ನವದೆಹಲಿ: ದಕ್ಷಿಣ ದೆಹಲಿಯ ಮಾಲ್ವಿಯಾ ನಗರದಲ್ಲಿ ಬುಧವಾರ ಕನಿಷ್ಠ 21 ಜನರ ಸಾವಿಗೆ ಕಾರಣವಾದ ಹೋಟೆಲ್ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಶಿಕ್ಷಾರ್ಹ ನರಹತ್ಯೆ (culpable homicide) ಆರೋಪದಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ದೆಹಲಿ ಪ್ರದೇಶದ ಐದು ಅಂತಸ್ತಿನ ಕಟ್ಟಡವಾದ ಫ್ಲೋರಿಷ್ ಸ್ಟೇ ಬೆಡ್-ಅಂಡ್ ಬ್ರೇಕ್‌ಫಾಸ್ಟ್ ಹೋಟೆಲ್‌ನಲ್ಲಿ ಬುಧವಾರ ಮುಂಜಾನೆ ಭಾರಿ ಬೆಂಕಿ ಕಾಣಿಸಿಕೊಂಡಿದೆ.
ಮೃತರಲ್ಲಿ ಹಲವರು ವಿದೇಶಿ ಪ್ರಜೆಗಳು. ಹಲವಾರು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ವಿದೇಶಿಯರು ಮುಖ್ಯವಾಗಿ ಮಧ್ಯ ಏಷ್ಯಾ ಮತ್ತು ಆಫ್ರಿಕನ್ ದೇಶಗಳಿಂದ ಬಂದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕನಿಷ್ಠ 26 ಜನರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಮಾಲ್ವಿಯಾ ನಗರದ ಜನದಟ್ಟಣೆಯಿಂದ ಕೂಡಿರುವ ಹೌಜ್ ರಾಣಿ ಪ್ರದೇಶದಲ್ಲಿರುವ ಫ್ಲೋರಿಶ್ ಸ್ಟೇ ಬಿ & ಬಿ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಇದಕ್ಕೂ ಮೊದಲು, ಹತ್ತಿರದ ಲೆಮನ್ ಗ್ರೀನ್ ರೆಸ್ಟೋರೆಂಟ್‌ನಲ್ಲಿ ಬೆಳಿಗ್ಗೆ 8.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ನಂತರ ಪೊಲೀಸರು ಹೋಟೆಲ್ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿತು ಎಂದು ಸ್ಪಷ್ಟಪಡಿಸಿದರು.
ಅಗ್ನಿಶಾಮಕ ಅಧಿಕಾರಿ ಎಕೆ ಮಲಿಕ್ ಅವರ ಪ್ರಕಾರ, ಕಟ್ಟಡವು ನೆಲಮಾಳಿಗೆ, ನೆಲ ಮಹಡಿ ಮತ್ತು ಐದು ಮೇಲಿನ ಮಹಡಿಗಳನ್ನು ಹೊಂದಿದೆ. ರೆಸ್ಟೋರೆಂಟ್ ಅನ್ನು ನೆಲ ಮಹಡಿಯಲ್ಲಿ ನಡೆಸಲಾಗುತ್ತಿತ್ತು, ಉಳಿದ ಕಟ್ಟಡವನ್ನು ಹೋಟೆಲ್ ಆಗಿ ಬಳಸಲಾಗುತ್ತಿತ್ತು.
ಪೊಲೀಸ್ ಮೂಲಗಳ ಪ್ರಕಾರ, ಹೋಟೆಲ್‌ಗೆ ಒಂದೇ ಒಂದು ಪ್ರವೇಶ-ನಿರ್ಗಮನ ದ್ವಾರವಿತ್ತು. ಅಧಿಕಾರಿಗಳು ಕಟ್ಟಡಕ್ಕೆ ನೀಡಲಾದ ಅಗ್ನಿಶಾಮಕ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (ಎನ್‌ಒಸಿ) ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ.