ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ, ರಾಯಭಾರಿ ಪರ್ವತನೇನಿ ಹರೀಶ್. 
ದೇಶ

ಹಾರ್ಮುಜ್ ಜಲಸಂಧಿ ಮೇಲೆ ದಾಳಿ: ಭಾರತ ತೀವ್ರ ಖಂಡನೆ, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಶಮನಕ್ಕೆ ಕರೆ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪಶ್ಚಿಮ ಏಷ್ಯಾ ಪರಿಸ್ಥಿತಿ ಕುರಿತ ಮುಕ್ತ ಚರ್ಚೆಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ರಾಯಭಾರಿ ಪರ್ವತನೇನಿ ಹರೀಶ್, ಅಲ್ಪ ವಿರಾಮದ ಬಳಿಕ ಮತ್ತೆ ಸಂಘರ್ಷಗಳು ಆರಂಭವಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಕರೆ ನೀಡಿದರು.

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚುತ್ತಿರುವ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಹಾರ್ಮುಜ್ ಜಲಸಂಧಿ ಮೂಲಕ ಸಂಚರಿಸುತ್ತಿದ್ದ ವಾಣಿಜ್ಯ ಹಡಗುಗಳ ಮೇಲಿನ ಇತ್ತೀಚಿನ ದಾಳಿಗಳನ್ನು ತೀವ್ರವಾಗಿ ಖಂಡಿಸಿದೆ. ಉದ್ವಿಗ್ನತೆಯನ್ನು ತಕ್ಷಣ ಕಡಿಮೆ ಮಾಡಬೇಕು ಹಾಗೂ ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಮುಕ್ತ ಮತ್ತು ಅಡೆತಡೆಯಿಲ್ಲದ ನೌಕಾಯಾನವನ್ನು ಪುನಃ ಸ್ಥಾಪಿಸಬೇಕು ಎಂದು ಭಾರತ ಒತ್ತಾಯಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪಶ್ಚಿಮ ಏಷ್ಯಾ ಪರಿಸ್ಥಿತಿ ಕುರಿತ ಮುಕ್ತ ಚರ್ಚೆಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ರಾಯಭಾರಿ ಪರ್ವತನೇನಿ ಹರೀಶ್, ಅಲ್ಪ ವಿರಾಮದ ಬಳಿಕ ಮತ್ತೆ ಸಂಘರ್ಷಗಳು ಆರಂಭವಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿ, ಸಂವಾದ ಮತ್ತು ರಾಜತಾಂತ್ರಿಕ ಮಾತುಕತೆಗಳ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಕರೆ ನೀಡಿದರು.

ಪಶ್ಚಿಮ ಏಷ್ಯಾವನ್ನು ಭಾರತಕ್ಕೆ "ಅತ್ಯಂತ ಮಹತ್ವದ ಪ್ರದೇಶ" ಎಂದು ಬಣ್ಣಿಸಿದ ಹರೀಶ್, "ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಅಲ್ಪ ವಿರಾಮ ದೊರೆತಿದ್ದರೂ, ಈಗ ಮತ್ತೆ ದಾಳಿಗಳು ಹಾಗೂ ಯುದ್ಧೋನ್ಮಾದ ಹೆಚ್ಚುತ್ತಿರುವುದು ತೀವ್ರ ಕಳವಳಕಾರಿ ಸಂಗತಿ. ಉದ್ವಿಗ್ನತೆಯನ್ನು ತಕ್ಷಣ ತಗ್ಗಿಸುವಂತೆ ಭಾರತ ಆಗ್ರಹಿಸುತ್ತದೆ" ಎಂದು ಹೇಳಿದರು.

ಈ ತಿಂಗಳ ಆರಂಭದಲ್ಲಿ ಹಾರ್ಮುಜ್ ಜಲಸಂಧಿ ಮೂಲಕ ಸಾಗುತ್ತಿದ್ದ GFS Galaxy, MT Al Bahiyah ಹಾಗೂ MT Mombasa ಸೇರಿದಂತೆ ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಗಳನ್ನು ಭಾರತ ತೀವ್ರವಾಗಿ ಖಂಡಿಸಿದೆ.

ಈ ದಾಳಿಗಳು ಭಾರತೀಯ ನಾಗರಿಕರ ಮೇಲೂ ನೇರ ಪರಿಣಾಮ ಬೀರಿವೆ ಎಂದು ಹರೀಶ್ ಹೇಳಿದರು.

ಈ ದಾಳಿಗಳಲ್ಲಿ ಹಲವಾರು ಭಾರತೀಯರು ಗಾಯಗೊಂಡಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಒಬ್ಬ ಭಾರತೀಯ ದುಃಖಕರವಾಗಿ ಮೃತಪಟ್ಟಿದ್ದು, ಮತ್ತೊಬ್ಬರು ನಾಪತ್ತೆಯಾಗಿದ್ದಾರೆ. ಹಾರ್ಮುಜ್ ಜಲಸಂಧಿಯಂತಹ ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ನಾವಿಕರನ್ನು ಗುರಿಯಾಗಿಸಿಕೊಂಡು ನಡೆಸುವ ದಾಳಿಗಳು ಹಾಗೂ ಸುರಕ್ಷಿತ ಮತ್ತು ಮುಕ್ತ ನೌಕಾಯಾನಕ್ಕೆ ಅಡ್ಡಿಯಾಗುವ ಯಾವುದೇ ಹಿಂಸಾಚಾರವನ್ನು ಭಾರತ ಸದಾ ಖಂಡಿಸಿದೆ ಎಂದು ಹೇಳಿದರು.

ಭಾರತದ ನಿಲುವನ್ನು ಪುನರುಚ್ಚರಿಸಿದ ಪರ್ವತನೇನಿ ಹರೀಶ್, ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸಲು ರಾಜತಾಂತ್ರಿಕ ಮಾತುಕತೆಗಳೇ ಏಕೈಕ ಮಾರ್ಗ ಎಂದು ಭಾರತ ದೃಢವಾಗಿ ನಂಬಿದೆ ಎಂದು ಹೇಳಿದರು.

ಪ್ರದೇಶದಲ್ಲಿ ವಾಣಿಜ್ಯ ಹಡಗುಗಳು ಹಾಗೂ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಗಳು ತಕ್ಷಣ ನಿಲ್ಲಬೇಕು. ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ, ಈ ಪ್ರದೇಶದ ಜಲಮಾರ್ಗಗಳಲ್ಲಿ ಮುಕ್ತ ಮತ್ತು ಅಡೆತಡೆಯಿಲ್ಲದ ನೌಕಾಯಾನ ಹಾಗೂ ವ್ಯಾಪಾರವನ್ನು ಶೀಘ್ರದಲ್ಲೇ ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಈ ಹೇಳಿಕೆಗಳು ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮುಂದುವರಿದಿರುವ ಸಂದರ್ಭದಲ್ಲೇ ಬಂದಿವೆ. ವಿಶ್ವಸಂಸ್ಥೆಯ ಪ್ರಕಾರ, ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳ ನಂತರ ಇರಾನ್ ಜುಲೈ 11ರಂದು ಮತ್ತೊಮ್ಮೆ ಹೋರ್ಮುಜ್ ಜಲಸಂಧಿಯನ್ನು ಮುಚ್ಚಿರುವುದಾಗಿ ಘೋಷಿಸಿತ್ತು.

ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗದ ಪ್ರಕಾರ, ಸಂಘರ್ಷಕ್ಕೂ ಮುನ್ನ ಪ್ರತಿದಿನ 100ಕ್ಕೂ ಹೆಚ್ಚು ಹಡಗುಗಳು ಸಂಚರಿಸುತ್ತಿದ್ದರೆ, ಜುಲೈ 7ರ ವೇಳೆಗೆ ಅದು 49ಕ್ಕೆ ಏರಿಕೆಯಾಗಿತ್ತು. ಆದರೆ ಜುಲೈ ಮಧ್ಯಭಾಗಕ್ಕೆ ಅದು ತೀವ್ರವಾಗಿ ಕುಸಿದು ದಿನಕ್ಕೆ ಕೇವಲ 8ರಿಂದ 15 ಹಡಗುಗಳಷ್ಟಕ್ಕೆ ಇಳಿದಿದೆ.

ಪ್ರದೇಶದಲ್ಲಿ ಭಾರತದ ಕಾರ್ಯತಂತ್ರದ ಹಿತಾಸಕ್ತಿಗಳನ್ನು ಉಲ್ಲೇಖಿಸಿದ ಹರೀಶ್, ಭಾರತದ ವ್ಯಾಪಾರ, ಇಂಧನ ಭದ್ರತೆ ಹಾಗೂ ವಿದೇಶದಲ್ಲಿರುವ ಭಾರತೀಯ ಸಮುದಾಯವು ಪಶ್ಚಿಮ ಏಷ್ಯಾದೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದು ಹೇಳಿದರು.

ಭಾರತವು ಈ ಪ್ರದೇಶದೊಂದಿಗೆ ವಾರ್ಷಿಕ ಸುಮಾರು 180 ಬಿಲಿಯನ್ ಡಾಲರ್ ದ್ವಿಪಕ್ಷೀಯ ವ್ಯಾಪಾರ ನಡೆಸುತ್ತಿದೆ. 31 ಬಿಲಿಯನ್ ಡಾಲರ್‌ಗಿಂತ ಹೆಚ್ಚು ವಿದೇಶಿ ನೇರ ಹೂಡಿಕೆ (FDI) ಹೊಂದಿದ್ದು, ಗಲ್ಫ್ ಸಹಕಾರ ಮಂಡಳಿ (GCC) ರಾಷ್ಟ್ರಗಳಿಂದ ಪ್ರತಿವರ್ಷ 52 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಹಣಕಾಸು ರವಾನೆ (Remittances) ಪಡೆಯುತ್ತಿದೆ. ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು ಒಂದು ಕೋಟಿ ಭಾರತೀಯರು ವಾಸಿಸಿ ಕೆಲಸ ಮಾಡುತ್ತಿದ್ದಾರೆ.

ಅವರ ಸುರಕ್ಷತೆ ಮತ್ತು ಯೋಗಕ್ಷೇಮ ನಮಗೆ ಅತ್ಯುನ್ನತ ಆದ್ಯತೆಯಾಗಿದೆ ಎಂದು ಹೇಳಿದರು.

ಹಾರ್ಮುಜ್ ಜಲಸಂಧಿಯ ಬೆಳವಣಿಗೆಗಳತ್ತ ಗಮನ ಹರಿಸುವಾಗ ಗಾಜಾದ ಮಾನವೀಯ ಬಿಕ್ಕಟ್ಟನ್ನು ಜಾಗತಿಕ ಸಮುದಾಯ ಮರೆಯಬಾರದು ಎಂದು ಭಾರತ ಮನವಿ ಮಾಡಿದೆ.

ನಾಗರಿಕರ ಜೀವಹಾನಿ ಹಾಗೂ ನಾಗರಿಕ ಮೂಲಸೌಕರ್ಯಗಳ ನಾಶವು ಅತ್ಯಂತ ಗಂಭೀರ ವಿಚಾರಗಳಾಗಿದ್ದು, ಜಾಗತಿಕ ಸಮುದಾಯ ತುರ್ತು ಆದ್ಯತೆಯೊಂದಿಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಪ್ಯಾಲೆಸ್ತೀನಿಗೆ ಭಾರತ ಇದುವರೆಗೆ ಸುಮಾರು 175 ಮಿಲಿಯನ್ ಡಾಲರ್ ಅಭಿವೃದ್ಧಿ ನೆರವು ನೀಡಿದೆ ಎಂದೂ ಅವರು ತಿಳಿಸಿದರು.

ಇದೇ ವೇಳೆ, ಎರಡು ರಾಷ್ಟ್ರಗಳ ಪರಿಹಾರ (Two-State Solution)ಕ್ಕೆ ಭಾರತ ತನ್ನ ದೀರ್ಘಕಾಲದ ಬೆಂಬಲವನ್ನು ಪುನರುಚ್ಚರಿಸಿತು.

ಸುರಕ್ಷಿತ ಮತ್ತು ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಗಡಿಗಳೊಳಗೆ, ಇಸ್ರೇಲ್‌ನೊಂದಿಗೆ ಶಾಂತಿಯುತವಾಗಿ ಸಹಬಾಳ್ವೆ ನಡೆಸುವ ಸ್ವತಂತ್ರ, ಸಾರ್ವಭೌಮ ಮತ್ತು ಕಾರ್ಯಸಾಧ್ಯ ಪ್ಯಾಲೆಸ್ತೀನ್ ರಾಷ್ಟ್ರದ ಸ್ಥಾಪನೆಯೇ ಶಾಶ್ವತ ಮತ್ತು ಸಮಗ್ರ ಪರಿಹಾರಕ್ಕೆ ಅಗತ್ಯಎಂದು ಹೇಳಿದರು.

ಯೆಮನ್ ಕುರಿತು ಮಾತನಾಡಿದ ಅವರು, ದೇಶದ ಏಕತೆ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಭಾರತ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು. ಜೊತೆಗೆ, ಹೌತಿ ಬಂಡುಕೋರರು ಸಮುದ್ರ ಮಾರ್ಗಗಳ ಮೇಲೆ ನಡೆಸುತ್ತಿರುವ ದಾಳಿಗಳನ್ನು ತೀವ್ರವಾಗಿ ಖಂಡಿಸಿದರು.

ಹೌತಿಗಳಿಂದ ಸಮುದ್ರ ಮಾರ್ಗಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ನಾವು ಮತ್ತೊಮ್ಮೆ ಖಂಡಿಸುತ್ತೇವೆ. ಬಾಬ್ ಅಲ್-ಮಂಡಬ್ ಜಲಸಂಧಿ ಹಾಗೂ ದಕ್ಷಿಣ ಕೆಂಪು ಸಮುದ್ರದ ರಕ್ಷಣೆಯು ಎಲ್ಲ ರಾಷ್ಟ್ರಗಳ ಹಂಚಿಕೆಯ ಜವಾಬ್ದಾರಿಯಾಗಿದ್ದು, ಇದು ಜಾಗತಿಕ ಹಿತಾಸಕ್ತಿಯ ವಿಷಯವಾಗಿದೆ ಎಂದು ಅವರು ಹೇಳಿದರು.

ವಿಶ್ವಸಂಸ್ಥೆಯ ಲೆಬನಾನ್ ಮಧ್ಯಂತರ ಪಡೆ (UNIFIL) ಶಾಂತಿಪಾಲಕರನ್ನು ಯಾವುದೇ ಕಾರಣಕ್ಕೂ ಗುರಿಯಾಗಿಸಬಾರದು ಎಂದು ಒತ್ತಾಯಿಸಿದರು. ಭವಿಷ್ಯದಲ್ಲಿ UNIFIL ನಂತರದ ಪರಿಸ್ಥಿತಿಯನ್ನು ಎದುರಿಸಲು ಲೆಬನಾನ್ ಸಶಸ್ತ್ರ ಪಡೆಗಳಿಗೆ ಅಗತ್ಯ ನೆರವು ಮತ್ತು ಬೆಂಬಲ ನೀಡಬೇಕು ಎಂದೂ ಅವರು ಹೇಳಿದರು.

UNIFIL ನಂತರದ ಪರಿಸ್ಥಿತಿಗೆ ಈಗಿನಿಂದಲೇ ಸಿದ್ಧತೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಲೆಬನಾನ್ ಸಶಸ್ತ್ರ ಪಡೆಗಳಿಗೆ ಅಗತ್ಯ ಸಹಾಯ ಮತ್ತು ಬೆಂಬಲ ಒದಗಿಸಬೇಕು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇರಾಕ್‌ನಲ್ಲಿ ಅಮೆರಿಕ-ಸೌದಿ ಜಂಟಿ ವಾಯುದಾಳಿ: ಇರಾನ್ ಬೆಂಬಲಿತ ಉಗ್ರ ನೆಲೆಗಳು ಧ್ವಂಸ, ಮಧ್ಯಪ್ರಾಚ್ಯ ಮತ್ತೆ ಉದ್ವಿಗ್ನ..!

ರಾಜ್ಯ ಸಚಿವ ಸಂಪುಟ ವಿಸ್ತರಣೆ: ಇಂದೇ ರಾಹುಲ್ ಗಾಂಧಿ ಒಪ್ಪಿಗೆ ಸಾಧ್ಯತೆ, ನಾಳೆ ಸಂಜೆ ನೂತನ ಸಚಿವರ ಪಟ್ಟಾಭಿಷೇಕ..?

ಪಾದಚಾರಿ ಮಾರ್ಗದಲ್ಲಿ Bescom ಅಟಾಟೋಪಕ್ಕೆ ಬ್ರೇಕ್; ಸಚಿವ ಕೃಷ್ಣ ಬೈರೇಗೌಡ ಖಡಕ್ ವಾರ್ನಿಂಗ್..!

ಕರಾವಳಿಯಲ್ಲಿ ವಿಷ ಬಿತ್ತಿದರೆ ಪರಿಣಾಮ ನೆಟ್ಟಗಿರಲ್ಲ, ಅರಬ್ಬಿ ಸಮುದ್ರದ ಮೀನುಗಳಿಗೆ ಆಹಾರವಾಗ್ತೀರಿ: ಪ್ರಕಾಶ್ ರಾಜ್‌ಗೆ ಉಡುಪಿ BJP ಶಾಸಕ ಎಚ್ಚರಿಕೆ..!

ಸುಪ್ರೀಂನ ಮಧ್ಯಂತರ ಆದೇಶ ವಿದ್ಯಾರ್ಥಿಗಳ ವಿರುದ್ಧ ದುರ್ಬಳಕೆಯಾಗುವ ಸಾಧ್ಯತೆ: 'ಕಿರುಕುಳ' ಮುಂದುವರಿದರೆ ಸರಿ ಇರಲ್ಲ- ದೀಪ್ಕೆ ವಾರ್ನಿಂಗ್!