹೊರಹಾಕುವುದು ಮತ್ತು ಸುರಕ್ಷಿತ ವಾತಾವರಣ ನಿರ್ಮಿಸುವುದು ಅತ್ಯಗತ್ಯವಾಗಿದ್ದು, ಅದಕ್ಕಾಗಿ ವಿಶೇಷ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.
ಸಿಎಂ ಜೊತೆ ಪ್ರಧಾನಿ ಮೋದಿ ಮಾತುಕತೆ
ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದು, ರಕ್ಷಣಾ ಕಾರ್ಯಾಚರಣೆಯ ಪ್ರಗತಿಯ ಕುರಿತು ವಿಚಾರಿಸಿ, ಸಂತ್ರಸ್ತ ಕಾರ್ಮಿಕರು ಹಾಗೂ ಅವರ ಕುಟುಂಬಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ ಎಂದು ಸಿಕ್ಕಿಂ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಮೃತರ ಕುಟುಂಬಗಳಿಗೆ ಸಾಂತ್ವನ
ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್, ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
"ಮೃತರ ಕುಟುಂಬಗಳ ದುಃಖದಲ್ಲಿ ಇಡೀ ಸಿಕ್ಕಿಂ ರಾಜ್ಯವೇ ಭಾಗಿಯಾಗಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಅವರೊಂದಿಗೆ ದೃಢವಾಗಿ ನಿಲ್ಲಲಿದೆ" ಎಂದು ಭರವಸೆ ನೀಡಿದ್ದಾರೆ.
ವದಂತಿಗಳಿಗೆ ಕಿವಿಗೊಡಬೇಡಿ: ಸಿಎಂ ಮನವಿ
ರಕ್ಷಣಾ ಕಾರ್ಯಾಚರಣೆಯನ್ನು ಇನ್ನಷ್ಟು ವೇಗಗೊಳಿಸುವಂತೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಮತ್ತು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.
ಸಂತ್ರಸ್ತ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ನೆರವು ಒದಗಿಸುವುದರ ಜೊತೆಗೆ, ಕಾರ್ಯಾಚರಣೆಯ ವೇಳೆ ಅತ್ಯುನ್ನತ ಸುರಕ್ಷತಾ ಮಾನದಂಡಗಳನ್ನು ಪಾಲಿಸುವಂತೆ ನಿರ್ದೇಶಿಸಿದ್ದಾರೆ.
ಅಲ್ಲದೆ, ಪರಿಶೀಲಿಸದ ಮಾಹಿತಿಯನ್ನು ಹರಡಬಾರದು, ಶಾಂತವಾಗಿರಬೇಕು ಮತ್ತು ಸುರಂಗದೊಳಗೆ ಸಿಲುಕಿರುವ ಕಾರ್ಮಿಕರು ಸುರಕ್ಷಿತವಾಗಿ ಹೊರಬರಲಿ ಎಂದು ಪ್ರಾರ್ಥಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸಿಕ್ಕಿಂ ಸರ್ಕಾರ, "ಸುರಂಗದೊಳಗೆ ಸಿಲುಕಿರುವ ಪ್ರತಿಯೊಬ್ಬ ಕಾರ್ಮಿಕನನ್ನು ಸುರಕ್ಷಿತವಾಗಿ ರಕ್ಷಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮುಂದುವರಿಸುತ್ತೇವೆ" ಎಂದು ಸ್ಪಷ್ಟಪಡಿಸಿದೆ.