ನವದೆಹಲಿ: ದಿನಕಳೆದಂತೆ ಕೇಂದ್ರ ಸರ್ಕಾರಕ್ಕೆ ನೀಟ್ ಪರೀಕ್ಷೆ ಗೊಂದಲ ಬಿಸಿ ಬಲವಾಗಿ ಮುಟ್ಟ ತೊಡಗಿದ್ದು, ಇದೀಗ ಮರು ಪರೀಕ್ಷೆಯಲ್ಲೂ ಉಂಟಾದ ಗೊಂದಲ ಕುರಿತು ವಿದ್ಯಾರ್ಥಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಹೌದು.. ಮಹಾರಾಷ್ಟ್ರದ ಬೀಡ್ ಜಿಲ್ಲೆಯ NEET-UG ಅಭ್ಯರ್ಥಿಯೊಬ್ಬರು, ಜೂನ್ 21ರಂದು ನಡೆದ ಮರುಪರೀಕ್ಷೆಯಲ್ಲಿ ತಮ್ಮ OMR ಉತ್ತರ ಪತ್ರಿಕೆ ಮತ್ತು ಅಧಿಕೃತ ಉತ್ತರ ಕೀ ಪ್ರಕಾರ 522 ಅಂಕಗಳು ಬರಬೇಕಿದ್ದರೂ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಕೇವಲ 95 ಅಂಕಗಳನ್ನು ನೀಡಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಅರ್ಜಿದಾರ ಸೋಹಂ ನಿತಿನ್ ಗವ್ಟೆ, ಫಲಿತಾಂಶದಲ್ಲಿನ ಈ ಭಾರೀ ವ್ಯತ್ಯಾಸದ ಕುರಿತು ಹಲವು ಬಾರಿ ಇ-ಮೇಲ್ ಮೂಲಕ ಸ್ಪಷ್ಟೀಕರಣ ಕೇಳಿದರೂ NTAಯಿಂದ ಯಾವುದೇ ಪ್ರತಿಕ್ರಿಯೆ ದೊರೆಯದ ಕಾರಣ ನ್ಯಾಯಾಲಯದ ಮೊರೆ ಹೋಗಬೇಕಾಯಿತು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಈ ಅರ್ಜಿ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠದ ಮುಂದೆ ಸಲ್ಲಿಕೆಯಾಗಿದ್ದು, ಜುಲೈ 23ರಂದು ವಿಚಾರಣೆಗೆ ನಿಗದಿಯಾಗಿದೆ.
ಇಷ್ಟಕ್ಕೂ ಅರ್ಜಿಯಲ್ಲೇನಿದೆ?
ಅರ್ಜಿಯಲ್ಲಿ ಸೋಹಂ, ತಾವು 10ನೇ ತರಗತಿಯಲ್ಲಿ 94.6 ಶೇಕಡಾ ಮತ್ತು 12ನೇ ತರಗತಿ (ವಿಜ್ಞಾನ ವಿಭಾಗ)ಯಲ್ಲಿ 74.17 ಶೇಕಡಾ ಅಂಕಗಳನ್ನು ಗಳಿಸಿದ್ದಾಗಿ ಉಲ್ಲೇಖಿಸಿದ್ದಾರೆ. ಜೂನ್ 21ರಂದು ನಡೆದ NEET-UG ಮರುಪರೀಕ್ಷೆಗೆ ತಾವು ಹಾಜರಾಗಿದ್ದರು ಎಂದಿದ್ದಾರೆ.
ಜುಲೈ 14ರಂದು ಪ್ರಕಟವಾದ OMR ಪ್ರತಿಕ್ರಿಯೆ ಪತ್ರಿಕೆ ಹಾಗೂ ಜುಲೈ 16ರಂದು ಬಿಡುಗಡೆಯಾದ ಅಧಿಕೃತ ಉತ್ತರ ಕೀಯನ್ನು ಹೋಲಿಕೆ ಮಾಡಿದಾಗ, ತಾವು 148 ಪ್ರಶ್ನೆಗಳಿಗೆ ಉತ್ತರಿಸಿದ್ದು, ಅವುಗಳಲ್ಲಿ 136 ಉತ್ತರಗಳು ಸರಿಯಾಗಿದ್ದು, 12 ಉತ್ತರಗಳು ತಪ್ಪಾಗಿವೆ ಎಂದು ಅವರು ಹೇಳಿದ್ದಾರೆ.
522 ಅಂಕಗಳ ಬದಲಿಗೆ ಬಂದಿದ್ದು ಕೇವಲ 95
NEET ಮೌಲ್ಯಮಾಪನ ನಿಯಮದ ಪ್ರಕಾರ, ತಮಗೆ ಒಟ್ಟು 720 ಅಂಕಗಳಲ್ಲಿ 522 ಅಂಕಗಳು ಬರಬೇಕಿತ್ತು. ಆದರೆ NTA ಪ್ರಕಟಿಸಿದ ಅಂಕಪಟ್ಟಿಯಲ್ಲಿ ಕೇವಲ 95 ಅಂಕಗಳು ಮಾತ್ರ ದಾಖಲಾಗಿವೆ ಎಂದು ಅವರು ಆರೋಪಿಸಿದ್ದಾರೆ.
ಈ ವ್ಯತ್ಯಾಸದ ಕುರಿತು ಜುಲೈ 17 ಮತ್ತು 18ರಂದು NTAಗೆ ಇ-ಮೇಲ್ ಮೂಲಕ ಮರುಮೌಲ್ಯಮಾಪನ ಹಾಗೂ ಫಲಿತಾಂಶ ತಿದ್ದುಪಡಿ ಮಾಡುವಂತೆ ಮನವಿ ಸಲ್ಲಿಸಿದ್ದರೂ ಯಾವುದೇ ಉತ್ತರ ಬಂದಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇದರಿಂದಾಗಿ, ವಕೀಲರಾದ ಸುದರ್ಶನ್ ಸಾಲುಂಕೆ ಮತ್ತು ಮಹೇಂದ್ರ ಗಂಧಲೆ ಅವರ ಮೂಲಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿರುವ ಸೋಹಂ, ತಮ್ಮ ಉತ್ತರ ಪತ್ರಿಕೆಯ ಪರಿಶೀಲನೆ ನಡೆಸಿ, ಸರಿಪಡಿಸಿದ ಅಂಕಪಟ್ಟಿ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
"ಈ ಪ್ರಕರಣ ಜುಲೈ 23ರಂದು ವಿಚಾರಣೆಗೆ ಬರಲಿದ್ದು, ನಮ್ಮ ವಾದಗಳನ್ನು ನ್ಯಾಯಾಲಯದ ಮುಂದೆ ಮಂಡಿಸಲಿದ್ದೇವೆ," ಎಂದು ವಕೀಲ ಮಹೇಂದ್ರ ಗಂಧಲೆ ತಿಳಿಸಿದ್ದಾರೆ.
ಗಮನಾರ್ಹವಾಗಿ, ಮೇ 3ರಂದು ನಡೆದ NEET-UG ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿತ್ತು. ಬಳಿಕ NTA ಜೂನ್ 21ರಂದು ಮರುಪರೀಕ್ಷೆ ನಡೆಸಿದ್ದು, ಅದರ ಫಲಿತಾಂಶವನ್ನು ಜುಲೈ 16ರಂದು ಪ್ರಕಟಿಸಿತ್ತು.