ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು ತಮ್ಮ ಮೇಲೆ ಅಂಟಿಕೊಂಡಿರುವ ದೇಶಬಿಟ್ಟು 'ಪರಾರಿ' ಹಣೆಪಟ್ಟಿಯನ್ನು ತಿರಸ್ಕರಿಸಿದ್ದಾರೆ. ನಾನೆಲ್ಲಿಗೂ ಓಡಿ ಹೋಗಿಲ್ಲ ಮತ್ತು ಮತ್ತು ಓಡಿದರೆ ಭಾರತ ಸರ್ಕಾರಕ್ಕೆ 'ಉದ್ದನೆಯ ತೋಳು' ಇದೆ ಎಂದಿದ್ದಾರೆ.
2010ರಲ್ಲಿ ಭಾರತವನ್ನು ತೊರೆದ ಮೋದಿ, ಸುದ್ದಿಸಂಸ್ಥೆ ANIಗೆ ನೀಡಿದ ಸಂದರ್ಶನದಲ್ಲಿ, 'ನಾನು ಎಂದಿಗೂ ಓಡಿ ಹೋಗುವುದಿಲ್ಲ. ಭಾರತ ಸರ್ಕಾರಕ್ಕೆ ಉದ್ದವಾದ ತೋಳಿದೆ. ಅವರು ಬಯಸಿದರೆ, ಅವರು ಬಹಳ ಹಿಂದೆಯೇ ನನ್ನನ್ನು ವಶಕ್ಕೆ ಪಡೆಯಬಹುದಿತ್ತು' ಎಂದು ಹೇಳಿದರು.
ಭಾರತದಂತಹ ಜಾಗತಿಕ ಸೂಪರ್ ಪವರ್‌ನಿಂದ ತಪ್ಪಿಸಿಕೊಂಡು ಜಗತ್ತನ್ನು ಸುತ್ತುವುದು ಅಸಾಧ್ಯ. ನಾನು ಎಲ್ಲಿಗೂ ಓಡಿ ಹೋಗಿಲ್ಲ. ನಾನು ಪ್ರಪಂಚದಾದ್ಯಂತ ಪ್ರಯಾಣ ಮಾಡುತ್ತಿದ್ದೇನೆ. ನಾನು ಓಡಿ ಹೋಗಿದ್ದರೆ, ನೀವು ಎಲ್ಲೋ ಒಂದು ಕಡೆ ನನ್ನನ್ನು ಹಿಡಿಯಬಹುದಿತ್ತು. ಆದರೆ, ಈ ಕೆಲಸ ಸರ್ಕಾರವಲ್ಲ, ಮಾಧ್ಯಮದ್ದು' ಎಂದು ಅವರು ಹೇಳಿದರು.
ದೇಶದಿಂದ ಪರಾರಿ ಎಂಬ ಹಣೆಪಟ್ಟಿಯನ್ನು ಔಪಚಾರಿಕವಾಗಿ ತೆರವುಗೊಳಿಸಲು ಭಾರತಕ್ಕೆ ಮರಳಲು ಯೋಜಿಸುತ್ತಿದ್ದೀರಾ ಎಂದು ಕೇಳಿದಾಗ, ನನ್ನ ಆದ್ಯತೆಗಳು ಈಗ ಬದಲಾಗಿವೆ. ಯಾವುದೋ ಒಂದು ಅಂಶವನ್ನು ಸಾಬೀತುಪಡಿಸಲು ಬಯಸುವ ಬಯಕೆ ಈಗ ನನ್ನಲ್ಲಿಲ್ಲ. ನನ್ನನ್ನು ಒಂಟಿಯಾಗಿ ಮಾಡಲಾಗಿದೆ ಮತ್ತು ಅವರ ವಿರುದ್ಧದ ಪ್ರಕರಣಗಳು 'ರಾಜಕೀಯ ಪ್ರೇರಿತ ಎಂದು ಭಾರತದಲ್ಲಿ ಆರ್ಥಿಕ ಅಕ್ರಮಗಳು ಮತ್ತು ಹಣ ವರ್ಗಾವಣೆ ಆರೋಪಗಳನ್ನು ಎದುರಿಸುತ್ತಿರುವ ಮೋದಿ ಹೇಳಿದರು.
ಮಾಜಿ ಐಪಿಎಲ್ ಅಧ್ಯಕ್ಷರು ತಮ್ಮ ರ್ಯಾಲಿಗಳು ಮತ್ತು ಸಂಸತ್ತಿನ ಭಾಷಣಗಳಲ್ಲಿ ನಿರಂತರವಾಗಿ ತಮ್ಮನ್ನು ಗುರಿಯಾಗಿಸಿಕೊಂಡಿದ್ದಕ್ಕಾಗಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿದ ಮೋದಿ, 'ಪ್ರತಿ ಬಾರಿ ಚುನಾವಣೆ ಬಂದಾಗಲೂ ಅವರು ನನ್ನ ಮೇಲೆ ದಾಳಿ ಮಾಡುತ್ತಾರೆ. ನಾನು ಕ್ರಿಕೆಟ್‌ನೊಂದಿಗೆ ಸಂಬಂಧ ಹೊಂದಿದ್ದೇನೆ ಮತ್ತು ಕ್ರಿಕೆಟ್ ಭಾವನೆಗಳನ್ನು ಹುಟ್ಟುಹಾಕುತ್ತದೆ ಎಂದು ಸಾರ್ವಜನಿಕ ಭಾವನೆಗಳನ್ನು ಕೆರಳಿಸಲು ಅವರು ನನ್ನ ಹೆಸರನ್ನು ಬಳಸುತ್ತಾರೆ' ಎಂದು ದೂರಿದರು.
2009ರ ಐಪಿಎಲ್ ಅನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸುವುದರ ಹಿಂದಿನ ದೊಡ್ಡ ನಾಟಕವನ್ನು ವಿವರಿಸುತ್ತಾ, ಆಗಿನ ಗೃಹ ಸಚಿವ ಪಿ ಚಿದಂಬರಂ ನನಗೆ 'ಬೆದರಿಕೆ' ಹಾಕಿದರು ಮತ್ತು ಉದ್ದೇಶಪೂರ್ವಕವಾಗಿ ಪಂದ್ಯಾವಳಿಯನ್ನು ತಡೆದರು ಎಂದು ಆರೋಪಿಸಿದರು.
'ಚಿದಂಬರಂ ನನಗೆ ಬೆದರಿಕೆ ಹಾಕಿದರು. ನಾನು ಅದನ್ನು ಮಾಡುವುದನ್ನು (ಐಪಿಎಲ್ ಪಂದ್ಯಾವಳಿಯನ್ನು ನಡೆಸುವುದು) ಅವರು ಬಯಸಲಿಲ್ಲ. ರಾಜ್ಯಗಳಲ್ಲಿನ ಬಿಜೆಪಿ ಸರ್ಕಾರಗಳು ನನಗೆ ಪಂದ್ಯಗಳನ್ನು ನಡೆಸಲು ಅನುಮತಿ ನೀಡಿತು. ಆದರೆ, ಕಾಂಗ್ರೆಸ್ ರಾಜ್ಯ ಸರ್ಕಾರಗಳು ಅನುಮತಿ ನಿರಾಕರಿಸಿದವು' ಎಂದರು.
ಟೂರ್ನಮೆಂಟ್ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಗೊಳ್ಳುವ ಮೊದಲು ನಾವು 154 ಬಾರಿ ವೇಳಾಪಟ್ಟಿಯನ್ನು ಬದಲಿಸಿದ್ದೇವೆ. ಮತ್ತು ನಂತರ ಅಂತಿಮವಾಗಿ, ಚಿದಂಬರಂ ಅವರಿಂದ ಆದೇಶ ಬಂದಿತು. ಅವರು ಗೃಹ ಸಚಿವರಾಗಿದ್ದರು. ಅವರು ಸರ್ವಶಕ್ತರಾಗಿದ್ದರು ಎಂದು ಹೇಳಿದರು.
ಲಲಿತ್ ಮೋದಿ ಮತ್ತು ವಿಜಯ್ ಮಲ್ಯ ಸೇರಿದಂತೆ ಆರ್ಥಿಕ ಅಪರಾಧ ಎಸಗಿ ದೇಶದಿಂದ ಪರಾರಿಯಾಗಿರುವ ಆರೋಪಿಗಳನ್ನು ದೇಶದಲ್ಲಿ ಕಾನೂನು ಕ್ರಮ ಜರುಗಿಸಲು ಮರಳಿ ಕರೆತರಲು ಬದ್ಧವಾಗಿದೆ ಎಂದು ಭಾರತ ಸರ್ಕಾರ ಪದೇ ಪದೆ ಹೇಳಿದೆ.
ಲಂಡನ್‌ನಲ್ಲಿ ನಡೆದ ವಿಜಯ್ ಮಲ್ಯ ಅವರ 70ನೇ ಹುಟ್ಟುಹಬ್ಬದ ಪಾರ್ಟಿಯ ವಿಡಿಯೋವನ್ನು ಪೋಸ್ಟ್ ಮಾಡುವ ಮೂಲಕ ಮೋದಿ ವಿವಾದ ಹುಟ್ಟುಹಾಕಿದ್ದರು. ಅದರಲ್ಲಿ ಅವರು ತಮ್ಮನ್ನು ಮತ್ತು ಮಲ್ಯ ಅವರನ್ನು 'ಭಾರತದಿಂದ ಪರಾರಿಯಾದ ಇಬ್ಬರು' ಎಂದು ಕರೆದಿದ್ದರು. ವಿವಾದಕ್ಕೆ ಕಾರಣವಾದ ನಂತರ ಅವರು ಕ್ಷಮೆಯಾಚಿಸಿದರು. ತಮ್ಮ ಹೇಳಿಕೆಯನ್ನು 'ತಪ್ಪಾಗಿ ಅರ್ಥೈಸಲಾಗಿದೆ' ಎಂದು ಹೇಳಿದರು.