ಉಪವಾಸ ಅಂತ್ಯಗೊಳಿಸಿದ ಸೋನಂ ವಾಂಗ್ಚುಕ್ 
ದೇಶ

ಕೇಂದ್ರದ ಭರವಸೆಗೆ ಮಣಿದ Sonam Wangchuk: 26 ದಿನಗಳ ಉಪವಾಸ ಅಂತ್ಯ, Dharmendra Pradhan ರಾಜೀನಾಮೆ ನೀಡದ ಹೊರತು ಪ್ರತಿಭಟನೆ ನಿಲ್ಲಲ್ಲ ಎಂದ CJP..!

ಗುರುವಾರ ಮಧ್ಯರಾತ್ರಿ ಗುರ್ಗಾಂವ್‌ನ ಮೆಡಾಂಟಾ ಆಸ್ಪತ್ರೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಸೋನಂ ವಾಂಗ್ಚುಕ್ ಅವರನ್ನು ಭೇಟಿ ಮಾಡಿದರು.

ನವದೆಹಲಿ: ಶಿಕ್ಷಣ ವ್ಯವಸ್ಥೆಯ ಸುಧಾರಣೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳಿಗೆ ಹೊಣೆಗಾರಿಕೆ ನಿಗದಿಪಡಿಸುವುದು, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ 26 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರು ತಮ್ಮ ಉಪವಾಸವನ್ನು ಶುಕ್ರವಾರ ಅಂತ್ಯಗೊಳಿಸಿದ್ದಾರೆ.

ಕೇಂದ್ರ ಸರ್ಕಾರ ತಮ್ಮ ಪ್ರಮುಖ ಬೇಡಿಕೆಗಳ ಕುರಿತು ಸಕಾರಾತ್ಮಕ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಆದರೆ, ವಾಂಗ್ಚುಕ್ ಬೆಂಬಲಿಸಿ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮಾತ್ರ ಮುಂದುವರಿಯಲಿದ್ದು, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಘೋಷಿಸಿದೆ.

ಗುರುವಾರ ಮಧ್ಯರಾತ್ರಿ ಗುರ್ಗಾಂವ್‌ನ ಮೆಡಾಂಟಾ ಆಸ್ಪತ್ರೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಸೋನಂ ವಾಂಗ್ಚುಕ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಸರ್ಕಾರದ ಪರವಾಗಿ ಹಲವು ಭರವಸೆಗಳನ್ನು ನೀಡಿದರು.

ಬಳಿಕ ಲಡಾಖ್‌ನ ಅಪೆಕ್ಸ್ ಬಾಡಿ ಹಿರಿಯ ನಾಯಕರು, ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಅಂಗ್ಮೋ ಹಾಗೂ ವೈದ್ಯರ ಸಮ್ಮುಖದಲ್ಲಿ ಅವರು 26 ದಿನಗಳ ಉಪವಾಸವನ್ನು ಮುರಿದರು.

ಉಪವಾಸ ಅಂತ್ಯಗೊಳಿಸಿದ ಬಳಿಕ ಎಕ್ಸ್ (X)ನಲ್ಲಿ ಪ್ರತಿಕ್ರಿಯಿಸಿದ ವಾಂಗ್ಚುಕ್, "ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಡಾ. ಜಿತೇಂದ್ರ ಸಿಂಗ್ ಹಾಗೂ ಲಡಾಖ್ ಅಪೆಕ್ಸ್ ಬಾಡಿಯ ಹಿರಿಯ ನಾಯಕರ ಸಮ್ಮುಖದಲ್ಲಿ ನಾನು 26 ದಿನಗಳ ಉಪವಾಸವನ್ನು ಅಂತ್ಯಗೊಳಿಸಿದ್ದೇನೆ. ಹಲವು ಷರತ್ತುಗಳ ಕುರಿತು ದೀರ್ಘ ಮಾತುಕತೆ ನಡೆದಿದ್ದು, ದೇಶದಲ್ಲಿ ಯಾವುದೇ ರೀತಿಯ ಹಿಂಸಾಚಾರ ನಡೆಯದಂತೆ ತಡೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದೇನೆ. ಈ ಕುರಿತು ಎಲ್ಲ ವಿವರಗಳನ್ನು ಶೀಘ್ರದಲ್ಲೇ ಪ್ರತ್ಯೇಕ ವಿಡಿಯೊದಲ್ಲಿ ಹಂಚಿಕೊಳ್ಳುತ್ತೇನೆ. ಅಷ್ಟರವರೆಗೆ ಯಾವುದೇ ರೀತಿಯ ಹಿಂಸಾಚಾರಕ್ಕೆ ಅವಕಾಶ ನೀಡಬೇಡಿ" ಎಂದು ಮನವಿ ಮಾಡಿದ್ದಾರೆ.

ವಾಂಗ್ಚುಕ್ ಅವರು ತಮ್ಮ ಉಪವಾಸದ ಅವಧಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ 65ಕ್ಕೂ ಹೆಚ್ಚು ಸಂಸದರು ಅವರನ್ನು ಭೇಟಿ ಮಾಡಿ ಅಥವಾ ಪತ್ರದ ಮೂಲಕ ಉಪವಾಸ ಕೈಬಿಡುವಂತೆ ಮನವಿ ಮಾಡಿದ್ದರು ಎಂದು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಕೂಡ ವಾಂಗ್ಚುಕ್ ಅವರ ಉಪವಾಸ ಅಂತ್ಯಗೊಳಿಸಿರುವುದನ್ನು ಸ್ವಾಗತಿಸಿದ್ದಾರೆ. ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, "ಸೋನಂಜಿ ವೈದ್ಯರ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ತಮ್ಮ ದೈನಂದಿನ ಚಟುವಟಿಕೆಗಳನ್ನು ಪುನರಾರಂಭಿಸಲಿ. ಅವರು ಶೀಘ್ರವೇ ಆರೋಗ್ಯವನ್ನು ಮರಳಿ ಪಡೆದು ಕಳೆದುಕೊಂಡ ತೂಕವನ್ನು ಕೂಡ ಬೇಗನೆ ಹೊಂದಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಹೇಳಿದ್ದಾರೆ.

ಮೆಡಾಂಟಾ ಆಸ್ಪತ್ರೆಯಲ್ಲಿ ವಾಂಗ್ಚುಕ್ ಸಮ್ಮುಖದಲ್ಲೇ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ, ಸರ್ಕಾರದ ಪರವಾಗಿ ನೀಡಲಾದ ಭರವಸೆಗಳನ್ನು ವಿವರಿಸಿದರು.

ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದವರು ಹಾಗೂ ಜುಲೈ 20ರಂದು ನಡೆದ 'ಸಂಸತ್ ಚಲೋ' ಮೆರವಣಿಗೆಯಲ್ಲಿ ಭಾಗವಹಿಸಿದವರ ವಿರುದ್ಧ ಪ್ರಕರಣ ದಾಖಲಿಸದಿರುವ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಚಿಂತನೆ ನಡೆಸುತ್ತಿದೆ ಎಂದು ಹೇಳಿದರು.

ಇದೇ ವೇಳೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಸುಧಾರಣೆ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸುವ ಭರವಸೆಯನ್ನು ಸರ್ಕಾರ ಈಗಾಗಲೇ ನೀಡಿದೆ ಎಂದರು.

ಇತ್ತೀಚಿನ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವ ವಿಷಯವನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ನಡ್ಡಾ ತಿಳಿಸಿದರು.

ಇನ್ನೊಂದೆಡೆ, ವಾಂಗ್ಚುಕ್ ಅವರೊಂದಿಗೆ ಹೋರಾಟ ನಡೆಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಉಪವಾಸ ಅಂತ್ಯಗೊಂಡಿದ್ದರೂ ತಮ್ಮ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, "ಸೋನಂ ಸರ್ 26 ದಿನಗಳ ಉಪವಾಸವನ್ನು ಅಂತ್ಯಗೊಳಿಸಿರುವುದು ನಮಗೆ ನೆಮ್ಮದಿ ತಂದಿದೆ. ದೇಶದ ಹಿತಕ್ಕಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟ ಅವರ ತ್ಯಾಗಕ್ಕೆ ನಾವು ಸದಾ ಋಣಿಯಾಗಿದ್ದೇವೆ. ಆದರೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೆ ಜಂತರ್ ಮಂತರ್‌ನಲ್ಲಿ ನಮ್ಮ ಶಾಂತಿಯುತ ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಸಿಜೆಪಿ ಪ್ರಮುಖವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳ ಕುರಿತು ಪಾರದರ್ಶಕ ತನಿಖೆ, ಶಿಕ್ಷಣ ವ್ಯವಸ್ಥೆಯಲ್ಲಿ ವ್ಯಾಪಕ ಸುಧಾರಣೆ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಳಿಕ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಿದವರ ವಿರುದ್ಧ ದಾಖಲಿಸಿರುವ ಎಲ್ಲ ಎಫ್‌ಐಆರ್‌ಗಳನ್ನು ಹಿಂಪಡೆಯುವಂತೆ ಆಗ್ರಹಿಸಿದೆ.

ಜೂನ್ 28ರಂದು ಜಂತರ್ ಮಂತರ್‌ನಲ್ಲಿ ಆರಂಭವಾದ ಸಿಜೆಪಿ ನೇತೃತ್ವದ ಪ್ರತಿಭಟನೆಗೆ ಸೋನಂ ವಾಂಗ್ಚುಕ್ ಸೇರ್ಪಡೆಯಾಗಿ ವಿದ್ಯಾರ್ಥಿಗಳ ಬೇಡಿಕೆಗಳಿಗೆ ಬೆಂಬಲ ಸೂಚಿಸಿದ್ದರು. ಬಳಿಕ ಅವರು ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ್ದು, 26 ದಿನಗಳ ಅವಧಿಯಲ್ಲಿ ಸುಮಾರು 11 ಕೆ.ಜಿ. ತೂಕ ಕಳೆದುಕೊಂಡಿದ್ದರು. ಜುಲೈ 20ರಂದು ನಡೆದ 'ಸಂಸತ್ ಚಲೋ' ಪ್ರತಿಭಟನೆಯ ವೇಳೆ ಪೊಲೀಸ್ ಕ್ರಮದ ನಡುವೆಯೂ ಹೋರಾಟ ಶಾಂತಿಯುತವಾಗಿರಬೇಕು ಎಂದು ಅವರು ನಿರಂತರವಾಗಿ ಕರೆ ನೀಡುತ್ತಿದ್ದರು.

ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಜುಲೈ 18ರಂದು ದೆಹಲಿ ಪೊಲೀಸರು ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ತಮ್ಮ ಇಚ್ಛೆಗೆ ವಿರುದ್ಧವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಆರೋಪಿಸಿ ಅವರ ಪತ್ನಿ ಗೀತಾಂಜಲಿ ಅಂಗ್ಮೋ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು.

ಬಳಿಕ ಹೈಕೋರ್ಟ್ ಮಧ್ಯಸ್ಥಿಕೆಯಿಂದ ಅವರನ್ನು ಗುರ್ಗಾಂವ್‌ನ ಮೆಡಾಂಟಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿಯೇ ಚಿಕಿತ್ಸೆ ಪಡೆಯುತ್ತಾ ಉಪವಾಸ ಮುಂದುವರಿಸಿದ್ದ ವಾಂಗ್ಚುಕ್, ಕೇಂದ್ರ ಸರ್ಕಾರದ ಭರವಸೆಯ ಬಳಿಕ ಅಂತಿಮವಾಗಿ ತಮ್ಮ 26 ದಿನಗಳ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

NEET Paper Leak: ವಿದ್ಯಾರ್ಥಿಗಳ ಪ್ರತಿಭಟನೆ ನಡುವೆಯೇ ಕೇಂದ್ರ ಸರ್ಕಾರದಿಂದ ಮೊದಲ ಕ್ರಮ, ಶಿಕ್ಷಣ ಇಲಾಖೆ ಕಾರ್ಯದರ್ಶಿ ಎತ್ತಂಗಡಿ

INDIA bloc march to Gandhi Smriti: 'ನಮ್ಮನ್ನು ತಡೆಯಲು ಸಾಧ್ಯವೇ ಇಲ್ಲ.. ಧರ್ಮೇಂದ್ರ ಪ್ರಧಾನ್ ರಾಜಿನಾಮೆ ನೀಡಲೇಬೇಕು': ರಾಹುಲ್ ಗಾಂಧಿ

CJP Protest: 'ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುವ ಸಂಸ್ಕೃತಿ ಸೃಷ್ಟಿಸಬೇಕು': ಕೊನೆಗೂ ಮೌನ ಮುರಿದ Sachin Tendulkar

ಇಂಟರ್ನೆಟ್ ಸೇವೆ ಸ್ಥಗಿತ; ಇಂದು ರಾತ್ರಿ ಪ್ರತಿಭಟನೆ ದಮನ ಮಾಡುವ ಯಾವುದೇ ಯೋಜನೆ ಇಲ್ಲ: ದೆಹಲಿ ಪೊಲೀಸರು

'ಧರ್ಮೇಂದ್ರ ಪ್ರಧಾನ್ ರನ್ನು ವಜಾ ಮಾಡಿ; ಇಲ್ಲದಿದ್ದರೆ ನಿಮ್ಮ ರಾಜೀನಾಮೆಯನ್ನೂ ಕೇಳುತ್ತೇವೆ': ಪ್ರಧಾನಿ ಮೋದಿಗೆ CJP ಮುಖ್ಯಸ್ಥ Abhijeet Dipke ಒತ್ತಾಯ