ಹೈದರಾಬಾದ್/ಲಂಡನ್: ಹೈದರಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್ (BA276) ವಿಮಾನದ ಮೂವರು ಪೈಲಟ್‌ಗಳು ಹಾರಾಟದ ಮಧ್ಯೆಯೇ ತೀವ್ರ ರೀತಿಯಲ್ಲಿ ಅಸ್ವಸ್ಥಗೊಂಡ ಆತಂಕಕಾರಿ ಘಟನೆ ನಡೆದಿದೆ.
ಉಪಾಹಾರ ಸೇವಿಸಿದ ಬಳಿಕ ಫುಡ್ ಪಾಯಿಸನಿಂಗ್ ಆಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಈ ಘಟನೆ ವಿಮಾನಯಾನ ವಲಯದಲ್ಲಿ ಆತಂಕ ಮೂಡಿಸಿದೆ. ಆದಾಗ್ಯೂ, ಪ್ರಯಾಣಿಕರ ಸುರಕ್ಷತೆಗೆ ಯಾವುದೇ ಧಕ್ಕೆಯಾಗಿಲ್ಲ ಎಂದು ಬ್ರಿಟಿಷ್ ಏರ್‌ವೇಸ್ ಸ್ಪಷ್ಟಪಡಿಸಿದೆ.
ಬುಧವಾರ ಬೆಳಿಗ್ಗೆ 7.45ಕ್ಕೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬ್ರಿಟಿಷ್ ಏರ್‌ವೇಸ್‌ನ BA-276 ವಿಮಾನ ಲಂಡನ್‌ಗೆ ಹೊರಟಿತ್ತು. ಸುಮಾರು 10 ಗಂಟೆ 35 ನಿಮಿಷಗಳ ಈ ಪ್ರಯಾಣದ ವೇಳೆ ಈ ಘಟನೆ ಸಂಭವಿಸಿದೆ.
ಮಾಹಿತಿಯ ಪ್ರಕಾರ, ವಿಮಾನ ಹಾರಾಟಕ್ಕೂ ಮುನ್ನದ ರಾತ್ರಿ ಮೂವರು ಪೈಲಟ್‌ಗಳು ಏರ್‌ಲೈನ್ ವ್ಯವಸ್ಥೆ ಮಾಡಿದ್ದ ಹೋಟೆಲ್‌ನಲ್ಲಿ ತಂಗಿದ್ದರು. ಪ್ರಯಾಣ ಆರಂಭಿಸುವ ಮೊದಲು ಹೋಟೆಲ್ ಲೌಂಜ್‌ನಲ್ಲಿ ಉಪಾಹಾರ ಸೇವಿಸಿದ್ದರು. ಉಪಾಹಾರದ ಜೊತೆಗೆ ಹೊರಗಿನ ಕಂಪನಿಯ ಬಾಟಲಿ ನೀರನ್ನೂ ಸೇವಿಸಿದ್ದರೆಂದು ವರದಿಯಾಗಿದೆ.
ಮರು ದಿನ ಸುಮಾರು 30,000 ಅಡಿ ಎತ್ತರದಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದಾಗ ಮೂವರು ಪೈಲಟ್‌ಗಳೂ ಅಸ್ವಸ್ಥರಾಗಿದ್ದಾರೆ. ಅವರಲ್ಲಿ ಒಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವಿಮಾನದಲ್ಲೇ ಅವರಿಗೆ ಆಕ್ಸಿಜನ್ ನೀಡಬೇಕಾಯಿದು ಎಂದು ತಿಳಿದುಬಂದಿದೆ.
ಈ ನಡುವೆ ವಿಮಾನ ಲಂಡನ್‌ನ ಹೀಥ್ರೋ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದ ಕೂಡಲೇ ಅಸ್ವಸ್ಥ ಪೈಲಟ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಅವರಿಗೆ ಸುಮಾರು 12 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಇನ್ನಿಬ್ಬರು ಪೈಲಟ್‌ಗಳಿಗೂ ಫುಡ್ ಪಾಯಿಸನಿಂಗ್ ಲಕ್ಷಣಗಳು ಕಂಡುಬಂದಿದ್ದರೂ, ಅವರ ಆರೋಗ್ಯ ಗಂಭೀರವಾಗಿರಲಿಲ್ಲ. ಅವರು ವಿಮಾನವನ್ನು ಸುರಕ್ಷಿತವಾಗಿ ಲಂಡನ್‌ಗೆ ತಲುಪಿಸುವಲ್ಲಿ ಯಶಸ್ವಿಯಾದರು.
ವಿಮಾನ ಲಂಡನ್ ಹೀಥ್ರೋ ವಿಮಾನ ನಿಲ್ದಾಣದ ಟರ್ಮಿನಲ್-3ಕ್ಕೆ ಮಧ್ಯಾಹ್ನ 2.05ಕ್ಕೆ (ಸ್ಥಳೀಯ ಸಮಯ) ಸುರಕ್ಷಿತವಾಗಿ ಇಳಿಯಿತು. ಬಳಿಕ ಈ ಇಬ್ಬರು ಪೈಲಟ್‌ಗಳನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಬ್ರಿಟಿಷ್ ಏರ್‌ವೇಸ್ ವಕ್ತಾರರು, "ನಮ್ಮ ಸಿಬ್ಬಂದಿಯ ಆರೋಗ್ಯ ಮತ್ತು ಸುರಕ್ಷತೆ ನಮಗೆ ಅತ್ಯಂತ ಮುಖ್ಯ. ಕೆಲವು ಸಿಬ್ಬಂದಿ ಅಸ್ವಸ್ಥಗೊಂಡಿರುವ ಪ್ರತ್ಯೇಕ ಘಟನೆಗಳ ಹಿನ್ನೆಲೆಯಲ್ಲಿ ಹೈದರಾಬಾದ್‌ನಲ್ಲಿರುವ ಸಿಬ್ಬಂದಿ ವಸತಿ ವ್ಯವಸ್ಥೆಯನ್ನು ಪರಿಶೀಲಿಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ವಿಮಾನಯಾನ ಸಂಸ್ಥೆಯ ಮತ್ತೊಬ್ಬ ಅಧಿಕಾರಿ ಮಾತನಾಡಿ, "ಈ ಘಟನೆ ನಡೆದರೂ ಪ್ರಯಾಣಿಕರ ಸುರಕ್ಷತೆಗೆ ಯಾವುದೇ ಹಂತದಲ್ಲೂ ಧಕ್ಕೆಯಾಗಿಲ್ಲ. ವಿಮಾನ ಸುರಕ್ಷಿತವಾಗಿ ತನ್ನ ಗಮ್ಯಸ್ಥಾನ ತಲುಪಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಪೈಲಟ್ ಗಳಿಗೆ ಫುಡ್ ಪಾಯಿಸನಿಂಗ್ ಹೇಗಾಯಿತು..? ಅದರ ಮೂಲ ಏನು ಎಂಬುದರ ಕುರಿತು ಬ್ರಿಟಿಷ್ ಏರ್‌ವೇಸ್ ಆಂತರಿಕ ತನಿಖೆ ಆರಂಭಿಸಿದ್ದು, ವಿಮಾನ ಸಿಬ್ಬಂದಿ ಸೇವಿಸಿದ್ದ ಆಹಾರ ಮತ್ತು ಕುಡಿಯುವ ನೀರಿನ ಮಾದರಿಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.