ಸಂಗ್ರಹ ಚಿತ್ರ 
ದೇಶ

ಮಧ್ಯಪ್ರಾಚ್ಯ ಸಂಘರ್ಷ: 10 ನಾವಿಕರು ಸೇರಿ 16 ಭಾರತೀಯರ ಸಾವು; ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ

2026ರಲ್ಲಿ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆರಂಭವಾದ ಬಳಿಕ 16 ಭಾರತೀಯರು ಮೃತಪಟ್ಟಿದ್ದು, ಅವರಲ್ಲಿ 10 ಮಂದಿ ನಾವಿಕರಾಗಿದ್ದಾರೆ.

ನವದೆಹಲಿ: ಈ ವರ್ಷ ಮಧ್ಯಪ್ರಾಚ್ಯದಲ್ಲಿ ಆರಂಭವಾದ ಸಂಘರ್ಷದ ಬಳಿಕ ಇದೂವರೆಗೆ 10 ನಾವಿಕರು ಸೇರಿದಂತೆ ಒಟ್ಟು 16 ಭಾರತೀಯರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರ ಗುರುವಾರ ಸಂಸತ್‌ಗೆ ಮಾಹಿತಿ ನೀಡಿದೆ.

ಇದೇ ವೇಳೆ 75 ಭಾರತೀಯರು ಗಾಯಗೊಂಡಿದ್ದು, ಸಾವಿರಾರು ಭಾರತೀಯರಿಗೆ ಅಗತ್ಯ ನೆರವು ಒದಗಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ಮೃತಪಟ್ಟ, ಗಾಯಗೊಂಡ, ಸಿಲುಕಿಕೊಂಡ ಹಾಗೂ ಸ್ಥಳಾಂತರಗೊಂಡ ಭಾರತೀಯರ ಕುರಿತು ವಿವರ ನೀಡಿದರು.

2026ರಲ್ಲಿ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆರಂಭವಾದ ಬಳಿಕ 16 ಭಾರತೀಯರು ಮೃತಪಟ್ಟಿದ್ದು, ಅವರಲ್ಲಿ 10 ಮಂದಿ ನಾವಿಕರಾಗಿದ್ದಾರೆ. ಮೃತರಲ್ಲಿ ಸೌದಿ ಅರೇಬಿಯಾದಲ್ಲಿ ಒಬ್ಬರು, ಕುವೈತ್‌ನಲ್ಲಿ ಇಬ್ಬರು, ಒಮಾನ್‌ನಲ್ಲಿ ಎಂಟು ಮಂದಿ, ಇರಾಕ್‌ನಲ್ಲಿ ಒಬ್ಬರು ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ನಾಲ್ವರು ಸೇರಿದ್ದಾರೆಂದು ಹೇಳಿದರು.

ಇದೇ ಅವಧಿಯಲ್ಲಿ 75 ಭಾರತೀಯರು ಗಾಯಗೊಂಡಿದ್ದಾರೆಂದು ತಿಳಿಸಿದ ಅವರು, ಇವರಲ್ಲಿ ಯುಎಇಯಲ್ಲಿ 32, ಒಮಾನ್‌ನಲ್ಲಿ 24, ಕತಾರ್‌ನಲ್ಲಿ 4, ಕುವೈತ್‌ನಲ್ಲಿ 13, ಸೌದಿ ಅರೇಬಿಯಾದಲ್ಲಿ ಒಬ್ಬರು ಹಾಗೂ ಇಸ್ರೇಲ್‌ನಲ್ಲಿ ಒಬ್ಬರು ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದರ ಹೊರತಾಗಿ, ದಾಳಿಗೆ ಸಂಬಂಧಿಸದ ಪ್ರತ್ಯೇಕ ಅಪಘಾತವೊಂದರಲ್ಲಿ ಕತಾರ್‌ನ ರಾಸ್ ಲಾಫಾನ್ ಅನಿಲ ಘಟಕದಲ್ಲಿ 12 ಭಾರತೀಯರು ಮೃತಪಟ್ಟಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಸಂಘರ್ಷದಲ್ಲಿ ಮೃತಪಟ್ಟ ಭಾರತೀಯರ ಪಾರ್ಥಿವ ಶರೀರವನ್ನು ಶೀಘ್ರವಾಗಿ ಭಾರತಕ್ಕೆ ತರಲು ಆತಿಥೇಯ ರಾಷ್ಟ್ರಗಳ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸಿ ಎಲ್ಲ ರೀತಿಯ ನೆರವು ನೀಡಲಾಗಿದೆ.

ಗಾಯಗೊಂಡ ಭಾರತೀಯರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸಲಾಗಿದೆ. ಭಾರತೀಯ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳು ಸ್ಥಳೀಯ ಆಡಳಿತ ಹಾಗೂ ಆಸ್ಪತ್ರೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಗಾಯಾಳುಗಳ ಆರೋಗ್ಯದ ಮಾಹಿತಿ ಪಡೆಯುವುದು, ಕುಟುಂಬ ಸದಸ್ಯರೊಂದಿಗೆ ಸಂಪರ್ಕ ಕಲ್ಪಿಸುವುದು, ಪ್ರಯಾಣ ವ್ಯವಸ್ಥೆ ಹಾಗೂ ಸುರಕ್ಷಿತವಾಗಿ ಭಾರತಕ್ಕೆ ಮರಳಲು ಅಗತ್ಯ ನೆರವು ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಯುದ್ಧಪೀಡಿತ ಪ್ರದೇಶಗಳಲ್ಲಿ ಮೃತಪಟ್ಟ ನಾವಿಕರ ಕುಟುಂಬಗಳಿಗೆ ಡಿಜಿಎಂಎ ಕಲ್ಯಾಣ ಯೋಜನೆ (Seafarers' Welfare Fund Society) ಅಡಿಯಲ್ಲಿ ರೂ.10 ಲಕ್ಷ ಪರಿಹಾರ ನೀಡಲಾಗುತ್ತಿದೆ. ಅಗತ್ಯ ಪರಿಶೀಲನೆಯ ಬಳಿಕ ಈ ಮೊತ್ತವನ್ನು ಮೃತ ನಾವಿಕರ ಕುಟುಂಬ ಸದಸ್ಯರಿಗೆ ತ್ವರಿತವಾಗಿ ವಿತರಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

ಇದಲ್ಲದೆ, ಸಂಬಂಧಿತ ಕಾರ್ಮಿಕ ಸಂಘಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳ ಪ್ರಕಾರ ಮೆರಿಟೈಮ್ ಯೂನಿಯನ್ ಆಫ್ ಇಂಡಿಯಾ ಸದಸ್ಯರಾಗಿರುವ ಅಧಿಕಾರಿಗಳ ಕುಟುಂಬಗಳಿಗೆ ರೂ.12 ಲಕ್ಷ ಹಾಗೂ ನ್ಯಾಷನಲ್ ಯೂನಿಯನ್ ಆಫ್ ಸೀಫೇರರ್ಸ್ ಆಫ್ ಇಂಡಿಯಾ ವ್ಯಾಪ್ತಿಯ ಸಿಬ್ಬಂದಿಯ ಕುಟುಂಬಗಳಿಗೆ ರೂ.10 ಲಕ್ಷ ಹೆಚ್ಚುವರಿ ಪರಿಹಾರ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, 2026ರ ಫೆಬ್ರವರಿಯಿಂದ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆರಂಭವಾದ ಬಳಿಕ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೂಲಕ ಇರಾನ್‌ನಿಂದ ಅರ್ಮೇನಿಯಾ ಹಾಗೂ ಅಜರ್‌ಬೈಜಾನ್ ಗಡಿಗೆ 2,557 ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ, ಅಲ್ಲಿಂದ ಭಾರತಕ್ಕೆ ಮರಳಲು ನೆರವು ನೀಡಲಾಗಿದೆ ಎಂದು ಹೇಳಿದರು.

ಪ್ರಸ್ತುತ ಇರಾನ್‌ನಲ್ಲಿ ಸುಮಾರು 7,000 ಭಾರತೀಯರು ವಾಸಿಸುತ್ತಿದ್ದಾರೆ ಎಂದು ಸರ್ಕಾರ ಅಂದಾಜಿಸಿದ್ದು, ಇವರಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು, ವೈದ್ಯಕೀಯ ವಿದ್ಯಾರ್ಥಿಗಳು, ಕಾರ್ಮಿಕರು, ನಾವಿಕರು ಹಾಗೂ ಮೀನುಗಾರರು ಸೇರಿದ್ದಾರೆಂದು ತಿಳಿಸಿದೆ.

ಸಂಘರ್ಷದ ಕಾರಣ ಇರಾನ್‌ನಿಂದ ಭಾರತಕ್ಕೆ ಮರಳಬೇಕಾದ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳ ಸಮಸ್ಯೆಯನ್ನು ಇರಾನ್ ಸರ್ಕಾರದ ಗಮನಕ್ಕೆ ತರಲಾಗಿದ್ದು, ಅವರಿಗೆ ಎದುರಾಗಿರುವ ತೊಂದರೆಗಳನ್ನು ನಿವಾರಿಸುವ ಮಾರ್ಗಗಳನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಅಲ್ಲದೆ, ಪರಿಸ್ಥಿತಿ ಸುಧಾರಿಸುವವರೆಗೆ ಭಾರತೀಯರು ಇರಾನ್‌ಗೆ ಪ್ರಯಾಣಿಸುವುದನ್ನು ಮುಂದೂಡಬೇಕು ಎಂದು ಸರ್ಕಾರ ಸಲಹೆ ನೀಡಿದೆ.

ದುಬೈಯಲ್ಲಿದ್ದ ಇರಾನಿಯನ್ ಆಸ್ಪತ್ರೆ ಮುಚ್ಚಿದ ಪರಿಣಾಮ ಉದ್ಯೋಗ ಕಳೆದುಕೊಂಡ 130ಕ್ಕೂ ಹೆಚ್ಚು ಭಾರತೀಯರ, ಅದರಲ್ಲೂ ಹೆಚ್ಚಿನ ಸಂಖ್ಯೆಯ ಕೇರಳ ಮೂಲದ ಆರೋಗ್ಯ ಸಿಬ್ಬಂದಿಯ ಸಮಸ್ಯೆಯನ್ನೂ ಸರ್ಕಾರ ಪ್ರಸ್ತಾಪಿಸಿದೆ.

ಈ ಕುರಿತು ಭಾರತೀಯ ರಾಯಭಾರ ಕಚೇರಿ ಸಂತ್ರಸ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಎಲ್ಲ ರೀತಿಯ ನೆರವು ನೀಡುತ್ತಿದೆ. ಈ ವಿಷಯವನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಯುಎಇ ಅಧಿಕಾರಿಗಳ ಮುಂದೆಯೂ ಪ್ರಸ್ತಾಪಿಸಲಾಗಿದೆ. ಆದರೆ, ವೀಸಾ ನೀಡುವ ಅಥವಾ ನಿರ್ಬಂಧಿಸುವ ಅಧಿಕಾರವು ಆಯಾ ದೇಶಗಳ ಸಾರ್ವಭೌಮ ಹಕ್ಕಿನ ವ್ಯಾಪ್ತಿಗೆ ಬರುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಕೀರ್ತಿ ವರ್ಧನ್ ಸಿಂಗ್, 'ಆಪರೇಷನ್ ಚೆಕ್‌ಮೇಟ್' ವೇಳೆ ಅಮೆರಿಕದ ಗಡಿ ಭದ್ರತಾ ಅಧಿಕಾರಿಗಳು 52 ಮಂದಿಯನ್ನು ಬಂಧಿಸಿದ್ದು, ಅವರಲ್ಲಿ 30 ಮಂದಿ ಭಾರತೀಯರು ಎಂದು ಅಮೆರಿಕದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (CBP) ತಿಳಿಸಿದೆ ಎಂದು ಹೇಳಿದರು.

ಮೇ 11ರಿಂದ 15ರವರೆಗೆ ಅರಿಜೋನಾ ರಾಜ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಂಧಿತರಲ್ಲಿ 36 ಮಂದಿ ಭಾರೀ ಸರಕು ಸಾಗಣೆ ಲಾರಿಗಳ ಚಾಲಕರಾಗಿದ್ದರು. ಬಂಧಿತರನ್ನು ಅಮೆರಿಕದ ಕಾನೂನು ಪ್ರಕಾರ ಪ್ರಕ್ರಿಯೆಗೊಳಿಸಿ ಭಾರತಕ್ಕೆ ಗಡಿಪಾರು ಮಾಡಲಾಗುವುದು ಎಂದು ಅಮೆರಿಕ ತಿಳಿಸಿದೆ.

ಈ ಕಾರ್ಯಾಚರಣೆ ಬಗ್ಗೆ ಭಾರತ ಸರ್ಕಾರಕ್ಕೆ ಮುಂಚಿತ ಮಾಹಿತಿ ಇರಲಿಲ್ಲ. ಆದರೆ, ಬಂಧನದ ವರದಿಗಳು ಪ್ರಕಟವಾದ ತಕ್ಷಣ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಮೆರಿಕದ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಬಂಧಿತರ ಹೆಸರು ಹಾಗೂ ಇತರ ವಿವರಗಳನ್ನು ಕೋರಿದೆ. ಅವರ ಗುರುತು ಮತ್ತು ಸಂಪೂರ್ಣ ಮಾಹಿತಿಗಾಗಿ ಭಾರತ ಸರ್ಕಾರ ಇನ್ನೂ ಅಮೆರಿಕದ ದೃಢೀಕರಣದ ನಿರೀಕ್ಷೆಯಲ್ಲಿದೆ ಎಂದು ಸಚಿವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಹಾರಾಷ್ಟ್ರ: ಭಿವಂಡಿಯಲ್ಲಿ ವಸತಿ ಕಟ್ಟಡ ಕುಸಿದು 6 ಸಾವು; ಅವಶೇಷಗಳ ಅಡಿಯಲ್ಲಿ 7 ಮಂದಿ ಸಿಲುಕಿರುವ ಶಂಕೆ

Iranಗೆ ಬೆಂಬಲ ಆರೋಪ: ಭಾರತದ ಕಂಪನಿ ಸೇರಿ 6 ಸಂಸ್ಥೆಗಳ ವಿರುದ್ಧ ಅಮೆರಿಕಾ ಕಠಿಣ ಕ್ರಮ, China-Russia ಸಂಸ್ಥೆಗಳೂ Black listಗೆ..!

ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್: ಸೋಮವಾರ ಸಂಜೆ ಪ್ರಮಾಣವಚನ ಸಾಧ್ಯತೆ, 18 ಸಚಿವರ ಸೇರ್ಪಡೆ ನಿರೀಕ್ಷೆ..!

ಪ್ರಶ್ನೆಪತ್ರಿಗೆ ಲೀಕ್ ದಂಧೆಗೆ ಬಿತ್ತು ಬ್ರೇಕ್: 'ಮಕ್ಕಳ ಭವಿಷ್ಯದ ಜೊತೆ ಆಟವಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ': ಸೆಲ್ಫೀ ವಿಡಿಯೋ ಮೂಲಕ ಪ್ರಧಾನಿ ಮೋದಿ ಖಡಕ್ ಎಚ್ಚರಿಕೆ..!

ಅಂತ್ಯದತ್ತ ಸಾಗಿದ ಇಸ್ರೇಲ್-ಹಮಾಸ್ ಯುದ್ಧ: 14 ದಿನಗಳಲ್ಲಿ ಶಸ್ತ್ರಾಸ್ತ್ರ ಹಸ್ತಾಂತರಕ್ಕೆ ಹಮಾಸ್ ಒಪ್ಪಿಗೆ, ಶಾಂತಿ ಒಪ್ಪಂದ ಘೋಷಿಸಿದ ಟ್ರಂಪ್..!