ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಸೋಮವಾರ ತನ್ನ ಇಬ್ಬರು ಶಾಸಕರಾದ ಸಂದೀಪನ್ ಸಹಾ ಮತ್ತು ಋತಬ್ರತ ಬ್ಯಾನರ್ಜಿ ಅವರನ್ನು ಪಕ್ಷ ವಿರೋಧಿ ಚಟುವಟಿ ನಡೆಸಿದ ಆರೋಪದ ಮೇಲೆ ಉಚ್ಚಾಟಿಸಿದೆ.
ರಾಜ್ಯ ವಿಧಾನಸಭೆಯಲ್ಲಿ 'ನಕಲಿ ಸಹಿ' ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ದೂರುಗಳನ್ನು ದಾಖಲಿಸಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಕೆಲವೇ ನಿಮಿಷಗಳಲ್ಲಿ ಈ ಉಚ್ಚಾಟನೆ ಆದೇಶ ಹೊರಬಿದ್ದಿದೆ.
ರಾಜ್ಯ ವಿಧಾನಸಭೆಯಲ್ಲಿ ಸೋಭಂದೇಬ್ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಟಿಎಂಸಿ ಅನುಮೋದಿಸಿದೆ.
ಉಚ್ಚಾಟನೆಯ ಹಿಂದಿನ ಕಾರಣಗಳು
"ಪಕ್ಷದ ಅಧಿಕೃತ ನಾಯಕತ್ವ ಕರೆದ ಸಭೆಗಳಿಗೆ ನೀವು ಪದೇ ಪದೇ ಹಾಜರಾಗಲು ವಿಫಲರಾಗಿದ್ದೀರಿ ಮತ್ತು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೀರಿ ಎಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ತನ್ನ ಸಕ್ಷಮ ಪ್ರಾಧಿಕಾರದ ಮೂಲಕ ಗಮನಕ್ಕೆ ತರಲಾಗಿದೆ" ಎಂದು ಇಬ್ಬರು ಶಾಸಕರಿಗೆ ತಿಳಿಸಲಾಗಿದೆ.
"ನೀವು AITC ಯ ಹಿತಾಸಕ್ತಿಗಳಿಗೆ ಹಾನಿಕರವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೀರಿ ಮತ್ತು ಹೇಳಿಕೆಗಳನ್ನು ನೀಡಿದ್ದೀರಿ ಎಂದು ಗಮನಿಸಲಾಗಿದೆ. ಹೀಗಾಗಿ ನಿಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಉಚ್ಚಾಟಿಸಲು ನಿರ್ಧರಿಸಲಾಗಿದೆ" ಎಂದು ಪಕ್ಷದ ಉಪಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ಅವರು ಸಹಿ ಮಾಡಿದ ಆದೇಶದಲ್ಲಿ ತಿಳಿಸಲಾಗಿದೆ.