ಸಂಸತ್ ನಲ್ಲಿ ರಾಹುಲ್ ಗಾಂಧಿ 
ದೇಶ

Neet ಪ್ರಶ್ನೆ ಪತ್ರಿಕೆ ಸೋರಿಕೆ: ಅಂಧಭಕ್ತ.. ಈಡಿಯಟ್.. RSS, ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ, ಸಂಸತ್ ನಲ್ಲಿ ಹೈಡ್ರಾಮಾ; Video

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಸಂಬಂಧಿಸಿದ ಹೊಸ ಮಸೂದೆ ಕುರಿತ ಚರ್ಚೆ ವೇಳೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬಳಸಿದ 'ಅಸಂಸದೀಯ ಪದ' ಭಾರೀ ವಿವಾದಕ್ಕೆ ಕಾರಣವಾಯಿತು.

ನವದೆಹಲಿ: Neet ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರ ಸಂಸತ್ ನ ಉಭಯ ಕಲಾಪಗಳಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿದ್ದು, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂದಿ ವಿರುದ್ಧ ಆಡಳಿತ ಪಕ್ಷದ ಸದಸ್ಯರು ಮುಗಿಬಿದ್ದ ಘಟನೆ ನಡೆಯಿತು.

ಹೌದು.. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಸಂಬಂಧಿಸಿದ ಹೊಸ ಮಸೂದೆ ಕುರಿತ ಚರ್ಚೆ ವೇಳೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬಳಸಿದ 'ಅಸಂಸದೀಯ ಪದ' ಭಾರೀ ವಿವಾದಕ್ಕೆ ಕಾರಣವಾಯಿತು. ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪರಿಣಾಮ ಸದನದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಚರ್ಚೆಯಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ, "ವಿದ್ಯಾರ್ಥಿಗಳು ಮತ್ತು ಇತರರು" ಎಂದು ಎರಡು ವರ್ಗಗಳನ್ನು ಉಲ್ಲೇಖಿಸಿದರು.

ಈ ವೇಳೆ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದವನ್ನು ಉಲ್ಲೇಖಿಸಿದ ರಾಹುಲ್, "ಮುಕ್ತ ಮನಸ್ಸಿನಿಂದ ಸತ್ಯವನ್ನು ಹುಡುಕುವವರೇ ನಿಜವಾದ ವಿದ್ಯಾರ್ಥಿಗಳು. ಆದರೆ ಎಲ್ಲವೂ ನಮಗೆ ಗೊತ್ತಿದೆ ಎಂದು ಭಾವಿಸುವ ಇನ್ನೊಂದು ವರ್ಗವಿದೆ" ಎಂದು ಹೇಳಿ, ಆ ವರ್ಗವನ್ನು ಉಲ್ಲೇಖಿಸಲು ಅಸಂಸದೀಯ ಪದವೊಂದನ್ನು ಬಳಸಿದರು.

ಈ ಪದವನ್ನು ಅವರು ಪದೇ ಪದೇ ಬಳಸುತ್ತಿದ್ದಂತೆ ಆಡಳಿತ ಪಕ್ಷದ ಸಂಸದರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಇಡಿಯಟ್-ಅಂಧಭಕ್ತ ಪದ ಬಳಕೆ, ವ್ಯಾಪಕ ಆಕ್ರೋಶ

ಭಾಷಣದ ವೇಳೆ ರಾಹುಲ್ ಗಾಂಧಿ ಅವರು ಬಳಸಿದ "ಇಡಿಯಟ್" ಹಾಗೂ "ಅಂಧಭಕ್ತ" ಪದಗಳು ಸದನದಲ್ಲಿ ಭಾರೀ ಗದ್ದಲಕ್ಕೆ ಕಾರಣವಾದವು.

"ದೇಶದ ಭವಿಷ್ಯ ನಮ್ಮ ಬೀದಿಗಳಲ್ಲಿ ವ್ಯಕ್ತವಾಗಿರುವುದನ್ನು ನೋಡಿ ನನಗೆ ತುಂಬಾ ಉತ್ಸಾಹವಾಯಿತು. ಅದು ಕೋಪವಲ್ಲ, ಹಿಂಸೆಯಲ್ಲ, ದ್ವೇಷವೂ ಅಲ್ಲ. ಅದು ಈ ದೇಶದ ಯುವಜನತೆ ಹಾಗೂ ಮುಂದಿನ ಪೀಳಿಗೆಯ ಆಳವಾದ ಅಭಿವ್ಯಕ್ತಿಯಾಗಿತ್ತು. ಬಿಜೆಪಿ ಸ್ನೇಹಿತರೂ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಈ ಅಭಿವ್ಯಕ್ತಿಯನ್ನು ಗೌರವಿಸಬೇಕು. ಬಿಜೆಪಿ ನಾಯಕರು ತಮ್ಮ ಮಕ್ಕಳನ್ನೇ ಕೇಳಿದರೂ, ವಿದ್ಯಾರ್ಥಿಗಳ ಹೋರಾಟವನ್ನು ಅವರು ಬೆಂಬಲಿಸುತ್ತಾರೆ. ನಡೆದಿರುವುದರಲ್ಲಿ ತಪ್ಪೇನೂ ಇಲ್ಲ. ಪ್ರತಿಯೊಬ್ಬ ಭಾರತೀಯರೂ ಈ ಹೋರಾಟದ ಬಗ್ಗೆ ಹೆಮ್ಮೆಪಡಬೇಕು" ಎಂದು ರಾಹುಲ್ ಗಾಂಧಿ ಹೇಳಿದರು.

ತಮ್ಮ ಭಾಷಣದಲ್ಲಿ ವಿದ್ಯಾರ್ಥಿನಿಯೊಬ್ಬಳೊಂದಿಗೆ ನಡೆದ ಸಂಭಾಷಣೆಯನ್ನು ಉಲ್ಲೇಖಿಸಿದ ರಾಹುಲ್, "ನಾನು ಒಬ್ಬ ವಿದ್ಯಾರ್ಥಿನಿಗೆ 'ವಿದ್ಯಾರ್ಥಿ ಎಂದರೆ ಏನು?' ಎಂದು ಕೇಳಿದೆ. ಅದಕ್ಕೆ ಆಕೆ, 'ತೆರೆದ ಮನಸ್ಸು ಮತ್ತು ತೆರೆದ ಹೃದಯ ಹೊಂದಿರುವವನೇ ವಿದ್ಯಾರ್ಥಿ. ತನಗೆ ಎಲ್ಲವೂ ಗೊತ್ತಿಲ್ಲ ಎಂಬ ವಿನಯ ಅವನಲ್ಲಿರುತ್ತದೆ. ಜ್ಞಾನ ನಿರಂತರವಾಗಿ ಬದಲಾಗುತ್ತದೆ ಎಂಬ ಅರಿವು ಅವನಿಗಿರುತ್ತದೆ. ವಿದ್ಯಾರ್ಥಿಯ ಅತ್ಯಂತ ದೊಡ್ಡ ಗುಣ ವಿನಯ' ಎಂದು ಹೇಳಿದಳು" ಎಂದು ವಿವರಿಸಿದರು.

ಮುಂದುವರಿದು, "ಅದೇ ವಿದ್ಯಾರ್ಥಿನಿ ಮತ್ತೊಂದು ವರ್ಗದವರ ಬಗ್ಗೆ ಹೇಳಿದಳು. ಅವರಿಗೆ ಎಲ್ಲವೂ ಗೊತ್ತಿದೆ ಎಂಬ ಭ್ರಮೆ ಇರುತ್ತದೆ. ವಿಶ್ವ ಬದಲಾಗುವುದಿಲ್ಲ ಎಂದು ಅವರು ನಂಬುತ್ತಾರೆ. ಅವರು ಅಹಂಕಾರಿಗಳು, ಇತರರ ಸತ್ಯವನ್ನು ಕೇಳುವುದಿಲ್ಲ. ಅಂತಹವರನ್ನು ನಾನು 'ಇಡಿಯಟ್' ಎಂದು ಕರೆಯುತ್ತೇನೆ ಎಂದು ಆ ವಿದ್ಯಾರ್ಥಿನಿ ಹೇಳಿದಳು" ಎಂದು ರಾಹುಲ್ ಹೇಳಿದರು. ಈ ಹೇಳಿಕೆ ಹೊರಬೀಳುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಅಂಧಭಕ್ತ ಮತ್ತು ಈಡಿಯಟ್

ರಾಹುಲ್ ಗಾಂಧಿ ತಮ್ಮ ಭಾಷಣ ಮುಂದುವರಿಸಿ, "ಆ ವಿದ್ಯಾರ್ಥಿನಿಗೆ 3ನೇ ವರ್ಗದವರ ಬಗ್ಗೆ ಕೇಳಿದೆ. ಅದಕ್ಕೆ ಆಕೆ, 'ಅಂಧಭಕ್ತ ಎಂದರೆ ಇಡಿಯಟ್‌ ಅನ್ನೇ ದೇವರು ಎಂದು ಸಂಪೂರ್ಣವಾಗಿ ನಂಬುವ ವ್ಯಕ್ತಿ' ಎಂದು ಉತ್ತರಿಸಿದಳು. ಈ ಸಂಪೂರ್ಣ ಚಿಂತನೆ 18 ವರ್ಷದ ವಿದ್ಯಾರ್ಥಿನಿಯದ್ದು. ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆ ಕೇವಲ ಪರೀಕ್ಷೆಗಳ ಕುರಿತದ್ದಲ್ಲ. ಅದು ದೇಶದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಯುವಜನತೆಯಲ್ಲಿರುವ ದೊಡ್ಡ ಕಳವಳವನ್ನು ಪ್ರತಿಬಿಂಬಿಸುತ್ತದೆ" ಎಂದು ರಾಹುಲ್ ಗಾಂಧಿ ಹೇಳಿದರು.

ಸ್ಪೀಕರ್ ಮಧ್ಯಪ್ರವೇಶ, ರಿಜಿಜು ಆಕ್ಷೇಪ

ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ರಾಹುಲ್ ಗಾಂಧಿ ಬಳಸಿದ ಪದಕ್ಕೆ ತಕ್ಷಣ ಆಕ್ಷೇಪ ವ್ಯಕ್ತಪಡಿಸಿ, ಆ ಪದ ಬಳಸದಂತೆ ಸೂಚಿಸಿದರು. ಎನ್‌ಡಿಎ ಸದಸ್ಯರೂ ರಿಜಿಜು ಅವರಿಗೆ ಬೆಂಬಲ ನೀಡಿ ಪ್ರತಿಭಟನೆ ನಡೆಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, "ನಾನು ಈ ಸದನದ ಯಾವುದೇ ಸದಸ್ಯರನ್ನು ಉದ್ದೇಶಿಸಿ ಆ ಪದ ಬಳಸುತ್ತಿಲ್ಲ" ಎಂದು ಸ್ಪಷ್ಟನೆ ನೀಡಿದರೂ, ಆಡಳಿತ ಪಕ್ಷದ ಪ್ರತಿಭಟನೆ ಮುಂದುವರಿಯಿತು.

ಗದ್ದಲದ ನಡುವೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಎದ್ದು ನಿಂತು, ಆ ಪದವನ್ನು ಬಳಸಬಾರದು ಎಂದು ರಾಹುಲ್ ಗಾಂಧಿಗೆ ಮನವಿ ಮಾಡಿದರು.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ವಿಷಯದ ಮೇಲೆ ಮಾತ್ರ ಮಾತನಾಡುವಂತೆ ರಾಹುಲ್ ಗಾಂಧಿಗೆ ಸೂಚಿಸಿದರು.

ಬಳಿಕ ಸ್ಪೀಕರ್, ಅಸಂಸದೀಯ ಪದಗಳನ್ನು ಸದನದ ದಾಖಲೆಗಳಿಂದ ತೆಗೆದುಹಾಕಲಾಗುವುದು ಎಂದು ತಿಳಿಸಿದರು.

ಆರ್‌ಎಸ್‌ಎಸ್ ವಿರುದ್ಧ ರಾಹುಲ್ ವಾಗ್ದಾಳಿ

ಬಳಿಕ ಭಾಷಣ ಮುಂದುವರಿಸಿದ ರಾಹುಲ್ ಗಾಂಧಿ, ಭಾರತದ ಶಿಕ್ಷಣ ವ್ಯವಸ್ಥೆಯನ್ನು ಆರ್‌ಎಸ್‌ಎಸ್ ಹಾಳು ಮಾಡುತ್ತಿದೆ ಎಂದು ಆರೋಪಿಸಿದರು.

"ಶಿಕ್ಷಣ ಸಚಿವಾಲಯವನ್ನು ನಡೆಸುತ್ತಿರುವುದು ಸಚಿವರಲ್ಲ, ಆರ್‌ಎಸ್‌ಎಸ್. ವಿದ್ಯಾರ್ಥಿಗಳು ಜ್ಞಾನ ಮತ್ತು ಸತ್ಯವನ್ನು ಹುಡುಕದಂತೆ ಆರ್‌ಎಸ್‌ಎಸ್ ತಡೆಯುತ್ತಿದೆ. ತಮ್ಮದೇ ಕಲ್ಪನೆಯ ಇತಿಹಾಸವನ್ನು ಓದುವಂತೆ ಒತ್ತಾಯಿಸುತ್ತಿದೆ" ಎಂದು ಅವರು ಆರೋಪಿಸಿದರು.

"ಧರ್ಮೇಂದ್ರ ಪ್ರಧಾನ್ ಕೇವಲ ಒಂದು ಸಂಕೇತ. ವಿದ್ಯಾರ್ಥಿಗಳ ನಿಜವಾದ ಶತ್ರು ಆರ್‌ಎಸ್‌ಎಸ್" ಎಂದು ರಾಹುಲ್ ಗಾಂಧಿ ಹೇಳಿದರು.

ಅಮಿತ್ ಶಾ ವಿರುದ್ಧವೂ ಆರೋಪ

ಜುಲೈ 20ರಂದು ವಿದ್ಯಾರ್ಥಿಗಳ ಪ್ರತಿಭಟನೆ ಮೇಲೆ ನಡೆದ ಪೊಲೀಸ್ ಕ್ರಮವನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, "ವಿದ್ಯಾರ್ಥಿಗಳ ಮೇಲಿನ ದಾಳಿಗೆ ಗೃಹ ಸಚಿವ ಅಮಿತ್ ಶಾ ಆದೇಶ ನೀಡಿದ್ದರು. ಈಗ ಅವರು ಸಂಸತ್ತಿಗೆ ಬಂದು ಈ ವಿಷಯದ ಬಗ್ಗೆ ಮಾತನಾಡುವ ಧೈರ್ಯವನ್ನೂ ಹೊಂದಿಲ್ಲ" ಎಂದು ಆರೋಪಿಸಿದರು.

ಸಾಕ್ಷಿ ಎಲ್ಲಿದೆ? – ರಿಜಿಜು ಪ್ರಶ್ನೆ

ರಾಹುಲ್ ಗಾಂಧಿಯ ಆರೋಪಕ್ಕೆ ಮತ್ತೊಮ್ಮೆ ಆಕ್ಷೇಪ ವ್ಯಕ್ತಪಡಿಸಿದ ಕಿರಣ್ ರಿಜಿಜು, "ಅಮಿತ್ ಶಾ ದಾಳಿ ನಡೆಸಲು ಆದೇಶಿಸಿದ್ದಾರೆ ಎಂಬುದಕ್ಕೆ ನಿಮ್ಮ ಬಳಿ ಯಾವ ಸಾಕ್ಷಿಯಿದೆ? ಪ್ರತಿಪಕ್ಷ ನಾಯಕರು ಯಾವುದೇ ಪುರಾವೆ ಇಲ್ಲದೆ ಇಂತಹ ಗಂಭೀರ ಆರೋಪಗಳನ್ನು ಮಾಡಬಾರದು. ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಕೇಳಬೇಕು" ಎಂದು ಆಗ್ರಹಿಸಿದರು.

ಸ್ಪೀಕರ್‌ ಎಚ್ಚರಿಕೆ

ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ, "ವಿದ್ಯಾರ್ಥಿಗಳ ಮೇಲೆ ಇಷ್ಟೊಂದು ಕ್ರೂರ ಬಲಪ್ರಯೋಗ ಮಾಡಲು ಗೃಹ ಸಚಿವರ ಅನುಮತಿಯೇ ಇರಬೇಕು," ಎಂದು ಪುನರುಚ್ಚರಿಸಿದರು.

ಇದರಿಂದ ಮತ್ತೆ ಆಡಳಿತ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿ ಕ್ಷಮೆಯಾಚನೆಗೆ ಒತ್ತಾಯಿಸಿದರು. ಈ ವೇಳೆ ಸ್ಪೀಕರ್ ಓಂ ಬಿರ್ಲಾ, ಯಾವುದೇ ಸಚಿವರ ವಿರುದ್ಧ ದಾಖಲೆ ಅಥವಾ ಪುರಾವೆ ಇಲ್ಲದೆ ಆರೋಪ ಮಾಡಬಾರದು ಎಂದು ರಾಹುಲ್ ಗಾಂಧಿಗೆ ಮತ್ತೆ ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಪಕ್ಷಗಳ ಗದ್ದಲದ ನಡುವೆ ಸಾರ್ವಜನಿಕ ಪರೀಕ್ಷೆಗಳ ಅಕ್ರಮ ತಡೆ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ!

ಸಂಸತ್ತಿನಲ್ಲಿ ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಚ್ ಕುರಿತು ಮಾತನಾಡಲು ಬಿಜೆಪಿ ಅವಕಾಶ ನೀಡಲಿಲ್ಲ: ಮೈಕ್ ಸ್ವಿಚ್ ಆಫ್ ಆಗಿತ್ತು! ರಾಹುಲ್ ಆರೋಪ

ಕಂಟೆಂಟ್ ಕ್ರಿಯೇಟರ್ ಆಗಲು ₹35 ಲಕ್ಷ ಸಂಬಳದ ಉದ್ಯೋಗ ತೊರೆದ ಟೆಕ್ಕಿ ದಂಪತಿ; ಒಂದೇ ವರ್ಷದಲ್ಲಿ ₹1 ಕೋಟಿಗೂ ಹೆಚ್ಚು ಆದಾಯ!

E20 ಇಂಧನದಿಂದ ವಾಹನಗಳ ಭಾಗಗಳಿಗೆ ಹಾನಿ?: ರಾಜ್ಯಸಭೆಯಲ್ಲಿ ಗಡ್ಕರಿ ಕೊಟ್ರು ಬಿಗ್ ಅಪ್ಡೇಟ್!

ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ಬೆಳೆ ಹಾನಿ ಪರಿಶೀಲನೆ: ರೈತರ ಜಮೀನುಗಳಲ್ಲಿ ಸರ್ವೆಗೆ ಇಲ್ಲಿಯವರೆಗೂ ಯಾವುದೇ ಅಧಿಕಾರಿ ಬಂದಿಲ್ಲ- ಆರ್. ಅಶೋಕ್ ಕಿಡಿ!