ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮ ತಡೆಗೆ ಐಟಿ ದಿಗ್ಗಜ ನಂದನ್ ನಿಲೇಕಣಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ರಚಿಸಿದ ಟಾಸ್ಕ್ ಫೋರ್ಸ್ ಗೆ ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ಅವರನ್ನು ನೇಮಕ ಮಾಡಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕಮಿಟಿ ವಿರುದ್ಧವೇ ಕಾಂಗ್ರೆಸ್ ನಾಯಕರು ಅಪಸ್ವರ ಎತ್ತಿದ್ದಾರೆ.
ಕಾಮಕೋಟಿ ಅವರನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು "ಗೋಮೂತ್ರ ತಜ್ಞ" ಎಂದು ಕಟುವಾಗಿ ಟೀಕಿಸಿದ್ದು, ಇದನ್ನು ಖಂಡಿಸಿ 200ಕ್ಕೂ ಹೆಚ್ಚು ಶಿಕ್ಷಣ ತಜ್ಞರು ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಕುಲಪತಿಗಳು ಮತ್ತು ಮಾಜಿ ಕುಲಪತಿಗಳು ಸೇರಿದಂತೆ ಪತ್ರಕ್ಕೆ 215 ಶಿಕ್ಷಣ ತಜ್ಞರು ಸಹಿ ಹಾಕಿದ್ದು, ಇದನ್ನು ವ್ಯಂಗ್ಯಕ್ಕಾಗಿ ಹೇಳಿರಲಿ ಅಥವಾ ರಾಜಕೀಯ ಭಾಷಣಕ್ಕಾಗಿ ಹೇಳಿರಲಿ ಇಂತಹ ಹೇಳಿಕೆ ಗಂಭೀರ ಕಳವಳಗಳನ್ನು ಹುಟ್ಟುಹಾಕುತ್ತದೆ ಎಂದಿದ್ದಾರೆ.
"ಐಐಟಿ ಮದ್ರಾಸ್ ನಿರ್ದೇಶಕ ಪ್ರೊಫೆಸರ್ ವಿ. ಕಾಮಕೋಟಿ ಅವರನ್ನು 'ಗೋಮೂತ್ರ ತಜ್ಞ' ಎಂದು ಟೀಕಿಸಿರುವ ನಿಮ್ಮ ಹೇಳಿಕೆಯ ಕುರಿತು ನಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಲು ಈ ಪತ್ರ ಬರೆಯುತ್ತಿದ್ದೇವೆ ಎಂದು ಹೇಳಿದ್ದಾರೆ.
ಮೂರು ಪುಟಗಳ ಪತ್ರ ಬರೆದಿರುವ ಶಿಕ್ಷಣ ತಜ್ಞರು, ಪ್ರಿಯಾಂಕಾ ಗಾಂಧಿಯವರನ್ನು ತೀವ್ರ ತರಾಟೆಗೆ ತೆಗದುಕೊಂಡಿದ್ದಾರೆ. ಪ್ರೊಫೆಸರ್ ಕಾಮಕೋಟಿ ಅವರು ಭಾರತದ ಅಗ್ರಗಣ್ಯ ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಗಳಲ್ಲಿ ಒಂದರ ಮುಖ್ಯಸ್ಥರಾಗಿದ್ದಾರೆ" ಎಂದು ತಿಳಿಸಲಾಗಿದೆ.
"ವಿಚಾರಗಳ ಸಾರಾಂಶವನ್ನು ಗ್ರಹಿಸಿ ಚರ್ಚಿಸುವ ಬದಲಿಗೆ ತಜ್ಞರೊಬ್ಬರ ವ್ಯಕ್ತಿತ್ವಕ್ಕೆ ಲೇಬಲ್ ಅಂಟಿಸಿ ಟೀಕಿಸುವುದು ಸರಿಯಲ್ಲ. ನಮ್ಮ ವಿಜ್ಞಾನಿಗಳು, ವಿದ್ವಾಂಸರು ಮತ್ತು ಶಿಕ್ಷಣತಜ್ಞರು ಅಪಹಾಸ್ಯದ ಲೇಬಲ್‌ಗಳಿಗೆ ತುತ್ತಾಗುವ ಭಯವಿಲ್ಲದೇ ಸಾರ್ವಜನಿಕ ಚರ್ಚೆಗಳಲ್ಲಿ ಭಾಗವಹಿಸಬಹುದು ಎಂಬ ಭರವಸೆಗೆ ಅರ್ಹರು” ಎಂದು ಪತ್ರದಲ್ಲಿ ತಿಳಿಸಲಾಗಿದೆ.
215 ವ್ಯಕ್ತಿಗಳು ಸಹಿ ಮಾಡಿರುವ ಈ ಬಹಿರಂಗ ಪತ್ರದಲ್ಲಿ ಪ್ರೊ. ಕಾಮಕೋಟಿ ಅವರ ಶೈಕ್ಷಣಿಕ ಸಾಧನೆಗಳನ್ನು ಎತ್ತಿ ತೋರಿಸಲಾಗಿದೆ. ಪ್ರೊ. ಕಾಮಕೋಟಿ ಭಾರತದ ಪ್ರಮುಖ ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಯಾದ ಐಐಟಿ ಮದ್ರಾಸ್‌ನ ಮುಖ್ಯಸ್ಥರಾಗಿದ್ದಾರೆ. ಅವರು ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ವಿಷಯದಲ್ಲಿ ಐಐಟಿ ಮದ್ರಾಸ್‌ನಿಂದ ಎಂ.ಎಸ್ ಮತ್ತು ಪಿಎಚ್.ಡಿ ಪದವಿ ಪಡೆದಿದ್ದಾರೆ. ಅವರು 150ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದು, 50ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.